Traffic Fine Rebate: ಟ್ರಾಫಿಕ್ ರೂಲ್ಸ್ ದಂಡ ಪಾವತಿಗೆ ರಿಯಾಯಿತಿ; 12 ಕೋಟಿ ರೂ. ಸಂಗ್ರಹ

|

Updated on: Mar 20, 2023 | 4:39 PM

ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ (Traffic Fine) ಉಳಿಸಿಕೊಂಡಿರುವ ವಾಹನ ಸವಾರರಿಗೆ ಶೇ 50ರ ರಿಯಾಯಿತಿಯಲ್ಲಿ ದಂಡ ಪಾವತಿಸಲು ರಾಜ್ಯ ಸರ್ಕಾರ ನೀಡಿದ್ದ ಎರಡನೇ ಹಂತದ ಅವಕಾಶ ಕಳೆದ ವಾರ ಮುಕ್ತಾಯಗೊಂಡಿತ್ತು. ಈ ಬಾರಿ ಒಟ್ಟು 12 ಕೋಟಿ ರೂ. ದಂಡ ಸಂಗ್ರಹವಾಗಿದೆ.

Traffic Fine Rebate: ಟ್ರಾಫಿಕ್ ರೂಲ್ಸ್ ದಂಡ ಪಾವತಿಗೆ ರಿಯಾಯಿತಿ; 12 ಕೋಟಿ ರೂ. ಸಂಗ್ರಹ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ (Traffic Fine) ಉಳಿಸಿಕೊಂಡಿರುವ ವಾಹನ ಸವಾರರಿಗೆ ಶೇ 50ರ ರಿಯಾಯಿತಿಯಲ್ಲಿ ದಂಡ ಪಾವತಿಸಲು ರಾಜ್ಯ ಸರ್ಕಾರ ನೀಡಿದ್ದ ಎರಡನೇ ಹಂತದ ಅವಕಾಶ ಕಳೆದ ವಾರ ಮುಕ್ತಾಯಗೊಂಡಿತ್ತು. ಈ ಬಾರಿ ಒಟ್ಟು 12 ಕೋಟಿ ರೂ. ದಂಡ ಸಂಗ್ರಹವಾಗಿದೆ. ಮಾರ್ಚ್ 18ರ ರಾತ್ರಿ 9 ಗಂಟೆಯವರೆಗಿನ ಲೆಕ್ಕಾಚಾರದ ಪ್ರಕಾರ, 12,31,32,060 ರೂ. ದಂಡ ಸಂಗ್ರಹಿಸಲಾಗಿದೆ. 4,25,091 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಈ ದಂಡ ಸಂಗ್ರಹಿಸಲಾಗಿದೆ. ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಮಾರ್ಚ್​ 4ರಿಂದ ಮಾರ್ಚ್ 18ರ ವರೆಗೆ ಕಾಲಾವಕಾಶ ನೀಡಲಾಗಿತ್ತು. 11-02-2023ರ ಒಳಗಾಗಿ ಅನ್ವಯವಾಗುವ ಪ್ರಕರಣಗಳಿಗೆ ಮಾತ್ರ ಒಂದು ಬಾರಿಯ ಕ್ರಮವಾಗಿ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್​ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ 50ರ ರಿಯಾಯಿತಿ ನೀಡಿ ಮಾರ್ಚ್ 3ರಂದು ಸರ್ಕಾರ ಆದೇಶ ಹೊರಡಿಸಿತ್ತು.

ಈ ಹಿಂದೆ ಕೂಡ 15 ದಿನಗಳ ಕಾಲ ಶೇ 50ರ ರಿಯಾಯಿತಿಯಲ್ಲಿ ದಂಡ ಪಾವತಿಗೆ ಅವಕಾಶ ನೀಡಲಾಗಿತ್ತು. ಅದಕ್ಕೆ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೋಟ್ಯಂತರ ರೂಪಾಯಿ ದಂಡ ಸಂಗ್ರಹವಾಗಿತ್ತು. ಆನ್​​ಲೈನ್​, ಆಫ್​​ಲೈನ್ ಮೂಲಕ ಜನ ದಂಡ ಪಾವತಿಸಿದ್ದರು. ಸಂಚಾರಿ ಪೊಲೀಸರ ಬಳಿಗೆ ತೆರಳಿ ದಂಡ ಪಾವತಿಸಿದವರ ಸಂಖ್ಯೆಯೂ ಹೆಚ್ಚಿತ್ತು. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಜನ ಸಂಚಾರ ಪೊಲೀಸರ ಬಳಿ ತೆರಳಿ ಸರದಿಯಲ್ಲಿ ನಿಂತು ದಂಡ ಕಟ್ಟುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಇನ್ನೂ ಕೆಲವು ದಿನಗಳ ಕಾಲಾವಕಾಶ ನೀಡಬೇಕು ಎಂಬ ಬೇಡಿಕೆಗಳು ವ್ಯಕ್ತವಾಗಿದ್ದವು. ಹೀಗಾಗಿ ಮಾರ್ಚ್​ 4ರಿಂದ ಮತ್ತೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ