ಬೆಂಗಳೂರು: ಟಿವಿ9 ನೆಟ್ವರ್ಕ್ ನವನಕ್ಷತ್ರ ಸನ್ಮಾನ 2021 ಕಾರ್ಯಕ್ರಮದಲ್ಲಿ ಟಿವಿ9 ಕರ್ನಾಟಕ ವ್ಯವಸ್ಥಾಪಕ ಸಂಪಾದಕ ಆರ್. ಶ್ರೀಧರನ್ ಅವರು ನವ ಸಾಧಕರು ಮತ್ತು ಆಹ್ವಾನಿತ ಗಣ್ಯರನ್ನು ಸ್ವಾಗತಿಸುತ್ತಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಧರನ್ ಅವರು ಟಿವಿ9 ನವನಕ್ಷತ್ರ ಕಾರ್ಯಕ್ರಮವು ವಾರ್ಷಿಕ ಸಮಾರಂಭವಾಗಿ ಪರಿವರ್ತನೆಗೊಂಡಿದೆ. ಇದು ಕನ್ನಡ ನಾಡಿನ ನವ ಸಾಧಕರ ಸಾಧನೆಯನ್ನು ಗುರುತಿಸಿ, ಗೌರವಿಸುವ ಮಹತ್ತರ ಕಾರ್ಯಕ್ರಮವಾಗಿದೆ. ಇದು ಅಂತಹ ಅದ್ವಿತೀಯ ಸಾಧಕರಿಗೆ ಸಮರ್ಪಿತವಾಗಿದೆ. ಆ 9 ಸಾಧಕರ ಸನ್ಮಾನಕ್ಕಾಗಿ ನಿಮ್ಮನ್ನೆಲ್ಲಾ ಗೌರವಿಸಲು ನನಗೆ ಅತೀವ ಆನಂದವಾಗುತ್ತಿದೆ ಎಂದು ಹೇಳಿದರು.
ಕನ್ನಡ ನಾಡಿನ ಮುಂಚೂಣಿ ಸುದ್ದಿ ಚಾನೆಲ್ ಆಗಿ ಟಿವಿ9 ವಿಶೇಷ ಜವಾಬ್ದಾರಿ ಮತ್ತು ಕಾಳಜಿಯಿಂದ ಕಾರ್ಯನಿರ್ವಹಿಸುತ್ತದೆ. ಟಿವಿ9 ಕೇವಲ ಸುದ್ದಿಯನ್ನು ಪ್ರಸ್ತುತ ಪಡಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಧ್ವನಿ ಇಲ್ಲದವರ ಧ್ವನಿಯಾಗಿ, ದುರ್ಬಲರ ದನಿಯಾಗಿ, ಹತಾಶ ಜನರ ಆಶಾಕಿರಣವಾಗಿ ಕೆಲಸ ಮಾಡಲು ನಾವು ಸರ್ವಪ್ರಯತ್ನ ಮಾಡುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ಪ್ರಗತಿ ಪಥದಲ್ಲಿ ದಾಪುಗಾಲು ಹಾಕುವ ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಾವು ಇಂಬುಕೊಡುತ್ತೇವೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವ ಸಮಾಜ, ತನ್ಮೂಲಕ ರಾಷ್ಟ್ರದ ಅಭಿವೃದ್ಧಿ ಮತ್ತು ಶ್ರೇಯಸ್ಸಿಗಾಗಿ ಕೈಜೋಡಿಸುವ ಸಮಾಜದ ನಿರ್ಮಾಣಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ ಎಂದು ನುಡಿದರು.
ಈ ವರ್ಷ ಟಿವಿ 9 ಕನ್ನಡಗೆ 15ರ ವಸಂತ. ಒಂದು ಸುದ್ದಿ ಚಾನೆಲ್ ಆಗಿ ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ. ಆದರೆ ನಾವಿನ್ನೂ ಅಗಾಧವಾದುದನ್ನು ಸಾಧಿಸಬೇಕಿದೆ. ಇದೀಗ ದೇಶದ ಅತಿ ದೊಡ್ಡ ನ್ಯೂಸ್ ನೆಟ್ವರ್ಕ್ ಆಗಿ ಮತ್ತು ಕ್ಷಿಪ್ರವಾಗಿ ಬೆಳೆಯುತ್ತಿರುವ ಡಿಜಿಟಲ್ ವೇದಿಕೆಯಾಗಿ ನಾವು ಇನ್ನೂ ಹೆಚ್ಚಿನದನ್ನು ಸಾಧಿಸುವ ಅವಕಾಶ ಹೊಂದಿದ್ದೇವೆ. ಇಂದು ಇಡೀ ವಿಶ್ವ, ಅಂತ್ಯವಿಲ್ಲದ ಸಾಂಕ್ರಾಮಿಕ ಪಿಡುಗೊಂದನ್ನು ಎದುರಿಸುತ್ತಿದೆ. ಈ ಆತಂಕದ, ಅನಿಶ್ಚಿತತೆಯ ಸನ್ನಿವೇಶದಲ್ಲಿ ಟಿವಿ9 ಕನ್ನಡ ತನ್ನ ವೀಕ್ಷಕರಿಗಾಗಿ ನಂಬಿಕಾರ್ಹ, ಅಧಿಕಾರಯುತ, ನಿಖರ ಸುದ್ದಿಯನ್ನು ಸಾದರ ಪಡಿಸಲು ಕಟಿಬದ್ಧವಾಗಿದೆ ಎಂದು ಭರವಸೆಯ ಮಾತುಗಳನ್ನಾಡಿದರು.
ಟಿವಿ 9 ಕನ್ನಡ ಚಾನೆಲ್ನಲ್ಲಿ ನನ್ನ ಸಹೋದ್ಯೋಗಿಗಳು ಮತ್ತು ನಾನು ಪ್ರತಿ ದಿನ ಕಠಿಣ ಪರಿಶ್ರಮ ಹಾಕಿ ಕೆಲಸ ಮಾಡಲು ಸಿದ್ಧರಿದ್ದೇವೆ. ಕರ್ನಾಟಕದ ಜನತೆಯ ನಂಬುಗೆ ಮತ್ತು ಆತ್ಮೀಯತೆಯನ್ನು ಗಳಿಸಿ, ಉಳಿಸಿಕೊಳ್ಳುವ ಇಟ್ಟಿನಲ್ಲಿ ನಾವು ಪ್ರತಿ ಕ್ಷಣ ಶ್ರಮ ಹಾಕುತ್ತೇವೆ. ನಾವು ನಮ್ಮ ವೀಕ್ಷಕರನ್ನುಸದಾ ಮುಂಚೂಣಿಯಲ್ಲಿ ಕರೆದೊಯ್ಯಲು ಶ್ರಮಿಸುತ್ತೇವೆ. ಅರ್ಧ ಸತ್ಯಗಳ ಕಗ್ಗತ್ತಲೆಯಿಂದ ಬೆಳಕಿನೆಡೆಗೆ, ಸರಿಯಾದ ತಿಳಿವಳಿಕೆಯ ತಿಳಿ ಸುದ್ದಿಯೆಡೆಗೆ ನಮ್ಮ ಈ ವೀಕ್ಷಕರನ್ನು ಕರೆದೊಯ್ಯಲು ನಾವು ಶ್ರಮ ಹಾಕುತ್ತೇವೆ. ಅಜ್ಞಾನದಿಂದ ಸೃಷ್ಟಿಯಾಗಿರುವ ಭೀತಿಯ ವಾತಾವರಣದಿಂದ ಬೆಳಕಿನೆಡೆಗೆ ಕರೆದೊಯ್ಯುವ ಸತ್ಯವನ್ನು ತಿಳಿದು ಆತ್ಮವಿಶ್ವಾಸ ವೃದ್ಧಿಯಾಗುವಂತಹ ಸುದ್ದಿಯನ್ನು ಹೆಕ್ಕಿ ತೆಗೆದುಕೊಂಡು ಬರುವ ಗುರುತರ ಜವಾಬ್ದಾರಿ ನಿರ್ವಹಿಸಲು ನಾವು ಸದಾ ಹಾತೊರೆಯುತ್ತೇವೆ. ಈ ಭರವಸೆಯ ಬದ್ಧತೆಯೊಂದಿಗೆ ಮತ್ತೊಮ್ಮೆ ನಿಮ್ಮನ್ನೆಲ್ಲಾ ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ ಕೋರಲು ನಾನು ಹರ್ಷಿಸುತ್ತೇನೆ. ಈ ಒಂದು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ನಿಮಗೆಲ್ಲರಿಗೂ ಸ್ವಾಗತ ಕೋರುವೆ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದವರನ್ನು ಸ್ವಾಗತಿಸಿದರು.
ಟಿವಿ9 ಕರ್ನಾಟಕ ವ್ಯವಸ್ಥಾಪಕ ಸಂಪಾದಕ ಶ್ರೀಧರನ್ ಸ್ವಾಗತ ಭಾಷಣ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:
Also Read:
ಟಿವಿ9 ಮುಂಚೂಣಿ ಸ್ಥಾನದಲ್ಲಿ ಇದೆ ಎಂಬುದನ್ನು ಹೆಗ್ಗಳಿಕೆಯಿಂದ ಹೇಳಬೇಕಿದೆ- ತುಮಕೂರು ಸಿದ್ದಗಂಗಾ ಶ್ರೀಗಳ ಆಶೀರ್ವಚನ
Also Read:
ಟಿವಿ9 ಧ್ಯೇಯವಾಕ್ಯ ‘ಉತ್ತಮ ಸಮಾಜಕ್ಕಾಗಿ’ ಎಂಬುದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದೇವೆ- ಸಿಇಒ ಬರುನ್ ದಾಸ್
Published On - 1:25 pm, Tue, 4 January 22