ಮಾನ್ಯತಾ ಟೆಕ್‌ ಪಾರ್ಕ್ ಬಳಿ ನಡುರಾತ್ರಿ ದಂಪತಿಯನ್ನು ಬೆದರಿಸಿದ್ದ ಪೊಲೀಸರು: ಸಂಪಿಗೆಹಳ್ಳಿ ಠಾಣೆಯ ಇಬ್ಬರು ಹೊಯ್ಸಳ ಸಿಬ್ಬಂದಿ ಸೇವೆಯಿಂದ ವಜಾ

| Updated By: ಆಯೇಷಾ ಬಾನು

Updated on: Feb 03, 2023 | 3:22 PM

ಸಂಪಿಗೆಹಳ್ಳಿ ಠಾಣೆಯ ಇಬ್ಬರು ಹೊಯ್ಸಳ ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಮಾನ್ಯತಾ ಟೆಕ್‌ ಪಾರ್ಕ್ ಬಳಿ ನಡುರಾತ್ರಿ ದಂಪತಿಯನ್ನು ಬೆದರಿಸಿದ್ದ ಪೊಲೀಸರು: ಸಂಪಿಗೆಹಳ್ಳಿ ಠಾಣೆಯ ಇಬ್ಬರು ಹೊಯ್ಸಳ ಸಿಬ್ಬಂದಿ ಸೇವೆಯಿಂದ ವಜಾ
ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
Follow us on

ಬೆಂಗಳೂರು: ಮಾನ್ಯತಾ ಟೆಕ್‌ ಪಾರ್ಕ್ ಪೊಲೀಸರ ವಿರುದ್ಧ ಸುಲಿಗೆ ಆರೋಪ ಪ್ರಕರಣ ಸಂಬಂಧ ಸಂಪಿಗೆಹಳ್ಳಿ ಠಾಣೆಯ ಇಬ್ಬರು ಹೊಯ್ಸಳ ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಹೆಡ್‌ಕಾನ್ಸ್‌ಟೇಬಲ್ ರಾಜೇಶ್ ಹಾಗೂ ಕಾನ್ಸ್‌ಟೇಬಲ್ ನಾಗೇಶ್ ಎಂಬುವವರನ್ನು ವಜಾಗೊಳಿಸಿ ಆದೇಶ ನೀಡಲಾಗಿದೆ. ಅವರ ಮೇಲೆ ಇನ್ನೂ ಒಂದಷ್ಟು ಪ್ರಕರಣಗಳು ಕೇಳಿ ಬಂದಿದ್ದು, ಅದರಲ್ಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ.

ಏನಿದು ಘಟನೆ?

ಡಿ.8ರಂದು ಕಾರ್ತಿಕ್‌ ಹಾಗೂ ಅವರ ಪತ್ನಿ,  ಮಾನ್ಯತಾ ಟೆಕ್‌ ಪಾರ್ಕ್ ಬಳಿ ತಮ್ಮ ಸ್ನೇಹಿತರ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ತಡರಾತ್ರಿ 12.30ರ ಸುಮಾರಿಗೆ ನಡೆದುಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ಹೊಯ್ಸಳ ಗಸ್ತು ಸಿಬ್ಬಂದಿ ರಾಜೇಶ್‌ ಮತ್ತು ನಾಗೇಶ್‌, ಕಾರ್ತಿಕ್‌ ದಂಪತಿಯನ್ನು ತಡೆದಿದ್ದಾರೆ. ಈ ವೇಳೆ ರಾತ್ರಿ 11ರ ಬಳಿಕ ರಸ್ತೆಯಲ್ಲಿ ಓಡಾಡುವಂತಿಲ್ಲ. ನೀವು ಯಾರು, ನಿಮಗೂ ಇವರಿಗೂ ಏನು ಸಂಬಂಧ ಇತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಇದನ್ನೂ ಓದಿ: BBMPಗೆ ಆಸ್ತಿ ತೆರಿಗೆ ವಂಚನೆ: ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್​ಗೆ ಬೀಗ ಹಾಕಿದ ಬಿಬಿಎಂಪಿ ಅಧಿಕಾರಿಗಳು

ಗುರುತಿನ ಚೀಟಿ ತೋರಿಸುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಆಗ ಕಾರ್ತಿಕ್‌ ದಂಪತಿ ತಮ್ಮ ಮೊಬೈಲ್‌ನಲ್ಲಿದ್ದ ಆಧಾರ್‌ ಕಾರ್ಡ್‌ ತೋರಿಸಿದ್ದಾರೆ. ಇದಾದ ಬಳಿಕ ಪೊಲೀಸರು ದಂಪತಿಯ ಮೊಬೈಲ್‌ ಕಿತ್ತುಕೊಂಡು 3 ಸಾವಿರ ದಂಡ ಪಾವತಿಸುವಂತೆ ಬೆದರಿಸಿದ್ದಾರೆ. ದಂಡ ಪಾವತಿಸದಿದ್ದರೆ ಕಾನೂನಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವಾಜ್ ಹಾಕಿದ್ದಾರೆ. ಕೊನೆಗೆ ಕ್ಯೂಆರ್‌ ಕೋಡ್‌ ಬಳಸಿ ದಂಪತಿ ಪೊಲೀಸರಿಗೆ 1 ಸಾವಿರವನ್ನು ನೀಡಿ ಸ್ಥಳದಿಂದ ತೆರಳಿದ್ದಾರೆ. ಬಳಿಕ ಪೊಲೀಸದ ದಬ್ಬಾಳಿಕೆ ಸಂಬಂಧ ದಂಪತಿ ಟ್ವಿಟರ್​ನಲ್ಲಿ ನಡೆದ ಘಟನೆ ಬಗ್ಗೆ ಟ್ವೀಟ್ ಮೂಲಕ ಬೆಂಗಳೂರು ಪೊಲೀಸರಿಗೆ ದೂರು ನೀಡಲಾಗಿತ್ತು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ