
ಬೆಂಗಳೂರು, ನವೆಂಬರ್ 13: ಸಣ್ಣ ಜಾಗಗಗಳಲ್ಲಿ ಕಟ್ಟಡ ನಿರ್ಮಿಸಲು ಇದ್ದ ಸೆಟ್ಬ್ಯಾಕ್ ನಿಯಮಗಳಲ್ಲಿ ಕೆಲ ಬದಲಾವಣೆಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ (UDD) ಮುಂದಾಗಿದೆ. ಹಾಲಿ ಇರುವ ನಿಯಮಗಳನ್ನ ಸರಗೊಳಿಸುವುದು ಮತ್ತು ಏಕರೂಪತೆ ಜಾರಿಯ ಉದ್ದೇಶದ ಹಿನ್ನಲೆ, ನವೆಂಬರ್ 11ರಂದು ಪರಿಷ್ಕೃತ ಮಾಸ್ಟರ್ ಪ್ಲಾನ್ 2015 ಅಡಿಯಲ್ಲಿ ವಲಯ ನಿಯಮಾವಳಿಗಳ ತಿದ್ದುಪಡಿ ಕುರಿತಾದ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.
ಕಟ್ಟಡ ಸೆಟ್ಬ್ಯಾಕ್ ಎಂದರೆ ಕಟ್ಟಡದ ಸುತ್ತಲು ಕಡ್ಡಾಯವಾಗಿ ಬಿಡಬೇಕಾದ ಖಾಲಿ ಜಾಗ. ಅಂದರೆ, ಕಟ್ಟಡ ಮತ್ತು ಆಸ್ತಿ ಗಡಿಯ ಮಧ್ಯೆ ಉಳಿಸಬೇಕಾದ ಕನಿಷ್ಠ ಪ್ರದೇಶವಾಗಿದೆ.
ಇದನ್ನೂ ಓದಿ: ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ! ವಿಡಿಯೋ ವೈರಲ್
ಹೊಸ ಕರಡು ಪ್ರಸ್ತಾಪದ ಪ್ರಕಾರ, 150 ಚ.ಮೀ (ಸುಮಾರು 1,600 ಚ.ಅಡಿ) ವರೆಗೆ ಇರುವ ವಸತಿ ಜಾಗಗಳಿಗೆ ಸೆಟ್ಬ್ಯಾಕ್ ಕಡಿತಗೊಳಿಸಲಾಗಿದ್ದು, ಹೊಸದಾಗಿ ಮರುನಿಗದಿ ಮಾಡಲಾಗಿದೆ. ಈ ಮೊದಲು ಬಿಲ್ಡರ್ಗಳು ಸೆಟ್ಬ್ಯಾಕ್ ಅಂತರವನ್ನು ಜಾಗದ ಉದ್ದ ಮತ್ತು ಅಗಲದ ಶೇಕಡಾವಾರು ಆಧಾರದಲ್ಲಿ ಲೆಕ್ಕ ಹಾಕಬೇಕಿತ್ತು. ಮುಂಭಾಗದಲ್ಲಿ ಶೇ.12, ಹಿಂಭಾಗದಲ್ಲಿ ಶೇ.8, ಮತ್ತು ಉಳಿದ ಎರಡು ಬದಿಗಳಲ್ಲಿ ತಲಾ ಶೇ.8ರಷ್ಟು ಜಾಗವನ್ನು ಖಾಲಿ ಬಿಡಬೇಕಿತ್ತು.
150 ಚ.ಮೀ ವರೆಗೆ ಇರುವ ಜಾಗಗಳಲ್ಲಿ ನಿರ್ಮಿಸುವ ಕಟ್ಟಡಗಳ ಗರಿಷ್ಠ ಎತ್ತರವನ್ನು 12 ಮೀಟರ್ಗೆ ನಿಗದಿ ಮಾಡಲಾಗಿದೆ. 750 ಚ.ಮೀ ವರೆಗೆ ಇರುವ ಜಾಗಗಳಲ್ಲಿ ಓಪನ್ ಮೆಟ್ಟಿಲುಗಳನ್ನು ಸೆಟ್ಬ್ಯಾಕ್ ಒಳಗಡೆ ನಿರ್ಮಿಸಲು ಅನುಮತಿ ಇದೆ, ಆದರೆ ಮಳೆನೀರು ಭೂಮಿಯಲ್ಲಿ ಇಂಗುವ ರೀತಿ ಇರಬೇಕು ಎಂದು ಕರಡು ಸ್ಪಷ್ಟಪಡಿಸಿದೆ. ಅದೇ ರೀತಿ, ನೆಲಮಹಡಿ ಅಥವಾ ಮೇಲ್ಛಾವಣಿ ಮಹಡಿಗಳಲ್ಲಿ ಯಾಂತ್ರಿಕ ಅಥವಾ ಹೈಡ್ರಾಲಿಕ್ ಪಾರ್ಕಿಂಗ್ ವ್ಯವಸ್ಥೆ ಬಳಸಲು ಅನುಮತಿ ನೀಡಲಾಗಿದೆ. ಆದರೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೆಲ ಮಹಡಿಗಳ ನಿರ್ಮಾಣಕ್ಕೆ ನಿಷೇಧ ಇರಲಿದೆ ಎಂದು ಕರಡು ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:06 am, Thu, 13 November 25