ಬೆಂಗಳೂರು: ಸಚಿವ ಉಮೇಶ್ ಕತ್ತಿಗೆ ಮಂಗಳವಾರ ರಾತ್ರಿ ಹೃದಯಾಘಾತವಾಗಿದೆ(Umesh Katti Heart Attack). ಕುಟುಂಬಸ್ಥರು ತಕ್ಷಣವೇ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಇದ್ದಾಗ ಹೃದಯಾಘಾತವಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಶಾಸಕ, ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಅವರಿಗೆ ರಾತ್ರಿ 10. 30ಕ್ಕೆ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಎದೆನೋವು ಕಾಣಿಸಿಕೊಂಡಿದ್ದು ಬಾತ್‌ರೂಮ್‌ನಲ್ಲಿ ಕುಸಿದುಬಿದ್ದಿದ್ದರು. ತಕ್ಷಣವೇ ಕುಟುಂಬಸ್ಥರು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಚಿವ ಉಮೇಶ್ ಕತ್ತಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಸಚಿವ ಉಮೇಶ್ ಕತ್ತಿಗೆ ಹೃದಯಾಘಾತ ಹಿನ್ನೆಲೆ ಸುದ್ದಿ ತಿಳಿಯುತ್ತಿದ್ದಂತೆ ಉಮೇಶ್ ಕತ್ತಿ ಕುಟುಂಬಸ್ಥರು ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಸಹೋದರ ಮಾಜಿ ಸಂಸದ ರಮೇಶ್ ಕತ್ತಿ, ಮತ್ತು ಕುಟುಂಬಸ್ಥರ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಹಾಗೂ ರಾಮಯ್ಯ ಆಸ್ಪತ್ರೆಗೆ ಆರೋಗ್ಯ ಸಚಿವ ಡಾ.ಸುಧಾಕರ್ ಭೇಟಿ ನೀಡಿದ್ದಾರೆ.
ಸಚಿವ ಉಮೇಶ್ ಕತ್ತಿ ಅವರಿಗೆ ಹೃದಯಾಘಾತವಾಗಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಎರಡು ಬಾರಿ ಉಮೇಶ್ ಕತ್ತಿ ಅವರಿಗೆ ಹಾರ್ಟ್ ಆಟ್ಯಾಕ್ ಆಗಿತ್ತು. ಈ ಹಿಂದೆ ಹೃದಯಾಘಾತವಾದಾಗ ಅವರ ಹಾರ್ಟ್‌ಗೆ ಸ್ಟಂಟ್ ಅಳವಡಿಸಲಾಗಿತ್ತು. ಇದೀಗ ಮೂರನೇ ಬಾರಿಗೆ ಉಮೇಶ್ ಕತ್ತಿ ಅವರಿಗೆ ಹೃದಯಾಘಾತವಾಗಿದೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ ಎಂದು ಪಣ ತೊಟ್ಟಿದ್ದ ಕತ್ತಿ
ಆಂಧ್ರಪ್ರದೇಶ, ತೆಲಂಗಾಣದಂತೆ ನಮ್ಮ ರಾಜ್ಯದಲ್ಲೂ ಉತ್ತರ ಕರ್ನಾಟಕ (North Karnataka) ಪ್ರತ್ಯೇಕ ರಾಜ್ಯವಾಗಲಿ ಎಂಬ ಬಗ್ಗೆ ಉಮೇಶ್ ಕತ್ತಿ ಕನಸು ಕಂಡಿದ್ದರು. ನಾನು ಸಿಎಂ ಆಗುವುದಾದರೆ ಅಖಂಡ ಕರ್ನಾಟಕದ ಸಿಎಂ ಆಗುತ್ತೇನೆ. ನನ್ನ ಹಣೆಬರಹದಲ್ಲಿ ಬರೆದಿದ್ದರೆ ನಾನು ಸಿಎಂ ಆಗುತ್ತೇನೆ. ಇರುವ 224 ಶಾಸಕರಲ್ಲಿ ನಾನೇ ಹಿರಿಯ ಶಾಸಕ. ನನಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ ಎಂದು ತಾವು ಸಿಎಂ ಆಗುವ ಆಸೆಯನ್ನೂ ಹೊರ ಹಾಕಿದ್ದರು.
ಸಿಎಂ ಸ್ಥಾನಕ್ಕಾಗಿ ನಾನು ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ. ನನಗೆ ಅಖಂಡ ಕರ್ನಾಟಕದ ಸಿಎಂ ಆಗಬೇಕೆಂಬ ಬಯಕೆ ಇದೆ. ಪ್ರತ್ಯೇಕ ರಾಜ್ಯವಾದರೂ ಕೂಡಾ ನಾವು ಕನ್ನಡಿಗರೇ. ಆಂಧ್ರ ಪ್ರದೇಶ, ತೆಲಂಗಾಣ ರೀತಿಯಲ್ಲೇ ನಮ್ಮ ರಾಜ್ಯದಲ್ಲೂ ಪ್ರತ್ಯೇಕ ರಾಜ್ಯವಾಗಲಿ ಎಂದು ಬಯಸಿದ್ದೇನೆ. ನಮ್ಮ ಜನರ ದೃಷ್ಟಿಯಿಂದ ನಾನೇ ಹಿರಿಯನಾಗಿ ಧ್ವನಿ ಎತ್ತಿದ್ದೇನೆ ಎಂದು ಉಮೇಶ್ ಕತ್ತಿ ಹೇಳಿದ್ದರು. ನಮ್ಮ ಜನರ ದೃಷ್ಟಿಯಿಂದ ನಾನೇ ಹಿರಿಯನಾಗಿ ಧ್ವನಿ ಎತ್ತಿದ್ದೇನೆ. ಹೈಕಮಾಂಡ್ ಮಟ್ಟದಲ್ಲೂ ಹೊಸ ರಾಜ್ಯಗಳ ರಚನೆ ಬಗ್ಗೆ ಚಿಂತನೆ ನಡೆದಿದೆ ಎಂಬುದು ನನ್ನ ಅನಿಸಿಕೆ. ನಾನು ಮಾತಾಡಿದರೆ ಆ ವಿಚಾರ ಕೇಂದ್ರದ ಮಟ್ಟಕ್ಕೂ ಹೋಗುತ್ತದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡುತ್ತೇನೆ ಎಂದು ಕೆಲ ತಿಂಗಳ ಹಿಂದೆ ಸಚಿವ ಉಮೇಶ್ ಕತ್ತಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದಿದ್ದರು.
Published On - 11:08 pm, Tue, 6 September 22