AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗಾತಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂಬ ಆಧಾರರಹಿತ ಆರೋಪವೂ ಕ್ರೌರ್ಯ: ಕರ್ನಾಟಕ ಹೈಕೋರ್ಟ್

ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಸಂಗಾತಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಆರೋಪ ಮಾಡುವುದು ಕ್ರೌರ್ಯಕ್ಕೆ ಸಮಾನ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಪತಿ ಸಲ್ಲಿಸಿದ್ದ ವಿಚ್ಛೇದನ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಪತ್ನಿಗೆ ಮಾನಸಿಕ ಅಸ್ವಸ್ಥತೆ ಇದೆ ಅಥವಾ ಅವರು ಮರೆಗುಳಿತನದಿಂದ ಬಳಲುತ್ತಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಪತಿ ಯಾವುದೇ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂಬುದನ್ನು ಹೈಕೋರ್ಟ್ ಗಮನಿಸಿದ್ದು, ವೈವಾಹಿಕ ಸಂಬಂಧ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂಬ ವಾದವೊಂದನ್ನೇ ವಿಚ್ಛೇದನ ನೀಡಲು ಆಧಾರವಾಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಂಗಾತಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂಬ ಆಧಾರರಹಿತ ಆರೋಪವೂ ಕ್ರೌರ್ಯ: ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
ಪ್ರಸನ್ನ ಹೆಗಡೆ
|

Updated on: Oct 29, 2026 | 3:53 PM

Share

ಬೆಂಗಳೂರು, ಅಕ್ಟೋಬರ್​​ 29: ಯಾವುದೇ ಆಧಾರವಿಲ್ಲದೆ ಸಂಗಾತಿಗೆ ಮಾನಸಿಕ ಅಸ್ವಸ್ಥತೆ ಇದೆ ಅಥವಾ ಅವರು ಮರೆಗುಳಿತನದಿಂದ ಬಳಲುತ್ತಿದ್ದಾರೆ ಎಂದು ಆರೋಪ ಮಾಡುವುದು ಕ್ರೌರ್ಯಕ್ಕೆ ಸಮಾನವಾಗಬಹುದು. ಇಂತಹ ಆರೋಪಗಳು ವ್ಯಕ್ತಿಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುತ್ತವೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಅಶೋಕ್ ಎಸ್.ಕಿಣಗಿ ಮತ್ತು ಸುಬ್ರಮಣ್ಯ ರಂಗರಾವ್ ಅವರ ವಿಭಾಗೀಯ ಪೀಠ ಈ ರೀತಿ ಹೇಳಿದೆ.

ಮಾನಸಿಕ ಅಸ್ವಸ್ಥತೆ ಅಥವಾ ಮರೆಗುಳಿತನದ ಕುರಿತು ಆಧಾರರಹಿತ ಆರೋಪಗಳನ್ನು ಮಾಡುವುದು ಕಾನೂನಿನ ದೃಷ್ಟಿಯಲ್ಲಿ ಕ್ರೌರ್ಯವಾಗುತ್ತದೆ. ಇಂತಹ ಆರೋಪಗಳು ವ್ಯಕ್ತಿಯ ಮೂಲಭೂತ ಘನತೆ ಮತ್ತು ಗೌರವಯುತವಾಗಿ, ಶಾಂತಿಯುತವಾಗಿ ಬದುಕುವ ಹಕ್ಕಿನ ಮೇಲೆ ಪರಿಣಾಮ ಬೀರುತ್ತವೆ. ಭಾರತದ ಸಂವಿಧಾನದ 21ನೇ ವಿಧಿಯು ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯನ್ನು ಖಾತರಿಪಡಿಸುತ್ತದೆ. ನಾಗರಿಕ ಸಮಾಜದಲ್ಲಿ ಇಂತಹ ಆರೋಪಗಳು ವ್ಯಕ್ತಿಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ನ್ಯಾಯಾಲಯ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬಿಗ್ ಶಾಕ್: 362 KAS ಅಧಿಕಾರಿಗಳ ಆಯ್ಕೆ ಪಟ್ಟಿ ಊರ್ಜಿತಗೊಳಿಸಿದ್ದ ಕಾಯ್ದೆ ರದ್ದು

ಪತಿಯ ಮೇಲ್ಮನವಿ ವಜಾ

ಈ ದಂಪತಿ 2019ರಲ್ಲಿ ಆಂಧ್ರಪ್ರದೇಶದಲ್ಲಿ ವಿವಾಹವಾಗಿದ್ದರು. ಮದುವೆಯ ಬಳಿಕ ಸುಮಾರು ನಾಲ್ಕು ವಾರಗಳ ಕಾಲ ಒಟ್ಟಿಗೆ ವಾಸವಿದ್ದ ಅವರು, ನಂತರ ಪತ್ನಿ ವೈವಾಹಿಕ ಮನೆಯನ್ನು ತೊರೆದಿರೋದಾಗಿ ಎಂದು ಪತಿ ಆರೋಪಿಸಿದ್ದರು. ಇದಾದ ಬಳಿಕ ಪತಿ ಹಿಂದೂ ವಿವಾಹ ಕಾಯ್ದೆ, 1955ರ ಅಡಿಯಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಪತ್ನಿ ಕ್ರೌರ್ಯ ಎಸಗಿದ್ದಾರೆ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಪತ್ನಿ ಪರಿಹಾರ ಕೋರಿ ಪ್ರತಿದಾವೆ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯವು ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತ್ತು. ಪತ್ನಿ ಸಲ್ಲಿಸಿದ್ದ ಪ್ರತಿದಾವೆಯನ್ನೂ ವಜಾಗೊಳಿಸಿತ್ತು.

ಹೈಕೋರ್ಟ್‌ನಲ್ಲಿ ಪತಿಯ ಪರ ವಕೀಲರು ವಾದ ಮಂಡಿಸಿ, ಪತ್ನಿ ಮರೆಗುಳಿತನದಿಂದ ಬಳಲುತ್ತಿದ್ದು, ಮಾನಸಿಕ ಅಸ್ವಸ್ಥತೆಯನ್ನೂ ಹೊಂದಿದ್ದಾರೆ ಎಂದು ತಿಳಿಸಿದರು. ಯಾವುದೇ ಕಾರಣವಿಲ್ಲದೆ ಅವರು ವೈವಾಹಿಕ ಮನೆಯನ್ನು ತೊರೆದಿದ್ದಾರೆ ಎಂದು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ಪತ್ನಿಯ ಪರ ವಕೀಲರು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಸಮರ್ಥಿಸಿ, ಪತಿಯ ಮೇಲ್ಮನವಿಯನ್ನು ವಜಾಗೊಳಿಸುವಂತೆ ಕೋರಿದ್ದರು.

ಪತಿ ಮಾಡಿದ್ದ ಆರೋಪಗಳಿಗಿಲ್ಲ ಪುರಾವೆ!

ಪತ್ನಿಗೆ ಮಾನಸಿಕ ಅಸ್ವಸ್ಥತೆ ಇದೆ ಅಥವಾ ಅವರು ಮರೆಗುಳಿತನದಿಂದ ಬಳಲುತ್ತಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಪತಿ ಯಾವುದೇ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂಬುದನ್ನು ಹೈಕೋರ್ಟ್ ಗಮನಿಸಿದೆ. ಅರ್ಜಿಯಲ್ಲಿ ಮಾಡಿರುವ ಆರೋಪಗಳು ಅಥವಾ ಹೇಳಿಕೆಗಳನ್ನು ಯಥಾವತ್ತಾಗಿ ಸತ್ಯವೆಂದು ಪರಿಗಣಿಸಲಾಗುವುದಿಲ್ಲ. ಅವುಗಳನ್ನು ಮೌಖಿಕ ಮತ್ತು ದಾಖಲೆಗಳ ಮೂಲಕ ದೃಢೀಕರಿಸಬೇಕು ಹಾಗೂ ಕಾನೂನುಬದ್ಧವಾಗಿ ಸಾಬೀತುಪಡಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

‘ಮದುವೆ ಮುರಿದುಬಿದ್ದಿದೆ ಎಂಬ ಕಾರಣಕ್ಕೆ ವಿಚ್ಛೇದನ ನೀಡಲಾಗದು’

ವೈವಾಹಿಕ ಸಂಬಂಧ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂಬ ವಾದವೊಂದನ್ನೇ ವಿಚ್ಛೇದನ ನೀಡಲು ಆಧಾರವಾಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಏಕೆಂದರೆ, ಪ್ರಸ್ತುತ ಕಾನೂನಿನ ಅಡಿಯಲ್ಲಿ ಇದನ್ನು ವಿಚ್ಛೇದನಕ್ಕೆ ಮಾನ್ಯವಾದ ಆಧಾರವೆಂದು ಗುರುತಿಸಲಾಗಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More