ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಕ್ಕೆ ಆಗ್ರಹಿಸಿ ಡಿಸೆಂಬರ್ 31ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು. ಅತ್ತಿಬೆಲೆ ಗಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಂಇಎಸ್ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಡಿಸೆಂಬರ್ 29ರವರೆಗೆ ಗಡುವು ನೀಡಿದ್ದೇವೆ. ಅಷ್ಟರೊಳಗೆ ನಿಷೇಧದ ಆದೇಶ ಹೊರಡಿಸದಿದ್ದರೆ ಡಿ.31ರಂದು ರಾಜ್ಯ ಬಂದ್ ಮಾಡುತ್ತೇವೆ ಎಂದರು. ಹೊಟೆಲ್, ಕೆಎಸ್ಆರ್ಟಿಸಿ ಬಸ್ ಸಂಚಾರ ಬಂದ್ ಆಗಬೇಕು. ನಮ್ಮ ಹೋರಾಟಕ್ಕೆ ವಕೀಲರು ಕೂಡ ಕೈಜೋಡಿಸಬೇಕು. ರಾಷ್ಟ್ರೀಯ ಭದ್ರತಾ ಕಾನೂನಿನ ಅನ್ವಯ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಬಂದ್ ದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸುತ್ತೇವೆ. ನಾಳೆ (ಡಿ.25) ಗೊರಗೊಂಟೆಪಾಳ್ಯ ಬಳಿ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರ ಸಚಿವರ ಭೇಟಿಯಾದ ಎಂಇಎಸ್ ನಾಯಕರು
ಬೆಳಗಾವಿಯಲ್ಲಿ ಪುಂಡಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಕಠಿಣ ಕ್ರಮದ ನಿರ್ಧಾರಕ್ಕೆ ಎಂಇಎಸ್ ನಾಯಕರು ಆತಂಕಗೊಂಡಿದ್ದಾರೆ. ಮಹಾರಾಷ್ಟ್ರ ಸಚಿವರು, ಹಿರಿಯ ನಾಯಕರ ಮನೆಗೆ ಎಂಇಎಸ್ ಯುವಸಮಿತಿ ದೌಡಾಯಿಸಿದೆ. ಮುಂಬೈಗೆ ತೆರಳಿ ಸಚಿವರು, ನಾಯಕರನ್ನು ಭೇಟಿಯಾಗುತ್ತಿದೆ. ಮಹಾರಾಷ್ಟ್ರ ಮಾಜಿ ಸಿಎಂ ಶರದ್ ಪವಾರ್ ಅವರನ್ನು ಭೇಟಿಯಾದ ಯುವ ಸಮಿತಿ ಸದಸ್ಯರು ಕರ್ನಾಟಕದಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ಎಸೆಗಲಾಗುತ್ತಿದೆ. ಮರಾಠಿ ಭಾಷಿಕ ಯುವಕರ ಮೇಲೆ ದೇಶದ್ರೋಹ ಕೇಸ್ ದಾಖಲಿಸಲಾಗುತ್ತಿದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಲು ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿಗೆ ಮಹಾರಾಷ್ಟ್ರ ಸಂಸದರ ನಿಯೋಗ ಕೊಂಡೊಯ್ಯಲಾಗುವುದು ಎಂದು ಶರದ್ ಪವಾರ್ ಎಂಇಎಸ್ ಮುಖಂಡರಿಗೆ ಭರವಸೆ ನೀಡಿದರು. ಶರದ್ ಪವಾರ್ ಭೇಟಿಗೂ ಮೊದಲು ಸಚಿವ ಏಕನಾಥ ಶಿಂಧೆ ಸೇರಿ ಹಲವು ಸಚಿವರನ್ನು ಎಂಇಎಸ್ ಯುವಸಮಿತಿ ಭೇಟಿಯಾಗಿತ್ತು.
ಇದನ್ನೂ ಓದಿ: ಎಂಇಎಸ್ ಪುಂಡಾಟಿಕೆ: ಸಂಸದೆ ಸುಮಲತಾರನ್ನ 1 ರೂಪಾಯಿಗೆ ಹರಾಜು ಹಾಕಿದ ವಾಟಾಳ್ ನಾಗರಾಜ್