ಎಂಇಎಸ್ ಪುಂಡಾಟಿಕೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ; ಸರ್ಕಾರಕ್ಕೆ 2 ದಿನ ಗಡುವು ನೀಡಿದ ವಾಟಾಳ್ ನಾಗರಾಜ್

ಎಂಇಎಸ್ ಸಂಘಟನೆ ನಿಷೇಧಿಸಲು ವಾಟಾಳ್ ನಾಗರಾಜ್ ಸರ್ಕಾರಕ್ಕೆ 2 ದಿನ ಗಡುವು ನೀಡಿದ್ದಾರೆ. ರಾಜ್ಯ ಸರ್ಕಾರ ಕ್ರಮಕೈಗೊಳ್ಳದಿದ್ದರೆ ಬುಧವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಲ್ಲಿ ಸಭೆ ನಡೆಸಿ, ಹೋರಾಟ ನಡೆಸುತ್ತೇವೆ.

ಎಂಇಎಸ್ ಪುಂಡಾಟಿಕೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ; ಸರ್ಕಾರಕ್ಕೆ 2 ದಿನ ಗಡುವು ನೀಡಿದ ವಾಟಾಳ್ ನಾಗರಾಜ್
ಕನ್ನಡ ಸಂಘಟನೆಗಳಿಂದ ಪ್ರತಿಭಟನೆ
Edited By:

Updated on: Dec 19, 2021 | 3:01 PM

ಬೆಂಗಳೂರು: ಎಂಇಎಸ್ ಪುಂಡಾಟಿಕೆ ಖಂಡಿಸಿ ಇಂದು (ಡಿ.19) ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬಾಳಾ ಠಾಕ್ರೆ ಫೋಟೋಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರ ನೇತೃತ್ವದಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಧರಣಿ ನಡೆಸಿದ್ದಾರೆ. ನ್ಯಾಯ ಸಿಗುವ ತನಕ ಹೋರಾಟ ಮಾಡುತ್ತೇವೆ. ಸರ್ಕಾರ ಕಿವಿಕೊಡಲಿಲ್ಲ ಅಂದರೆ ಬೆಳಗಾವಿಗೆ ಹೋಗುತ್ತೇವೆ. ಸೋಮವಾರವರೆಗೆ ಸಮಯ ನೀಡುತ್ತೇವೆ. ಎಂಇಎಸ್ ಪುಂಡರು ತಮ್ಮ ಉದ್ಘಟತನ ಬಿಡಲಿಲ್ಲ ಅಂದರೆ ಬುಧವಾರ ಪಾದಯಾತ್ರೆ ಮೂಲಕ ಬೆಳಗಾವಿ ಚಲೋ ಮಾಡುತ್ತೇವೆ ಅಂತ ಕನ್ನಡ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಸರ್ಕಾರಕ್ಕೆ 2 ದಿನ ಗಡುವು
ಎಂಇಎಸ್ ಸಂಘಟನೆ ನಿಷೇಧಿಸಲು ವಾಟಾಳ್ ನಾಗರಾಜ್ ಸರ್ಕಾರಕ್ಕೆ 2 ದಿನ ಗಡುವು ನೀಡಿದ್ದಾರೆ. ರಾಜ್ಯ ಸರ್ಕಾರ ಕ್ರಮಕೈಗೊಳ್ಳದಿದ್ದರೆ ಬುಧವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಲ್ಲಿ ಸಭೆ ನಡೆಸಿ, ಹೋರಾಟ ನಡೆಸುತ್ತೇವೆ. ರೈತರು ಸೇರಿದಂತೆ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗುತ್ತಾರೆ. ಈ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡಲಾಗುವುದು ಅಂತ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರು. ಮಹಾನ್​ ದೇಶ ಭಕ್ತ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ್ದರು. ಎಂಇಎಸ್, ಶಿವಸೇನೆ ಪುಂಡರು ಗೂಂಡಾಗಿರಿ ಮಾಡಿದ್ದಾರೆ. ಅಧಿವೇಶನದಲ್ಲಿ ಎಂಇಎಸ್​ ನಿಷೇಧಿಸಬೇಕು. ಇದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆ ಅಂತ ವಾಟಾಳ್ ನಾಗರಾಜ್​ ಅಭಿಪ್ರಾಯಪಟ್ಟಿದ್ದಾರೆ.

ಎಂಇಎಸ್​ ನಿಷೇಧಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ಶಿವಸೇನೆ ಪುಂಡರು ರಾಜ್ಯದೊಳಗೆ ಕಾಲಿಡದಂತೆ ಕ್ರಮಕೈಗೊಳ್ಳಿ. ಬಂಧಿತ ಕನ್ನಡ ಪರ ಹೋರಾಟಗಾರರನ್ನು ಬಿಡುಗಡೆಮಾಡಿ. ಬುಧವಾರ ಸಭೆ ಸೇರಿ ಹೋರಾಟದ ಬಗ್ಗೆ ಚರ್ಚೆ ನಡೆಸುತ್ತೇವೆ. ಸಚಿವ ಸೋಮಣ್ಣ 100 ವರ್ಷ ದಾಟಿದವರಂತೆ ಮಾತಾಡ್ತಾರೆ. ಸಚಿವ ಸೋಮಣ್ಣ ಒಂದು ರೀತಿ ಬಂಜೆ ಸೋಮಣ್ಣ ಆಗಿದ್ದಾರೆ. ಸಚಿವ ವಿ.ಸೋಮಣ್ಣ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಸೋಮಣ್ಣ ರಾಜೀನಾಮೆ ನೀಡಬೇಕು ಅಂತ ಹೋರಾಟಗಾರ ವಾಟಾಳ್ ನಾಗರಾಜ್​ ಒತ್ತಾಯಿಸಿದ್ದಾರೆ.

ಇನ್ನು ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಮಾತನಾಡಿದ ಪ್ರವೀಣ್ ಶೆಟ್ಟಿ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲೆ ಹಾಕುವ ಮೂಲಕ ನಮ್ಮ ಪಾದಯಾತ್ರೆ ಆರಂಭವಾಗುತ್ತದೆ. ರಾಜ್ಯದ ಎಲ್ಲ ಸಂಘಟನೆಗಳು ಒಟ್ಟಿಗೆ ಸಭೆ ಸೇರಿ ನಂತರ ತೀರ್ಮಾನಕ್ಕೆ ಬರುತ್ತೇವೆ. ಎಂಇಎಸ್ ಪುಂಡಾಟಿಕೆ ಕೊನೆಗಾಣಬೇಕು. ಎಂಇಎಸ್ ಸಂಘಟನೆ ಬ್ಯಾನ್ ಆಗ್ಬೇಕು. ಕನ್ನಡಿಗರ ಮತದಿಂದ ನೀವು ಗೆಲ್ಲುತ್ತಿರುವುದು. ಒಕ್ಕೂಟ ಸರ್ಕಾರದ ಬಗ್ಗೆ ನಮಗೂ ಗೌರವವಿದೆ. ಸೋಮಣ್ಣ ಅವರು ಬಾಲಿಶ ಹೇಳಿಕೆ ನಿಲ್ಲಿಸಬೇಕು ಅಂತ ಹೇಳಿದರು.

ಇದನ್ನೂ ಓದಿ

ಬಾಲಕಿ ಮೇಲೆ 9 ತಿಂಗಳು ಸಾಮೂಹಿಕ ಅತ್ಯಾಚಾರ; 13 ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಣೆ

ಗೋಲ್ಡನ್​ ಟೆಂಪಲ್​​ ಅಪವಿತ್ರಗೊಳಿಸಿದ ಯುವಕನ ಹತ್ಯೆ ಬೆನ್ನಲ್ಲೇ ಪಂಜಾಬ್​ನಲ್ಲಿ ಇನ್ನೊಂದು ಇಂಥದ್ದೇ ಘಟನೆ; ಯುವಕ ಪೊಲೀಸ್ ವಶಕ್ಕೆ

Published On - 2:49 pm, Sun, 19 December 21