ಗೋಲ್ಡನ್​ ಟೆಂಪಲ್​​ ಅಪವಿತ್ರಗೊಳಿಸಿದ ಯುವಕನ ಹತ್ಯೆ ಬೆನ್ನಲ್ಲೇ ಇನ್ನೊಂದು ಘಟನೆ; ಸಿಖ್ಖರ ಧ್ವಜ ಅಪವಿತ್ರಗೊಳಿಸಲು ಯತ್ನಿಸಿದವನಿಗೆ ಥಳಿತ

ನಿನ್ನೆ ಅಮೃತ್​ಸರದಲ್ಲಿ ನಡೆದ ಯುವಕನ ಹತ್ಯೆಯ ಬಗ್ಗೆಯೂ ಪರ-ವಿರೋಧ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿ ತನಿಖೆಗೆ ಆದೇಶಿಸಿದ್ದಾರೆ.

ಗೋಲ್ಡನ್​ ಟೆಂಪಲ್​​ ಅಪವಿತ್ರಗೊಳಿಸಿದ ಯುವಕನ ಹತ್ಯೆ ಬೆನ್ನಲ್ಲೇ ಇನ್ನೊಂದು ಘಟನೆ; ಸಿಖ್ಖರ ಧ್ವಜ ಅಪವಿತ್ರಗೊಳಿಸಲು ಯತ್ನಿಸಿದವನಿಗೆ ಥಳಿತ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Lakshmi Hegde

Dec 19, 2021 | 2:16 PM

ಸಿಖ್ಖರ ಪವಿತ್ರ ಕ್ಷೇತ್ರವಾದ ಪಂಜಾಬ್​​ನ  ಅಮೃತ್​ಸರದಲ್ಲಿರುವ ಗೋಲ್ಡನ್​ ಟೆಂಪಲ್(Golden Temple in Amritsar)​​ನ್ನು ಅಪವಿತ್ರಗೊಳಿಸಲು ಪ್ರಯತ್ನಿಸಿದ ಎಂದು ಆರೋಪಿಸಿ ಯುವಕನೊಬ್ಬನಿಗೆ ಭಕ್ತರು ಹಿಗ್ಗಾಮುಗ್ಗಾ ಥಳಿಸಿ ಕೊಂದಿರುವ ಘಟನೆ ನಿನ್ನೆ ನಡೆದಿದ್ದು, ವಿವಾದಕ್ಕೆ ಕಾರಣವಾಗಿದೆ. ಅದರ ಬೆನ್ನಲ್ಲೇ ಪಂಜಾಬ್​ನ ಕಪುರ್ತಲಾದಲ್ಲೂ ಇಂಥದ್ದೇ ಒಂದು ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ. ಕಪುರ್ತಲಾದ ನಿಝಾಂಪುರ ಗ್ರಾಮದಲ್ಲಿ ಹೀಗಿದ್ದೇ ಒಂದು ಘಟನೆ ನಡೆದಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಅದರ ವಿಡಿಯೋಗಳೂ ಕೂಡ ವೈರಲ್ ಆಗಿವೆ ಎನ್ನಲಾಗಿದೆ. ಇಲ್ಲಿ ಕೂಡ ಸಿಖ್ಖರ ಧ್ವಜ ನಿಶಾನ್​ ಸಾಹೀಬ್(Nishan Sahib)​ನ್ನು ಅಪವಿತ್ರಗೊಳಿಸಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನಿಗೆ ಸ್ಥಳೀಯರು ಹೊಡೆದಿದ್ದಾರೆ.  ಇಲ್ಲಿ ಯುವಕನಿಗೆ ಹೊಡೆದು ಆತನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದೆ.

ನಿನ್ನೆ ಅಮೃತ್​ಸರದಲ್ಲಿ ಇಂಥದ್ದೇ ಒಂದು ದುರ್ಘಟನೆ ನಡೆದಿತ್ತು. ಉತ್ತರಪ್ರದೇಶದ ಮೂಲದವನು ಎನ್ನಲಾದ ಯುವಕನೊಬ್ಬ ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತ್ರವಾದ ಸ್ವರ್ಣಮಂದಿರದ ಗರ್ಭಗುಡಿಯೊಳಗೆ ನುಗ್ಗಿ, ಪವಿತ್ರ ಗ್ರಂಥ ಗುರುಗ್ರಂಥ ಸಾಹೀಬದ ಬಳಿ ಇಡಲಾಗಿದ್ದ ಖಡ್ಗವನ್ನು ಎತ್ತಿಕೊಂಡಿದ್ದ. ಸಂಜೆ ಸಿಖ್ಖರು ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆಯಲ್ಲಿ ಏಕಾಏಕಿ ನುಗ್ಗಿದ್ದ ಯುವಕ ಎಲ್ಲ ಭದ್ರತೆಯನ್ನೂ ಮೀರಿ, ಗ್ರಂಥದ ಸುತ್ತ ಹಾಕಿದ್ದ ಸರಪಳಿಯನ್ನೂ ದಾಟಿ ಹೋಗಿ ಖಡ್ಗವನ್ನು ಎತ್ತಿಕೊಂಡಿದ್ದರಿಂದ ಅಲ್ಲಿದ್ದ ಭಕ್ತರು ತೀವ್ರ ಕೋಪಗೊಂಡಿದ್ದರು. ಭದ್ರತಾ ಸಿಬ್ಬಂದಿ ಕೂಡ ಆತನಿಗೆ ಥಳಿಸಿದ್ದರು.  ಅದಾದ ಮೇಲೆ ಆತನ ಜೀವವೇ ಹೋಗಿತ್ತು. ಈ ಹಿಂದೆ ರೈತರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗಲೂ ಇಂಥದ್ದೆ ಒಂದು ಘಟನೆ ನಡೆದಿತ್ತು. ಅಂದು ಕೂಡ ಸಿಖ್ಖರ ಧಾರ್ಮಿಕ ಗ್ರಂಥ ಅಪವಿತ್ರವಾಯಿತು ಎಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ಕೊಂದು, ಬ್ಯಾರಿಕೇಡ್​ಗೆ ಶವ ನೇತುಹಾಕಲಾಗಿತ್ತು.

ಇದೀಗ ನಿನ್ನೆ ಅಮೃತ್​ಸರದಲ್ಲಿ ನಡೆದ ಯುವಕನ ಹತ್ಯೆಯ ಬಗ್ಗೆಯೂ ಪರ-ವಿರೋಧ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿ ತನಿಖೆಗೆ ಆದೇಶಿಸಿದ್ದಾರೆ. ಉಪಮುಖ್ಯಮಂತ್ರಿ ಸುಖಜಿಂದರ್​ ಸಿಂಗ್​ ರಾಂಧವಾ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಯುವಕನ ಹತ್ಯೆಯಲ್ಲಿ ಭಾಗಿಯಾಗಿರುವ ಜನರಿಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.  ಹಾಗೇ, ಈ ಪ್ರಕರಣದ ತನಿಖೆ 2 ದಿನಗಳಲ್ಲಿ ಮುಗಿದು ವರದಿ ಸಿಗಲಿದೆ. ಸದ್ಯ ಗೋಲ್ಡನ್​ ಟೆಂಪಲ್​ ಬಳಿ ಇನ್ನಷ್ಟು ಭದ್ರತೆ ಕಲ್ಪಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Golden Temple: ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ; ಯುವಕನನ್ನು ಥಳಿಸಿ ಕೊಂದ ಸಿಖ್ಖರು!

ಈ ಫೋಟೋಗಾಗಿ 36 ವರ್ಷಗಳಿಂದ ಕಾದಿದ್ದ ಸುದೀಪ್​; ಕಿಚ್ಚನ ಬಾಲ್ಯದ ಕನಸು ಈಗ ನನಸಾಯ್ತು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada