ವಿದೇಶದಲ್ಲಿ ಕೂತು ಖಾಸಗಿ ಫೈನಾನ್ಸ್​ ಅಕೌಂಟ್​ ಹ್ಯಾಕ್​: 2.5 ಗಂಟೆಯಲ್ಲಿ ದೋಚಿದ್ದು ಕೋಟಿ ಕೋಟಿ!

ವಿದೇಶದಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್​ ಕಂಪನಿಯ ಅಕೌಂಟ್​ ಹ್ಯಾಕ್​ ಮಾಡಿ ಖದೀಮರು ಕೋಟಿ ಕೋಟಿ ಹಣ ದೋಚಿರುವ ಆಘಾತಕಾರಿ ಘಟನೆ ನಡೆದಿದೆ. ವಿಪಿಎನ್ ನೆಟ್​ವರ್ಕ್ ಬಳಸಿ ಅಕೌಂಟ್ ಹ್ಯಾಕ್ ಮಾಡಿರೋದು ಗೊತ್ತಾಗಿತ್ತು, ದೋಚಿದ ಹಣವನ್ನ 653 ನಕಲಿ ಅಕೌಂಟ್​ಗೆ ಟ್ರಾನ್ಸ್​ಫರ್​ ಮಾಡಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳು ಲಾಕ್​ ಆಗಿದ್ದಾರೆ.

ವಿದೇಶದಲ್ಲಿ ಕೂತು ಖಾಸಗಿ ಫೈನಾನ್ಸ್​ ಅಕೌಂಟ್​ ಹ್ಯಾಕ್​: 2.5 ಗಂಟೆಯಲ್ಲಿ ದೋಚಿದ್ದು ಕೋಟಿ ಕೋಟಿ!
ಸಾಂದರ್ಭಿಕ ಚಿತ್ರ
Updated By: ಪ್ರಸನ್ನ ಹೆಗಡೆ

Updated on: Oct 27, 2025 | 12:20 PM

ಬೆಂಗಳೂರು, ಅಕ್ಟೋಬರ್​ 27: ವಿದೇಶದಲ್ಲಿ ಕುಳಿತು ಬೆಂಗಳೂರಿನ (Bengaluru) ಫೈನಾನ್ಸ್​ ಕಂಪನಿಯ ಅಕೌಂಟ್​ ಹ್ಯಾಕ್​ ಮಾಡಿ ಬರೋಬ್ಬರಿ 49 ಕೋಟಿ ರೂಪಾಯಿ ದೋಚಿರುವ ಆಘಾತಕಾರಿ ಘಟನೆ ನಡೆದಿದೆ. ವಿಪಿನ್ ನೆಟ್​ವರ್ಕ್​ ಬಳಸಿ ವಿಸ್ಡಮ್ ಫೈನಾನ್ಸ್ ಎಂಬ ಕಂಪನಿಯ ಹಣ ಎಗರಿಸಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಬೆಳಗಾವಿ ಮೂಲದ ಇಸ್ಮಾಯಿಲ್ ಅತ್ತರ್ ಮತ್ತು ಪಟೇಲ್ ಎಂಬವರನ್ನು ಬೆಂಗಳೂರು ಸೈಬರ್​ ಅಪರಾಧ ವಿಭಾಗದ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಆಗಸ್ಟ್ 7ರಂದು ಮಾರತಹಳ್ಳಿಯಲ್ಲಿನ ವಿಸ್ಡಮ್ ಫೈನಾನ್ಸ್ ಕಂಪನಿ ಅಕೌಂಟ್ ಹ್ಯಾಕ್ ಆಗಿದ್ದು, ಈ ಬಗ್ಗೆ ಆ. 9ರಂದು ಫೈನಾನ್ಸ್​ನ ಮ್ಯಾನೇಜರ್ ಪ್ರಕಾಶ್ ದೂರು ನೀಡಿದ್ದರು. ಈ ಆಧಾರದಲ್ಲಿ ಸಿಸಿಬಿ ಸೈಬರ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ರಾಜ್ಯ ಹಾಗೂ ಹೈದರಾಬಾದ್​ನಲ್ಲಿ ಆರೋಪಿಗಳಿಗೆ ಹುಡುಕಾಟ ನಡೆಸಿದ್ದರು. ತನಿಖೆ ವೇಳೆ ಆರೋಪಿಗಳು ವಿದೇಶದಲ್ಲಿ ಕುಳಿತು ವಿಪಿಎನ್ ನೆಟ್​ವರ್ಕ್ ಬಳಸಿ ಅಕೌಂಟ್ ಹ್ಯಾಕ್ ಮಾಡಿರೋದು ಗೊತ್ತಾಗಿತ್ತು. ದೋಚಿದ ಹಣವನ್ನ 653 ನಕಲಿ ಅಕೌಂಟ್​ಗೆ ಟ್ರಾನ್ಸ್​ಫರ್​ ಮಾಡಿದ್ದರು. ವಿಸ್ಡಮ್ ಫೈನಾನ್ಸ್​ನ ಎರಡು ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿರೋದು ತನಿಖೆ ವೇಳೆ ಪತ್ತೆಯಾಗಿತ್ತು.

ಇದನ್ನೂ ಓದಿ: ಕೋಟಿ ಕೋಟಿ ಲಪಟಾಯಿಸಿದ ಹಾಸನದ ಟೈಲರಮ್ಮನ ಕಥೆ: 16 ಲಕ್ಷದ ಕಾರು, ಕೋಟಿ ಬೆಲೆ ಬಾಳುವ ಮನೆ! ಇಷ್ಟೆಲ್ಲ ಸಂಪಾದಿಸಿದ್ದೇಗೆ!?

ಆರೋಪಿಗಳ ಪ್ಲ್ಯಾನ್​ ಹೇಗಿತ್ತು?

ವಿಸ್ಡಮ್ ಫೈನಾನ್ಸ್ ಅವರದ್ದು ಮನಿವೀವ್ ಎಂಬ ಆ್ಯಪ್​ ಇದ್ದು, ಇದರ ಮೂಲಕವೇ ಸಾರ್ವಜನಿಕರಿಗೆ ಲೋನ್​ ನೀಡಲಾಗುತ್ತಿತ್ತು. ಖದೀಮರು ಹಾಂಕಾಂಗ್ ಮತ್ತು ಫಿಲಿಫೈನ್ಸ್​ನಲ್ಲಿ ಕುಳಿತು ಫ್ರಾನ್ಸ್ ಐಪಿ ಅಡ್ರೆಸ್​ ಬಳಸಿ ಇದೇ ಆ್ಯಪ್​ನ ಕೀಯನ್ನು ಹ್ಯಾಕ್​ ಮಾಡಿದ್ದಾರೆ. ಆಮೂಲಕ ಫೈನಾನ್ಸ್​ನ ಎರಡು ಅಕೌಂಟ್​ಗಳನ್ನ ತಮ್ಮ ಹಿಡಿತಕ್ಕೆ ಪಡೆದುಕೊಂಡಿದ್ದರು. ಬಳಿಕ ಅಲ್ಲಿಂದ ಎಪಿಐ ಕೀ ಹ್ಯಾಕ್​ ಮಾಡಿ 653 ಅಕೌಂಟ್ ಗೆ 49 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ಇಲ್ಲೂ ಆರೋಪಿಗಳು ಚಾಣಾಕ್ಷತೆ ಪ್ರದರ್ಶಿಸಿದ್ದು, ಕದ್ದ ಹಣದ ಒಂದು ಭಾಗವನ್ನ ಸಾರ್ವಜನಿಕರ ಅಕೌಂಟ್​ಗಳಿಗೂ ವರ್ಗಾಯಿಸಿದ್ದಾರೆ. ಪೊಲೀಸರ ತನಿಖೆ ದಿಕ್ಕು ತಪ್ಪಿಸುವ ಉದ್ದೇಶ ಇವರದ್ದಾಗಿತ್ತು ಎನ್ನಲಾಗಿದೆ.

ಬಂಧಿತ ಪೈಕಿ ಇಸ್ಮಾಯಿಲ್​ ದುಬೈನಲ್ಲಿ ಕುಳಿತು ಹ್ಯಾಕ್ ಮಾಡುವ ತಂಡದ ಜೊತೆಗೆ ಸಂಬಂಧ ಹೊಂದಿದ್ದ. ಇನ್ನು ಬಂಧಿತ ಮತ್ತೋರ್ವ ಆರೋಪಿ ಪಟೇಲ್​ ಅಕೌಂಟ್​ಗೆ 27,39,000 ರೂ, ಹಣ ವರ್ಗಾವಣೆ ಆಗಿತ್ತು. ಜೊತೆಗೆ ಹೈದರಾಬಾದ್​ನ Echelon Science Tech Pvt. Ltd. ಕಂಪನಿ ಖಾತೆಗೆ 5.5 ಕೋಟಿ ರೂ. ಹಣ ವರ್ಗಾವಣೆ ಆಗಿರುವುದೂ ಪತ್ತೆಯಾಗಿದೆ. ಕೇವಲ ಎರಡೂವರೆ ಗಂಟೆಗಳಲ್ಲಿ 49 ಕೋಟಿ ಹಣವನ್ನ ಗ್ಯಾಂಗ್​ ದೋಚಿದ್ದು, ಒಟ್ಟು 1,782 ಟ್ರಾನ್ಸಾಕ್ಷನ್ ನಡೆಸಲಾಗಿತ್ತು. ಬಂಧಿತ ಆರೋಪಿಗಳಿಂದ ಲ್ಯಾಪ್​ಟಾಪ್ , ಪೆನ್ ಡ್ರೈವ್ ವಶಕ್ಕೆ ಪಡೆಯಲಾಗಿದೆ. ನಾಪತ್ತೆಯಾಗಿರುವ ಉಳಿದ 5 ಆರೋಪಿಗಳಿಗೆ ಹುಡುಕಾಟ ಮುಂದುವರಿದಿದೆ. ಮಾಹಿತಿ ಪ್ರಕಾರ ಮೂವರು ದುಬೈನಲ್ಲಿದ್ದಾರೆ. ಇನ್ನು ಇಬ್ಬರು ಹಾಂಕಾಂಗ್​ನಲ್ಲಿ ಇದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.