ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಪೂರ್ವಭಾವಿ ಸಭೆ: ಸಮರ್ಪಕ ಸಮೀಕ್ಷೆಗೆ ಆಗ್ರಹ, ಕೇಂದ್ರದ ಮೇಲೆ ಒತ್ತಡಕ್ಕೆ ಡಿವಿಎಸ್​ ಭರವಸೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 27, 2022 | 2:21 PM

, ನಮ್ಮ ಸಮುದಾಯದ ಕೆಲಸ ಮಾಡುವ ವಿಚಾರದಲ್ಲಿ ನಾವು ಸ್ವಲ್ಪ ಹಿಂದೆ ಉಳಿದ್ದಿದ್ದೇವೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಒಪ್ಪಿಕೊಂಡರು.

ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಪೂರ್ವಭಾವಿ ಸಭೆ: ಸಮರ್ಪಕ ಸಮೀಕ್ಷೆಗೆ ಆಗ್ರಹ, ಕೇಂದ್ರದ ಮೇಲೆ ಒತ್ತಡಕ್ಕೆ ಡಿವಿಎಸ್​ ಭರವಸೆ
ಒಕ್ಕಲಿಗರ ಸಂಘದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಆರೋಗ್ಯ ಸಚಿವ ಡಾ ಕೆ.ಸುಧಾಕರ್
Follow us on

ಬೆಂಗಳೂರು: ‘ಆಡಳಿತ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಎಲ್ಲಿ ಬೇಕಾದರೂ ಏನಾದರೂ ನಾನು ಮಾತನಾಡಲು ಆಗುವುದಿಲ್ಲ. ಈ ವಿಚಾರಗಳನ್ನು ಎಲ್ಲಿ ಪ್ರಸ್ತಾಪ ಮಾಡಬೇಕೋ ಅಲ್ಲಿ ಖಂಡಿತ ಮಾಡುತ್ತೇವೆ ಎಂದು ಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದಗೌಡ ಹೇಳಿದರು. ಒಕ್ಕಲಿಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದ ಕೆಲಸ ಮಾಡುವ ವಿಚಾರದಲ್ಲಿ ನಾವು ಸ್ವಲ್ಪ ಹಿಂದೆ ಉಳಿದ್ದಿದ್ದೇವೆ ಎಂದು ಒಪ್ಪಿಕೊಂಡರು.

‘ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುವ ಸಂದರ್ಭದಲ್ಲಿ ನಿರ್ಮಲಾನಂದಶ್ರೀಗಳು ‌ನಮ್ಮ ಸಮುದಾಯದ ಹುಡುಗ ಕೆಳಗೆ ಇಳಿಯಬಾರದು ಎಂದು ಹೋರಾಟ ಮಾಡಿದ್ದರು. ಡಿ 9ರಿಂದ ಸಂಸತ್ ಅಧಿವೇಶನ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ನೇತೃತ್ವದಲ್ಲಿ ಒತ್ತಡ ಹಾಕುತ್ತೇವೆ’ ಎಂದರು. ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ ಕೇಂದ್ರ ಸರ್ಕಾರವು ಶೇ 10ರ ಮೀಸಲಾತಿಯನ್ನು ಕೊಟ್ಟಿದೆ. ಇದರಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಆರ್ಥಿಕವಾಗಿ ಹಿಂದುಳಿದವರು, ಎಸ್​ಸಿ-ಎಸ್​ಟಿ ಸಮುದಾಯಕ್ಕೆ ಮೀಸಲಾತಿ ನೀಡಿದ ಬಳಿಕ ನಮಗೆ ಅವಕಾಶಗಳು ಕಡಿಮೆಯಾಗುತ್ತವೆ. ರಾಜ್ಯದಲ್ಲಿ ನಾವು ಶೇ 16ರಷ್ಟು ಜನಸಂಖ್ಯೆ ಹೊಂದಿದ್ದೇವೆ. ನಮಗೆ ಶೇ 12 ರಷ್ಟಾದರೂ ಮೀಸಲಾತಿ ಕೊಡಬೇಕಿದೆ. ನಮ್ಮ ಸಮುದಾಯದ ಒಟ್ಟು ಜನಸಂಖ್ಯೆಯ ಬಗ್ಗೆ ಗಣತಿ ಮಾಡಬೇಕು. ಕಾಂತರಾಜ ವರದಿಯಲ್ಲಿ ನಮ್ಮ ಜನಸಂಖ್ಯೆಯ ಬಗ್ಗೆ ತಿರುಚಲಾಗಿದೆ ಎಂದು ಆರೋಪ ಮಾಡಿದರು.

ನಾನು ನನ್ನ ಸಮಾಜಕ್ಕೆ ಏನಾದರೂ ಕೊಡಬೇಕಾದರೆ ಮೀಸಲಾತಿ‌ ಕೊಡಬಹುದಾಗಿದೆ. ಇದು ನಾನು ನನ್ನ ಸಮಾಜಕ್ಕೆ ಮಾಡುವ ಕೆಲಸವಾಗಿದೆ. ನಾವು ಕೇಳುವುದು ಭಿಕ್ಷೆ ಅಲ್ಲ, ಇದು ನಮ್ಮ ಹಕ್ಕಾಗಿದೆ. ಅನಿವಾರ್ಯವಾದರೆ ಚಿನ್ನಪ್ಪರೆಡ್ಡಿ ನೇತೃತ್ವದಲ್ಲಿ ಹಿಂದೆ ನಡೆದ ಹೋರಾಟದಂತೆ ಬೆಂಗಳೂರಿನ ರಸ್ತೆಗಳಲ್ಲಿ ನಾವು ಮಾಡಲು ಸಿದ್ಧ ಎಂದು ಘೋಷಿಸಿದರು.

ಶೇ 15ರ ಮೀಸಲಾತಿಗೆ ಬಾಲಕೃಷ್ಣ ಒತ್ತಾಯ

ಸಭೆಯಲ್ಲಿ ಮಾತನಾಡಿದ ರಾಜ್ಯ ಒಕ್ಕಲಿಗ ಸಂಘದ ರಾಜ್ಯಾಧ್ಯಕ್ಷ ಸಿ.ಎನ್.ಬಾಲಕೃಷ್ಣ, ಕರ್ನಾಟಕದಲ್ಲಿ ನಮ್ಮ ಸಮಾಜದ ಜನಸಂಖ್ಯೆ ಶೇ 21ಕ್ಕೂ ಹೆಚ್ಚಿದೆ. ಆದರೆ ಕೇವಲ ಶೇ 4 ರಷ್ಟು ಮೀಸಲಾತಿ ನೀಡಲಾಗಿದೆ. ನಾಡಿಗೆ ಆಹಾರ ಭದ್ರತೆ ನೀಡಿರುವುದು ನಮ್ಮ ಸಮಾಜ. ಜನಾಂಗದ ಹಿತದೃಷ್ಟಿಯಿಂದ ನಮ್ಮ ಸಮುದಾಯಕ್ಕೆ ಶೇ 15ರಷ್ಟು ಮೀಸಲಾತಿ ಹೆಚ್ಚಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಶೀಘ್ರ ಚರ್ಚೆ ಮಾಡಲಿ. ಪೂಜ್ಯ ಶ್ರೀಗಳು ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಹೇಳಿದರು.

ಮೀಸಲಾತಿಗಾಗಿ ಪಕ್ಷಾತೀತ ಹೋರಾಟ

ಮೀಸಲಾತಿ ಪಡೆದುಕೊಳ್ಳಲು ಸಜ್ಜಾಗಿರುವ ಒಕ್ಕಲಿಗ ಸಮುದಾಯವು ಪಕ್ಷಾತೀತ ಹೋರಾಟ ನಡೆಸಲು ಮುಂದಾಗಿದೆ. ಒಕ್ಕಲಿಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲು ಬೆಂಗಳೂರಿನ ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಹಲವರು, ಒಕ್ಕಲಿಗ ಸಮುದಾಯದ ಜನಸಂಖ್ಯೆ ಜಾಸ್ತಿ ಇದ್ದರೂ ಜಾತಿವಾರು ಜನಗಣತಿ ಸರಿಯಾಗಿ ನಡೆದಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಿದಂತೆ ಒಕ್ಕಲಿಗರ ಸಮುದಾಯದ ಮೀಸಲಾತಿಯನ್ನೂ ಹೆಚ್ಚಿಸಬೇಕಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 16ಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದವಿದೆ. ಈಗ ಹಿಂದುಳಿದ ಪ್ರವರ್ಗ 3 ಎ ಅಡಿಯಲ್ಲಿ ನೀಡಿರುವ ಶೇ 4ರಷ್ಟು ಮೀಸಲಾತಿ ಪ್ರಮಾಣವನ್ನು ಶೇ.16ಕ್ಕೆ ಹೆಚ್ಚಿಸಬೇಕು ಎಂದು ಹಲವರು ಆಗ್ರಹಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಆರ್.ಅಶೋಕ್, ಡಾ ಕೆ.ಸುಧಾಕರ್, ಕೆ.ಗೋಪಾಲಯ್ಯ, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಶಾಸಕರಾದ ಎಂ.ಕೃಷ್ಣಪ್ಪ, ಡಾ.ರಂಗನಾಥ್, ಎಂಎಲ್​ಸಿಗಳಾದ ರವಿ, ದಿನೇಶ್ ಗೂಳಿಗೌಡ ಪಾಲ್ಗೊಂಡಿದ್ದರು.

Published On - 2:21 pm, Sun, 27 November 22