ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡಲಾಗುವುದು: ವಿಶೇಷ ಅಧಿಕಾರಿ ಅಜಯ್ ನಾಗಭೂಷಣ್

| Updated By: ವಿವೇಕ ಬಿರಾದಾರ

Updated on: Dec 07, 2022 | 7:26 PM

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ಅತ್ಯಂತ ಪಾರದರ್ಶಕವಾಗಿ, ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ನಡೆಸಲಾಗುವುದು ಎಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ವಿಶೇಷ ಅಧಿಕಾರಿ ಅಜಯ್ ನಾಗಭೂಷಣ್ ತಿಳಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡಲಾಗುವುದು: ವಿಶೇಷ ಅಧಿಕಾರಿ ಅಜಯ್ ನಾಗಭೂಷಣ್
Follow us on

ಬೆಂಗಳೂರು: ಚುನಾವಣಾ ಆಯೋಗದ ಮಾರ್ಗಸೂಚಿಯ ನಿರ್ದೇಶನದಂತೆ ಮಹದೇವಪುರ ವಿಧಾನಸಭಾ ಕ್ಷೇತ್ರದ (Mahadevapura Assembly constituency) ಮತದಾರರ ಪಟ್ಟಿಯ ಪರಿಷ್ಕರಣೆ (Voter list revision) ನಡೆಸಲಾಗುತ್ತಿದೆ. ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ಅತ್ಯಂತ ಪಾರದರ್ಶಕವಾಗಿ, ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರದ ವಿಶೇಷ ಅಧಿಕಾರಿ ಅಜಯ್ ನಾಗಭೂಷಣ್ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಮಹದೇವಪುರ ವಲಯದ ಜಂಟಿ ಆಯುಕ್ತರವರ ಕಚೇರಿ ಸಭಾಂಗಣದಲ್ಲಿ ಅಜಯ್ ನಾಗಭೂಷಣ್ ನೇತೃತ್ವದಲ್ಲಿ ಇಂದು (ಡಿ.7) ನಡೆದ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡುತಿದ ಅವರು ಮತದಾರರ ಪಟ್ಟಿಯ ಪರಿಶೀಲನೆಯನ್ನು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಹೆಸರುಗಳನ್ನು ಕೈಬಿಡುವಾಗ ಅದಕ್ಕೆ ಪೂರಕವಾದ ಎಲ್ಲ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುವುದು ಎಂದರು.

ಇದನ್ನೂ ಓದಿ: ವೋಟರ್​ ಐಡಿ ಪರಿಷ್ಕರಣೆಯಲ್ಲಿ ಅಕ್ರಮ: ಬಿಬಿಎಂಪಿ ಮಾಜಿ ಕಾರ್ಪೊರೇಟರ್​ ತಾಯಿ ಹೆಸರೇ ಡಿಲೀಟ್​

ಮತದಾರರ ಪಟ್ಟಿಯಲ್ಲಿನ ಸೇರ್ಪಡೆ, ತಿದ್ದುಪಡಿ, ಬದಲಾವಣೆ, ತೆಗೆದು ಹಾಕುವ ಕುರಿತ ವಿವರವಾದ ಅಂಕಿ ಅಂಶಗಳನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ಪರಿಶೀಲನೆಗೆ ನೀಡಲಾಗುವುದು. ಕ್ಷೇತ್ರ ಮಟ್ಟದ ಎಲ್ಲಾ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲಾಗಿದೆ. ಮತದಾರರ ಪಟ್ಟಿಯ ಕುರಿತು ರಾಜಕೀಯ ಪಕ್ಷಗಳು ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಿದ್ದಲ್ಲಿ ಮುಕ್ತವಾಗಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿನ ತಮ್ಮ ಸಂದೇಹಗಳನ್ನು ಬಗೆಹರಿಸಿ ಕೊಳ್ಳಲು ಮತದಾರರ ಸಹಾಯವಾಣಿಗೆ ಸಂಪರ್ಕಿಸಬಹುದು. ರಾಜಕೀಯ ಪಕ್ಷಗಳವತಿಯಿಂದ ಬೂತ್ ಮಟ್ಟದ ಸಹಾಯಕರ ಪಟ್ಟಿಯ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಹಾಗೂ ಅವರು ಬಿಎಲ್‌ಓ ಗಳೊಂದಿಗೆ ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿಯ ಸಮಸ್ಯೆಗಳ ಬಗ್ಗೆ ಸಮನ್ವಯದಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಇದನ್ನೂ ಓದಿ: ಆರ್​. ಆರ್​ ನಗರದಲ್ಲಿ ಕಾಂಗ್ರೆಸ್​ ಬೆಂಬಲಿತ, ಒಕ್ಕಲಿಗ ಮತದಾರರ ಹೆಸರು ಡಿಲೀಟ್: ಚುನಾವಣಾ ಆಯೋಗಕ್ಕೆ ಡಿಕೆ ಸುರೇಶ್ ದೂರು

ಮಹದೇವಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಅಂಗಡಿ, ಹೋಟೆಲ್​ಗಳ ಗೊಡೆಯ ಮೇಲೆ ಮತದಾರರ ಸಹಾಯವಾಣಿ (Voters helpline) ಹಾಗೂ ಆ ಪ್ರದೇಶದ ಬಿಎಲ್ಓಗಳ ಹೆಸರು ಹಾಗೂ ದೂರವಾಣಿಯ ಮಾಹಿತಿ ಇರುವ ಸ್ಟಿಕ್ಕರ್‌ಗಳನ್ನು ಅಂಟಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಮಹದೇವಪುರ ವಲಯದ ಜಂಟಿ ಆಯುಕ್ತರಾದ ವೆಂಕಟಾಚಲಪತಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:57 pm, Wed, 7 December 22