ಬೆಂಗಳೂರು: ದೇಶ, ವಿದೇಶಿಯರಿಗೆ ಸೇರಿದಂತೆ ಬೆಂಗಳೂರಿಗರಿಗೆ ಸಂಜೆಯಾಗುತ್ತಿದ್ದಂತೆ ವಿವಿಧ ಶೈಲಿಯ ತಿಂಡಿ-ತಿನಿಸನ್ನು ಉಣಬಡಿಸುತ್ತಿದ್ದ ವಿವಿ ಪುರಂ ಫುಡ್ ಸ್ಟ್ರೀಟ್(VV Puram Food Street) ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್ ಮಾದರಿ ವಿವಿ ಪುರಂ ಫುಡ್ ಸ್ಟ್ರೀಟ್ ಅನ್ನು ನವೀಕರಿಸಲು ಬಿಬಿಎಂಪಿಯು(BBMP) 2022ರಲ್ಲಿ 6 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು. ಆದ್ರೆ ಇನ್ನೂ ಕೂಡ ವಿವಿ ಪುರಂ ಫುಡ್ ಸ್ಟ್ರೀಟ್ ಹೊಸ ಸ್ಪರ್ಶ ಪಡೆದಿಲ್ಲ. ಆದ್ರೆ ಕಾಮಗಾರಿ ಜುಲೈ 15ರೊಳಗೆ ಮುಗಿಯಲಿದೆ ಎನ್ನಲಾಗುತ್ತಿದೆ.
ಪ್ರತಿ ದಿನ ವಿವಿ ಪುರಂ ಫುಡ್ ಸ್ಟ್ರೀಟ್‌ಗೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಸಂಜೆಯಾಗುತ್ತಿದ್ದಂತೆ ಬೀದಿ ಬದಿಯಲ್ಲಿ ನಿಂತು ರುಚಿಕರವಾದ ಆಹಾರ ಸವಿಯಲು ಇಲ್ಲಿ ಜನ ಸೇರುತ್ತಾರೆ. ಅಲ್ಲದೆ ಈ ಬೀದಿ ಪ್ರವಾಸಿಗರು ಮತ್ತು ಯೂಟ್ಯೂಬ್ಗಳಿಗೆ ಫೇವರೆಟ್ ಸ್ಥಳ. ಸಜ್ಜನ್ ರಾವ್ ವೃತ್ತದಿಂದ ಮಿನರ್ವ ವೃತ್ತದವರೆಗಿನ ಫುಡ್ ಸ್ಟ್ರೀಟ್‌ನಲ್ಲಿ 40ಕ್ಕೂ ಹೆಚ್ಚು ಆಹಾರ ಮಳಿಗೆಗಳಿವೆ. ಜೊತೆಗೆ ತಳ್ಳುವ ಗಾಡಿಗಳಲ್ಲಿ ಬಗೆ ಬಗೆಯ ತಿಂಡಿ ಮಾರಾಟ ಮಾಡಲಾಗುತ್ತದೆ. ಸಂಜೆ ಆಗುವುದೇ ತಡ, ಆಹಾರ ಪ್ರಿಯರ ದೊಡ್ಡ ದಂಡೇ ಈ ರಸ್ತೆಗೆ ಹರಿದು ಬರುತ್ತದೆ. ಆದರೆ, ಈ ಭಾಗದಲ್ಲಿ ಮೂಲ ಸೌಕರ್ಯಗಳಿಲ್ಲದೆ ಗ್ರಾಹಕರು ಮತ್ತು ಮಳಿಗೆಗಳ ಮಾಲೀಕರು ಪ್ರತಿ ನಿತ್ಯ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ಹಲವೆಡೆ ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದು, ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಮತ್ತೊಂದೆಡೆ ವಾಹನ ದಟ್ಟಣೆ ಹೆಚ್ಚಿ ಸಮಸ್ಯೆಯಾಗುತ್ತಿದೆ. ಹೀಗಾಗಿ, ಬಿಬಿಎಂಪಿಯು ಫುಡ್ ಸ್ಟ್ರೀಟ್ ಅನ್ನು ಪುನರ್ ವಿನ್ಯಾಸಗೊಳಿಸಲು ಮುಂದಾಗಿತ್ತು.
ಇದನ್ನೂ ಓದಿ: VV Puram Food Street: ಫುಡ್ ಸ್ಟ್ರೀಟ್‌ಗೆ ನಿಮ್ಮ ಆಯ್ಕೆಯ ಹೆಸರು ನೀಡಲು ಮುಕ್ತ ಅವಕಾಶ
ಡಿಸೆಂಬರ್ 2022 ರಲ್ಲಿ ಬಿಬಿಎಂಪಿಯು ಈ ಬಗ್ಗೆ ಪ್ರಸ್ತಾವನೆ ಮಂಡಿಸಿತ್ತು. ಈ ಪ್ರಕಾರ ನಾಲ್ಕು ತಿಂಗಳೊಳಗೆ ನವೀಕರಣವನ್ನು ಮಾಡಬೇಕಾಗಿತ್ತು. ಆದರೆ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ, ರಸ್ತೆ ಅಗೆದು ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಫುಡ್ ಸ್ಟ್ರೀಟ್ ವೆಂಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಮಣಿಕಾಂತ್ ಗುಪ್ತಾ ಮಾತನಾಡಿ, ಬೆಂಗಳೂರು ಮಳೆ ಮತ್ತು ಚುನಾವಣೆ ಕಾಮಗಾರಿ ವಿಳಂಬಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಇನ್ನು ಕಾಮಗಾರಿ ಹಿನ್ನೆಲೆ ಸಂಜೆ 6 ಗಂಟೆಯಿಂದ ಅಂಗಡಿಗಳನ್ನು ಓಪನ್ ಮಾಡಲು ಅನುಮತಿಸಲಾಗಿದೆ. ಈ ಹಿಂದೆ ಸಂಜೆ 4 ಗಂಟೆಗೆ ಇಲ್ಲಿ ಅಂಗಡಿಗಳು ಓಪನ್ ಆಗುತ್ತಿದ್ದವು. ಬಿಬಿಎಂಪಿ ವಲಯ ಆಯುಕ್ತ (ದಕ್ಷಿಣ) ಜೈರಾಮ್ ರಾಜಪುರ ಮಾತನಾಡಿದ್ದು ಚುನಾವಣೆಗಳಂತಹ ಅನಿವಾರ್ಯ ಸಂದರ್ಭಗಳಿಂದಾಗಿ ನವೀಕರಣ ವಿಳಂಬವಾಗಿದೆ ಆದರೆ ಜುಲೈ 15 ರೊಳಗೆ ಅದನ್ನು ಪೂರ್ಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ