ವಿವಿ ಪುರಂ ಸುಬ್ರಹ್ಮಣ್ಯ ಸ್ವಾಮಿ ಬೆಳ್ಳಿ ತೇರು: ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ, ಪ್ರತಿಭಟಿಸಲು ಮುಂದಾಗಿದ್ದವರ ಬಂಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 29, 2022 | 1:36 PM

ವಾಡಿಕೆಯಂತೆ ಸುಬ್ರಮಣ್ಯ ರಥ ಮತ್ತು ದೇವಾಲಯವನ್ನು ಗರುಡ ಪಕ್ಷಿಯು ಮಂಗಳವಾರವೂ ಪ್ರದಕ್ಷಿಣೆ ಹಾಕಿ, ಗೋಪುರದ ಮೇಲೆ ಕುಳಿತುಕೊಂಡಿತು.

ವಿವಿ ಪುರಂ ಸುಬ್ರಹ್ಮಣ್ಯ ಸ್ವಾಮಿ ಬೆಳ್ಳಿ ತೇರು: ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ, ಪ್ರತಿಭಟಿಸಲು ಮುಂದಾಗಿದ್ದವರ ಬಂಧನ
ವಿವಿ ಪುರಂ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ನಗರದ ವಿಶ್ವೇಶ್ವರಪುರದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಮಂಗಳವಾರ ರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಸಾಲಂಕೃತ ಉತ್ಸವಮೂರ್ತಿಯಿದ್ದ ರಥವನ್ನು ಭಕ್ತರು ಎಳೆದು ಧನ್ಯ ಭಾವ ಅನುಭವಿಸಿದರು. ಸಜ್ಜನ್​ರಾವ್ ಸರ್ಕಲ್​ನ ಮುಕ್ಕಾಲು ಭಾಗ ಸಂಚರಿಸಿದ ರಥವನ್ನು ಅಲ್ಲಿಯೇ ನಿಲ್ಲಿಸಲಾಗಿದೆ. ರಾತ್ರಿ 8-30ಕ್ಕೆ ಮತ್ತೊಮ್ಮೆ ರಥೋತ್ಸವ ಆರಂಭವಾಗಿ ದೇಗುಲವನ್ನು ತಲುಪಲಿದೆ. ವಾಡಿಕೆಯಂತೆ ಸುಬ್ರಮಣ್ಯ ರಥ ಮತ್ತು ದೇವಾಲಯವನ್ನು ಗರುಡ ಪಕ್ಷಿಯು ಮಂಗಳವಾರವೂ ಪ್ರದಕ್ಷಿಣೆ ಹಾಕಿ, ಗೋಪುರದ ಮೇಲೆ ಕುಳಿತುಕೊಂಡಿತು. ಗರುಡನನ್ನು ಕಂಡ ಭಕ್ತರು, ಆಗಸದತ್ತ ಮುಖ ಮಾಡಿ ಕೈಮುಗಿದರು. ನಂತರ ವಿವಿಧ ಸೇವೆಗಳು ಆರಂಭವಾದವು. ಬೆಳ್ಳಿ ರಥದಲ್ಲಿ ಸುಬ್ರಮಣ್ಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಪೂಜಾ ಕೈಂಕರ್ಯ ಆರಂಭವಾಯಿತು. ಅನ್ಯಧರ್ಮೀಯರಿಗೆ ಹಿಂದೂ ಧರ್ಮದ ಉತ್ಸವಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಆಗ್ರಹ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ದೇಗುಲದ ಸುತ್ತಲು ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ರಥೋತ್ಸವದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡುವ ಕುರಿತು ಪ್ರತಿಕ್ರಿಯಿಸಿದ ಶಾಸಕ ಉದಯ್​​ ಗರುಡಾಚಾರ್​, ‘ಒಂದು ದಿನ ವ್ಯಾಪಾರ ಮಾಡಿ ಕುಟುಂಬವನ್ನು ಸಾಕುತ್ತಾರೆ. ನಾವು ಯಾಕೆ ಅವರ ಹೊಟ್ಟೆ ಮೇಲೆ ಹೊಡೆಯಬೇಕು. ದರ್ಗಾ ಬಳಿ ಹಿಂದೂಗಳು ಕೂಡ ವ್ಯಾಪಾರ ಮಾಡಬಹುದು’ ಎಂದು ಹೇಳಿದರು. ರಥೋತ್ಸವ ಸಂಭ್ರಮದಿಂದ ನೆರವೇರಿತು, ನಾನೂ ಭಾಗವಹಿಸಿದ್ದೆ. ಹಿಂದೂಗಳು ಯಾವತ್ತು ಯಾರಿಗೂ ತೊಂದರೆ ಕೊಡದಿರುವ ಸಮುದಾಯ. ಕೆಲ ಹುಡುಗರು ಮಾತ್ರ ಸುಮ್ಮನೆ ಗಲಾಟೆ ಮಾಡ್ತಾರೆ ಅಷ್ಟೇ ಎಂದು ಹೇಳಿದರು.

ರೌಡಿಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಸೇರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಅವರು ಸುನೀಲ್ ಕುಮಾರ್ ಎಂದು ಮಾತ್ರ ಗೊತ್ತು. ಅವರೇ ಸೈಲೆಂಟ್ ಸುನೀಲ್ ಅಂತ ಗೊತ್ತಿರಲಿಲ್ಲ. ರಕ್ತಧಾನ ಶಿಬಿರ ಎನ್ನುವ ಕಾರಣ ಸಂಸದ ಪಿ.ಸಿ.ಮೋಹನ್ ಸೇರಿದಂತೆ ಎಲ್ಲರೂ ಭಾಗಿಯಾಗಿದ್ದರು. ಹಾಗಾಗಿ ನಾನು ಭಾಗಿವಹಿಸಿದ್ದೆ ಅಷ್ಟೇ ಎಂದರು.

ಹಿಂದುತ್ವ ಪರ ಸಂಘಟನೆಗಳ ನಾಯಕರ ಬಂಧನ

ಸುಬ್ರಹ್ಮಣ್ಯ ಸ್ವಾಮಿ ಬೆಳ್ಳಿ ರಥೋತ್ಸವಕ್ಕೆ ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ ಹಿಂದುತ್ವಪರ ಸಂಘಟನೆಗಳ ಹೋರಾಟಗಾರರನ್ನು ಹನುಮಂತನಗರ ಪೊಲೀಸರು ವಶಕ್ಕೆ ಪಡೆದರು. ಸಜ್ಜನ್​ರಾವ್ ಸರ್ಕಲ್​​ನಲ್ಲಿ ನಡೆಯುವ ಬೆಳ್ಳಿ ರಥೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಿದರೆ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಸೇರಿದಂತೆ ಹಲವು ಕಾರ್ಯಕರ್ತರನ್ನು ತಡರಾತ್ರಿ 1 ಗಂಟೆಗೆ ಪೊಲೀಸರು ವಶಕ್ಕೆ ಪಡೆದುಕೊಂಡರು.

Published On - 1:34 pm, Tue, 29 November 22