ಬೆಂಗಳೂರು, ಮೇ 1: ಬೆಂಗಳೂರಿನಲ್ಲಿ ತಾಪಮಾನ (Bengaluru Temperature) ಗರಿಷ್ಠ 38.5 ಡಿಗ್ರಿ ಸೆಲ್ಸಿಯಸ್ಗೆ ತಲುಪಿದ್ದು, ಬಿಸಿಲಿನ ಬೇಗೆಗೆ ಜನ ಕಂಗಾಲಾಗಿದ್ದಾರೆ. ಬಿಸಿಗಾಳಿ, ನೀರಿನ ಬಿಕ್ಕಟ್ಟು ಮತ್ತಿತರ ಕಾರಣಗಳಿಂದ ನಗರದಲ್ಲಿ ಸೋಂಕುಗಳ ಹರಡುವಿಕೆಯೂ ಹೆಚ್ಚಾಗುತ್ತಿದೆ. ಟೈಫಾಯಿಡ್ (Typhoid) ಮತ್ತು ತೀವ್ರವಾದ ಜಠರ ಕರುಳಿನ ಉರಿಯೂತ ಅಥವಾ ಗ್ಯಾಸ್ಟ್ರೋಎಂಟರೈಟಿಸ್ (Gastroenteritis) ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರುವುದಾಗಿ ಖಾಸಗಿ ಆಸ್ಪತ್ರೆಗಳ ಮೂಲಗಳು ತಿಳಿಸಿವೆ.
ಟೈಫಾಯಿಡ್ ಪ್ರಮುಖವಾಗಿ ನೀರಿನಿಂದ ಹರಡುತ್ತದೆ. ಆದರೆ ಜಠರ ಹಾಗೂ ಕರುಳು ಸಂಬಂಧಿತ ಸಮಸ್ಯೆಗಳು ಕಲುಷಿತ ನೀರು, ಆಹಾರದಿಂದ ಹರಡುತ್ತವೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಟೈಫಾಯಿಡ್ ಮತ್ತು ಜಠರ ಕರುಳಿನ ಉರಿಯೂತ ಪ್ರಕರಣಗಳ ಗಮನಾರ್ಹ ಹೆಚ್ಚಳಕ್ಕೆ ನೀರಿನ ಬಿಕ್ಕಟ್ಟು ಅಥವಾ ಮಾಲಿನ್ಯ ಕಾರಣವಾಗಿರಬಹುದು. ಇವುಗಳ ಸಾಮಾನ್ಯ ರೋಗಲಕ್ಷಣಗಳಲ್ಲಿ ಜ್ವರ, ಹೊಟ್ಟೆ ನೋವು ಮತ್ತು ಅತಿಸಾರ ಸೇರಿವೆ. ಕಳೆದ ತಿಂಗಳಲ್ಲಿ ಸುಮಾರು 100 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನಿರ್ದೇಶಕಿ ಡಾ. ಶೀಲಾ ಮುರಳಿ ಚಕ್ರವರ್ತಿ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ಸ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಸೋಂಕು ಹರಡದಂತೆ ತಡೆಗಟ್ಟಲು, ರೋಗಪೀಡಿತ ಜನರಿರುವ ಪ್ರದೇಶಗಳಿಗೆ ಪ್ರಯಾಣಿಸುವ ಜನರು ಟೈಫಾಯಿಡ್ ಲಸಿಕೆಯನ್ನು ತೆಗೆದುಕೊಳ್ಳುವುದು ಉತ್ತಮ. ಶುದ್ಧ ಮತ್ತು ಉತ್ತಮ ಕುಡಿಯುವ ನೀರನ್ನೇ ಬಳಸಬೇಕು. ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಸೋಂಕು ತಡೆಗಟ್ಟಲು ಕಲುಷಿತ ಆಹಾರ ಸೇವನೆಯಿಂದ ದೂರವಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಸಿಲ ಬೇಗೆ ಜತೆ ಜನರಿಗೆ ಮತ್ತೊಂದು ಬರೆ: ಜ್ಯೂಸ್, ಎಳನೀರು ಮತ್ತಷ್ಟು ದುಬಾರಿ
ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕಿನಿಂದ ಜಠರಗರುಳಿನ ಪ್ರಕರಣಗಳ ಉಲ್ಬಣವಾಗಬಹುದು. ಸದ್ಯ ವಾರಕ್ಕೆ 20ರಷ್ಟು ಜಠರಗರುಳಿನ ಸೋಂಕಿನ ಪ್ರಕರಣಗಳು ನಮ್ಮ ಆಸ್ಪತ್ರೆಯಲ್ಲಿ ವರದಿಯಾಗುತ್ತಿವೆ. ಇದು ಡಿಸೆಂಬರ್ಗೆ ಹೋಲಿಸಿದರೆ ಶೇ 50 ರಷ್ಟು ಹೆಚ್ಚಾಗಿದೆ. ಕಲುಷಿತ ನೀರು ಮತ್ತು ಸರಿಯಾಗಿ ಬೇಯಿಸದ ಮಾಂಸಾಹಾರದಿಂದ ಈ ಸೋಂಕು ಹರಡುತ್ತಿದೆ ಎಂದು ನಾರಾಯಣ ಹೆಲ್ತ್ ಸಿಟಿಯ ಇಂಟರ್ನಲ್ ಮೆಡಿಸಿನ್ನ ಸಲಹೆಗಾರ ಡಾ. ನಿಧಿನ್ ಮೋಹನ್ ತಿಳಿಸಿದ್ದಾರೆ. ಸದ್ಯ ಒಂದು ವಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ಟೈಫಾಯಿಡ್ ಪ್ರಕರಣಗಳು ವರದಿಯಾಗುತ್ತಿವೆ ಎಂದೂ ಅವರು ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:41 am, Wed, 1 May 24