ನಮ್ಮ ರಾಜ್ಯ ವಿದೇಶಿಗರ ಪಾಲಿಗೆ ಧರ್ಮಛತ್ರ ಅಲ್ಲ: ವಿಧಾನ ಪರಿಷತ್​ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 07, 2022 | 1:37 PM

ಪ್ರತಿ ಪೊಲೀಸ್ ಸ್ಟೇಷನ್​ನಲ್ಲಿಯೂ ರಿಜಿಸ್ಟರ್ ನಿರ್ವಹಿಸಲು ಸೂಚಿಸಿದ್ದೇನೆ. ದೇಶದ ಏಕತೆ ಮತ್ತು ಭದ್ರತೆಯ ವಿಚಾರದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಮ್ಮ ರಾಜ್ಯ ವಿದೇಶಿಗರ ಪಾಲಿಗೆ ಧರ್ಮಛತ್ರ ಅಲ್ಲ: ವಿಧಾನ ಪರಿಷತ್​ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿಯೇ ಉಳಿದಿರುವ ವಿದೇಶಿಗರು ನಡೆಸುತ್ತಿರುವ ಡ್ರಗ್ಸ್​ ದಂಧೆಯ ಬಗ್ಗೆ ವಿಧಾನ ಪರಿಷತ್​ನಲ್ಲಿ ಸೋಮವಾರ ಚರ್ಚೆ ನಡೆಯಿತು. ವಿದೇಶಿಗರು ಮತ್ತು ಡ್ರಗ್ಸ್​ ದಂಧೆಕೋರರ ಪಾಲಿಗೆ ನಮ್ಮ ದೇಶ ಧರ್ಮಛತ್ರ ಆಗಬಾರದು. ಇದನ್ನು ತಡೆಯಲು ರಾಜ್ಯ ಸರ್ಕಾರ ಎಲ್ಲ ಕ್ರಮ ತೆಗೆದುಕೊಳ್ಳುತ್ತಿದೆ. ಪ್ರತಿ ಪೊಲೀಸ್ ಸ್ಟೇಷನ್​ನಲ್ಲಿಯೂ ರಿಜಿಸ್ಟರ್ ನಿರ್ವಹಿಸಲು ಸೂಚಿಸಿದ್ದೇನೆ. ದೇಶದ ಏಕತೆ ಮತ್ತು ಭದ್ರತೆಯ ವಿಚಾರದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ. ನೈಜಿರಿಯಾ ಪ್ರಜೆಗಳು ಡ್ರಗ್ಸ್​ ದಂಧೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಸಿಸಿಬಿ ಅಧಿಕಾರಿಗಳು ದಿನಕ್ಕೆ ಎರಡು ಮೂರು ದಾಳಿಗಳನ್ನು ನಡೆಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಬದಲಾಗಿ, ಡಿಟೆನ್ಷನ್ ಸೆಂಟರ್​ಗಳೇ ಸಣ್ಣದಾಗುತ್ತಿವೆ. ನೈಜಿರಿಯಾ ಹೆಣ್ಣು ಮಕ್ಕಳನ್ನು ನಿಯಂತ್ರಿಸುವುದು ನಮ್ಮ ಪೊಲೀಸರಿಗೂ ಕಷ್ಟವಾಗುತ್ತಿದೆ. ಮಾದಕ ವಸ್ತು ನಿಯಂತ್ರಣ ಕಾಯ್ದೆಯಡಿ ಈವರೆಗೆ 8000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಡ್ರಗ್ಸ್​ ಪಿಡುಗು ನಿಯಂತ್ರಣಕ್ಕೆ ಬರದಿದ್ದರೆ ಪೊಲೀಸರನ್ನೇ ಹೊಣೆಯಾಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಚರ್ಚೆ ಆರಂಭಿಸಿದ್ದ ಸದಸ್ಯ ಸಲೀಂ ಅಹ್ಮದ್, ಬಹುತೇಕ ಅಕ್ರಮ ವಿದೇಶಿಗರು ಡ್ರಗ್ಸ್ ಪೆಡ್ಲರ್‌ಗಳಾಗಿದ್ದಾರೆ; ವೀಸಾ ಅವಧಿ ಮುಗಿದವರನ್ನು ತಕ್ಷಣ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಇದು ಬೆಂಗಳೂರಿಗೆ ಮಾತ್ರ ಸೀಮಿತ ಆಗಿಲ್ಲ, ಹುಬ್ಬಳ್ಳಿ ಶಿವಮೊಗ್ಗಕ್ಕೂ ಹರಡಿದೆ ಎಂದರು.

ಶೂನ್ಯ ವೇಳೆಯಲ್ಲಿ ಕಾಸರಗೋಡು ಶಾಲೆಗೆ ಮಲಯಾಳಂ ಶಿಕ್ಷಕರ ನೇಮಕ ವಿಚಾರ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್, ಕನ್ನಡ ಶಿಕ್ಷಕರ ನೇಮಕ ಮಾಡುವಂತೆ ಕೇರಳ ಹೈಕೋರ್ಟ್ ಆದೇಶವಿದ್ದರೂ ಅಲ್ಲಿ ಮಲಯಾಳಂ ಶಿಕ್ಷಕರನ್ನು ನೇಮಿಸಲಾಗಿದೆ. ಅಲ್ಲಿ ಶೀಘ್ರ ಕನ್ನಡ ಶಿಕ್ಷಕರ ನೇಮಕಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಗಡಿಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೇರಳ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸರ್ಕಾರಕ್ಕೆ ಸಲೀಂ ಅಹ್ಮದ್ ಒತ್ತಾಯಿಸಿದರು. ಚರ್ಚೆ ವೇಳೆ ಸರ್ಕಾರದ ಪರವಾಗಿ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ಕುಮಾರ್, ‘ಈ ಕುರಿತು ಕೇರಳ ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಅಲ್ಲಿನ ಮಕ್ಕಳ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದರು.

ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನಿಂದ ಕೊಲೆಯಾದ ದಿನೇಶ್ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಆಗ್ರಹಿಸಿದರು. ಹರ್ಷ ಕೊಲೆಯಾದಾಗ ₹ 25 ಲಕ್ಷವನ್ನು ಸರ್ಕಾರವೇ ಕೊಟ್ಟಿದೆ. ಆದರೆ ದಿನೇಶ್​ನನ್ನು ಬಿಜೆಪಿ ಕಾರ್ಯಕರ್ತ ಕೊಂದರೂ ಪರಿಹಾರ ಕೊಟ್ಟಿಲ್ಲ ಎಂದು ದೂರಿದರು. ‘ಯಾರೇ ತಪ್ಪು ಮಾಡಿದರೂ ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಕ್ರಮ ತೆಗೆದುಕೊಳ್ಳುತ್ತೇವೆ. ಇಲಾಖೆಯಿಂದ ಕೊಡಬಹುದಾದ ಪರಿಹಾರವನ್ನು ಕೊಡುತ್ತೇವೆ’ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದರು.

ಕೊಡಗಿಗೆ ಬರ್ತೀನವ್ವ

ಅರಣ್ಯ ಸಚಿವರಿಗೆ ಕೊಡಗು ಜಿಲ್ಲೆಗೆ ಬರುವುದಕ್ಕೆ ಭಯಾವೇ’ ಎಂದು ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನಿಸಿದರು. ಈ ಸರ್ಕಾರದಲ್ಲಿ ಮೂವರು ಅರಣ್ಯ ಸಚಿವರಾದರು. ಆದರೆ ಯಾರೂ ಕೊಡಗು ಜಿಲ್ಲೆಗೆ ಬಂದಿಲ್ಲ ಏಕೆ ಎಂದು ಅವರು ಕೇಳಿದರು. ಏಪ್ರಿಲ್ ಮೊದಲನೇ ವಾರದಲ್ಲಿ ಬಂದೇ ಬರ್ತೀನವ್ವ ಎಂದ ಅರಣ್ಯ ಸಚಿವ ಉಮೇಶ್ ಕತ್ತಿ ಭರವಸೆ ನೀಡಿದರು. ಕೊಡಗು ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಸಮಸ್ಯೆ ಬಗೆಹರಿಯುತ್ತಿಲ್ಲ. ಅರಣ್ಯ ಸಚಿವರು ಕೊಡಗು ಜಿಲ್ಲೆಗೆ ಭೇಟಿ ಕೊಡಬೇಕು ಎಂದು ಕೇಳಿಕೇಳಿ ಸಾಕಾಗಿದೆ. ನಾನು ಕೊನೆಯ ಬಾರಿ ಕೇಳುತ್ತಿದ್ದೇನೆ. ನಂತರ ಸಭಾಪತಿ ಎದುರು ಪ್ರತಿಭಟನೆ ಕೂರುತ್ತೇನೆ ಎಂದು ಸದಸ್ಯೆ ವೀಣಾ ಅಚ್ಚಯ್ಯ ಆಗ್ರಹಿಸಿದರು.

ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ 646 ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಿದ್ದೇವೆ. ಪ್ರವಾಸಿ ತಾಣಗಳೂ ಸೇರಿದಂತೆ ಉಳಿದೆಡೆ ಚಾರ್ಜಿಂಗ್ ಕೇಂದ್ರ ಆರಂಭಿಸಲಾಗುವುದು. ಚಾರ್ಜಿಂಗ್ ಕೇಂದ್ರ ಆರಂಭಿಸಲು ಹೆಸ್ಕಾಂ ಸಹಾಯ ಮಾಡುತ್ತದೆ. ಖಾಸಗಿಯವರೂ ಚಾರ್ಜಿಂಗ್ ಕೇಂದ್ರ ಆರಂಭಿಸಲು ಸಹಕಾರ ಕೊಡುತ್ತೇವೆ. ಆದರೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಾಗಿರುವುದರಿಂದ ಜನ ಖರೀದಿಸುತ್ತಿಲ್ಲ. ಈ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ ಎಂದು ಬಿಜೆಪಿ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಸಚಿವ ಸುನಿಲ್ ಕುಮಾರ್ ಉತ್ತರಿಸಿದರು.

ಕರ್ನಾಟಕದಲ್ಲಿ ಈ ತಿಂಗಳು 14,741 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮತ್ತು ಮಾರಾಟದಿಂದ ₹ 2,500 ಕೋಟಿ ಆದಾಯ ಬಂದಿದೆ. ನಮ್ಮ ಇಂಧನ ಇಲಾಖೆ ಅತ್ಯಂತ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಹೆಚ್ಚು ವಿದ್ಯುತ್ ಬಳಕೆ ಆದರೂ ಕೂಡ ಎಲ್ಲಿಯೂ ಲೋಪ ಆಗಿಲ್ಲ. ಕೊರತೆಯೂ ಆಗಿಲ್ಲವೆಂದು ಸದನಕ್ಕೆ ತಿಳಿಸಿದ ಇಂಧನರು ವಿವರಿಸಿದರು.

11,830 ಕಲಾವಿದರಿಗೆ ಮಾಸಾಶನ

ಕರ್ನಾಟಕದಲ್ಲಿ 11,830 ಕಲಾವಿದರಿಗೆ ಮಾಸಾಶನ ಕೊಡುತ್ತಿದ್ದೇವೆ. ಅದಕ್ಕಾಗಿ ವರ್ಷಕ್ಕೆ ₹ 27.37 ಕೋಟಿ ವ್ಯಯಿಸುತ್ತಿದ್ದೇವೆ. ನಿಯಮಗಳ ತೊಡಕಿನಿಂದಾಗಿ ಹೆಚ್ಚು ಕಲಾವಿದರಿಗೆ ಮಾಸಾಶನದ ಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ಸದಸ್ಯ ಗೋವಿಂದರಾಜು ಪ್ರಶ್ನೆಗೆ ಸಚಿವ ಸುನಿಲ್ ಕುಮಾರ್ ಉತ್ತರಿಸಿದರು.

ಶಾಲೆಗಳಿಗೆ ಅನುದಾನ

ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ಕಲ್ಯಾಣ ಕರ್ನಾಟಕ ಭಾಗದಲ್ಲಿ 4,500ಕ್ಕೂ ಹೆಚ್ಚು ಕನ್ನಡ ಶಾಲೆಗಳಿವೆ. ಅದರಲ್ಲಿ ಕೇವಲ 1,500 ಶಾಲೆಗಳನ್ನು ಮಾತ್ರ ಅನುದಾನಕ್ಕೆ ಒಳಪಡಿಸಲಾಗಿದೆ ಎಂದು ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಹೇಳಿದರು. ಸದಸ್ಯರ ಪ್ರಸ್ತಾಪಕ್ಕೆ ದನಿಗೂಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರೇ ಕನ್ನಡ ಶಾಲೆಗಳನ್ನು ಉಳಿಸೋದು ಹೇಗೆ? ಹಣಕಾಸಿನ ಇಲಾಖೆಯ ಉಸಾಬರಿ ಅಂತ ಸುಮ್ಮನಿರಬೇಡಿ. ಕನ್ನಡ ಶಾಲೆಗಳನ್ನು ಉಳಿಸೋದಕ್ಕೆ ಕೆಲಸ ಮಾಡಿ ಎಂದು ತಾಕೀತು ಮಾಡಿದರು. ಈ ಕುರಿತು ಯೋಚನೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭರವಸೆ ನೀಡಿದರು. ಇದು ಹೊಸ ರೀತಿಯ ಉತ್ತರ ಎಂದು ಪರಿಷತ್ ನಗೆಗಡಲಲ್ಲಿ ತೇಲಿತು.

ಖಾಸಗಿ ಶಾಲೆಗಳು ಮಾತ್ರ ನ್ಯಾಷನಲ್ ಬಿಲ್ಡಿಂಗ್ ಕೋಡ್ ಪಡೆದುಕೊಳ್ಳಬೇಕು, ಸರ್ಕಾರಿ ಶಾಲೆಗಳಿಗೆ ಕೋಡ್ ಇಲ್ಲ, ಈ ತಾರತಮ್ಯ ಏಕೆಂದು ಕಾಂಗ್ರೆಸ್ ಸದಸ್ಯ ಹರೀಶ್ ಕುಮಾರ್ ಪ್ರಶ್ನೆ ಮಾಡಿದರು. ಸರ್ಕಾರಿ ಶಾಲೆಗಳಲ್ಲಿ ಸುರಕ್ಷತೆ ಕಾಪಾಡಿಕೊಳ್ಳಲಾಗುತ್ತಿದೆ. ಖಾಸಗಿ ಶಾಲೆಗಳು ಸರ್ಟಿಫಿಕೆಟ್ ಪಡೆದುಕೊಳ್ಳುವುದನ್ನು ಮತ್ತಷ್ಟು ಸರಳೀಕರಣ ಮಾಡಲು ಪ್ರಯತ್ನಿಸುತ್ತೇವೆ. ನೆಲ‌ಮಹಡಿಯಲ್ಲಿ ಮಾತ್ರ ಶಾಲೆ ಇದ್ದರೆ ಅದಕ್ಕೆ ಕೋಡ್ ಅಗತ್ಯವಿಲ್ಲವೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉತ್ತರಿಸಿದರು. ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಜೆಪಿ ಸದಸ್ಯರಿಂದ ಜೀವ ಬೆದರಿಕೆ: ವಿಧಾನ ಪರಿಷತ್ ಸಭಾಪತಿಗೆ ಬಿಕೆ ಹರಿಪ್ರಸಾದ್ ಪತ್ರ

ಇದನ್ನೂ ಓದಿ: ನನ್ನನ್ನು ಶ್ವಾನಕ್ಕೆ ಹೋಲಿಸುವ ಇಬ್ರಾಹಿಂ ತಮ್ಮನ್ನು ವಿಧಾನ ಪರಿಷತ್ ಸದಸ್ಯ ಮಾಡಿದವರಿಗೆ ನಿಷ್ಠರಾಗಿದ್ದಾರೆಯೇ? ವಿಎಸ್ ಉಗ್ರಪ್ಪ