ವೋಟರ್ ಐಡಿ ಪರಿಷ್ಕರಣೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧವೂ ಕ್ರಮಗೈಕೊಳ್ಳಲಾಗುವುದು: ಸಿಎಂ ಬೊಮ್ಮಾಯಿ

| Updated By: ವಿವೇಕ ಬಿರಾದಾರ

Updated on: Nov 26, 2022 | 3:09 PM

ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣದಲ್ಲಿ ಹಲವು ಜನರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ

ವೋಟರ್ ಐಡಿ ಪರಿಷ್ಕರಣೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧವೂ ಕ್ರಮಗೈಕೊಳ್ಳಲಾಗುವುದು: ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
Follow us on

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ (Voter ID Scam) ಸಂಬಂಧ ಇಬ್ಬರು IAS ಅಧಿಕಾರಿಗಳ ಅಮಾನತು ಮಾಡಲಾಗಿದೆ. ಈಗಾಗಲೇ ಹಲವು ಜನರನ್ನು ಬಂಧಿಸಲಾಗಿದೆ. ಅಕ್ರಮ ಕೇಸ್​​ನಲ್ಲಿ ಅಧಿಕಾರಿಗಳನ್ನು ಕೂಡ ವಿಚಾರಣೆ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Bsavaraj Bommai) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಅವರು ಮತ್ತೆ ಮತದಾರರ ಮಾಹಿತಿ ಸಂಗ್ರಹಿಸಲು ಆಯೋಗ ಸೂಚಿಸಿದೆ. ಚುನಾವಣಾ ಆಯೋಗದ ಕ್ರಮವನ್ನು ನಾನು ಸ್ವಾಗತ ಮಾಡುತ್ತೇನೆ. ಎರಡು ಕಡೆ ವೋಟರ್​ ಗುರುತಿನ ಚೀಟಿ ಇದ್ದರೇ ರದ್ದು ಮಾಡಲಾಗುತ್ತೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮ ಆಗಲಿದೆ ಎಂದು ಖಡಕ್​​ ಸೂಚನೆ ನೀಡಿದ್ದಾರೆ.

ಸುವರ್ಣಸೌಧದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು‌ ಕಿತ್ತೂರು ಚೆನ್ನಮ್ಮ ಪ್ರತಿಮೆಗಳ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಪ್ರತಿಮೆ ನಿರ್ಮಾಣಕ್ಕೆ ಈಗಾಗಲೇ ಆದೇಶ ಕೊಟ್ಟಿದ್ದೇವೆ. ಅಧಿವೇಶನದ ಸಂದರ್ಭದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತೇವೆ ಎಂದು ತಿಳಿಸಿದರು.

ಕರ್ನಾಟಕದ ಬಸ್​​​ಗಳಿಗೆ ಮಹಾರಾಷ್ಟ್ರದಲ್ಲಿ ಕಲ್ಲು ತೂರಾಟ ನಡೆಸಿರುವ ವಿಚಾರವಾಗಿ ಮಾತನಾಡಿದ ಅವರು ನಾನು ಈಗಾಗಲೇ‌ ಮಹಾರಾಷ್ಟ್ರ ಸರ್ಕಾರದ ಜತೆ ಮಾತಾಡಿದ್ದೀನಿ. ಇವತ್ತು ಗೃಹ ಸಚಿವರು ಮತ್ತು ಡಿಜಿ‌ ಐಜಿಪಿ ಅವರೂ ಅಲ್ಲಿನವರ ಜೊತೆ ಮಾತಾಡುತ್ತಾರೆ. ನಮ್ಮ ಬಸ್​​​ಗಳಿಗೆ ಯಾವುದೇ ಹಾನಿ ಮಾಡಬಾರದು ಅಂತಲೂ ತಿಳಿಸಿದ್ದೀವಿ. ಎರಡೂ ರಾಜ್ಯಗಳ ನಡುವೆ ಶಾಂತಿ ಸೌಹಾರ್ದತೆ ಕಾಪಾಡಲು ಹೇಳಿದ್ದೇವೆ ಎಂದರು.

ನಮ್ಮ ದೂರಿನ ಮೇಲೆ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ: ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣದ ಕುರಿತು ನಮ್ಮ ದೂರಿನ ಮೇಲೆ ಚುನಾವಣಾ ಆಯೋಗ ಇಬ್ಬರು IAS ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎಂದು ನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮಗೆ ರಾಜ್ಯ ಚುನಾವಣಾ ಆಯೋಗ ಮೇಲೆ ಅನುಮಾನವಿತ್ತು, ಹಾಗಾಗಿ ನಾವು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆವು. ಚಿಲುಮೆ ಸಂಸ್ಥೆ ನೇಮಿಸಿದ್ದ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ. ಸಿಎಂ ಬೊಮ್ಮಾಯಿ ಬೆಂಗಳೂರು ಉಸ್ತುವಾರಿ ಸಚಿವರು ಆಗಿದ್ದಾರೆ. ಅದಕ್ಕಾಗಿ ನಾವು ಸಿಎಂ ಬೊಮ್ಮಾಯಿ ರಾಜೀನಾಮೆ ಕೇಳಿದ್ದೆವು ಎಂದು ಹೇಳಿದರು.

ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ತನಿಖೆ ಆಗಬೇಕು. ಜನರ ಸಂಶಯಕ್ಕೆ ಸ್ಪಷ್ಟನೆ ಸಿಗಬೇಕಲ್ಲವೇ..? ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡ್ತೇನೆ. ಸಿಎಂ ಮೇಲೆ ಕ್ರಮ ತಗೆದುಕೊಳ್ಳಬೇಕು. ಜಿಲ್ಲಾ ಚುನಾವಣಾಧಿಕಾರಿ ಮೇಲೆ‌ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ