ಬೆಂಗಳೂರಿನಲ್ಲಿ ದಾಖಲೆ ಮಟ್ಟದಲ್ಲಿ ತಾಪಮಾನ ಏರಿಕೆ; ಇದಕ್ಕೆ ಸಂಶೋಧಕರು ನೀಡಿದ ಕಾರಣ ಇದು

ನಗರದಲ್ಲಿ 36.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದಾಗಿನಿಂದ ಇದೇ ರೀತಿ ತಾಪಮಾನ ಮುಂದುವರಿದಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದೆ.

ಬೆಂಗಳೂರಿನಲ್ಲಿ ದಾಖಲೆ ಮಟ್ಟದಲ್ಲಿ ತಾಪಮಾನ ಏರಿಕೆ; ಇದಕ್ಕೆ ಸಂಶೋಧಕರು ನೀಡಿದ ಕಾರಣ ಇದು
ಸಾಂದರ್ಭಿಕ ಚಿತ್ರ
Follow us
|

Updated on:Apr 20, 2023 | 8:08 AM

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ(Karnataka Assembly Elections 2023) ಬಿಸಿಯೊಂದಿಗೆ ಬೆಂಗಳೂರಿನ ಬಿಸಿಲಿನ ಬಿಸಿ ಕೂಡ ಹೆಚ್ಚಾಗಿದೆ. ನಗರದಲ್ಲಿ ಬೇಸಿಗೆಯ ಬಿಸಿ ಹೆಚ್ಚಾಗಿದ್ದು ಜನ ಹೈರಾಣಾಗಿದ್ದಾರೆ. ರಸ್ತೆಯಲ್ಲಿ ಓಡಾಡಿದ್ರೆ ಸಾಕು ಶೆಕೆ ನೀರು ಕಿತ್ಕೊಂಡು ಬರ್ತಿದೆ. ಇನ್ನು ಸಿಲಿಕಾನ್ ಸಿಟಿ ತನ್ನ ತಾಪಮಾನ ಹೆಚ್ಚಳದಿಂದ ಹೊಸ ದಾಖಲೆ ನಿರ್ಮಿಸಿದೆ. ಏಪ್ರಿಲ್ 18ರಂದು ಬೆಂಗಳೂರು 36.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನದೊಂದಿಗೆ ಹೊಸ ದಾಖಲೆ ನಿರ್ಮಿಸಿದೆ. ಇದು ವರ್ಷದ ಅತ್ಯಂತ ಬಿಸಿ ದಿನಗಳಲ್ಲಿ ಒಂದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಡೇಟಾದಿಂದ ತಿಳಿದುಬಂದಿದೆ.

ನಗರದಲ್ಲಿ 36.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದಾಗಿನಿಂದ ಇದೇ ರೀತಿ ತಾಪಮಾನ ಮುಂದುವರಿದಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದೆ. 2016ರ ಏಪ್ರಿಲ್ 25 ರಂದು ನಗರದಲ್ಲಿ ಗರಿಷ್ಠ ತಾಪಮಾನ 39.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ತಿಳಿಸಿದೆ. ಹಾಗೂ 2022ರ ಏಪ್ರಿಲ್ 30 ರಂದು 36.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಹೀಗಾಗಿ 2023ರ ಏಪ್ರಿಲ್ 18ರಂದು 36.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನದೊಂದಿಗೆ ಬೆಂಗಳೂರು ಈ ವರ್ಷದ ಅತಿ ಬಿಸಿಯ ದಿನವನ್ನು ಕಂಡಿದೆ.

ಇನ್ನು ಮತ್ತೊಂದೆಡೆ ತಾಪಮಾನ ಏರಿಕೆಗೆ ಭೂ ಬಳಕೆಯ ಮಾದರಿಯಲ್ಲಿನ ಬದಲಾವಣೆಯು ತಾಪಮಾನ ಏರಿಕೆಯ ಹಿಂದಿನ ಅಂಶಗಳಲ್ಲಿ ಒಂದಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿಯ ಅಧ್ಯಯನ ಕೇಂದ್ರದ (CSTEP) ಅಡಾಪ್ಟೇಶನ್ ಮತ್ತು ರಿಸ್ಕ್ ಅನಾಲಿಸಿಸ್ ಗ್ರೂಪ್‌ನ ಪ್ರಮುಖ ಸಂಶೋಧನಾ ವಿಜ್ಞಾನಿ ಡಾ ಅನುಶಿಯಾ ಜೆ ಅವರ ಪ್ರಕಾರ, “ಭೂ ಬಳಕೆ ಆಯಾಮಗಳಲ್ಲಿನ ಬದಲಾವಣೆಗಳು ಮತ್ತು ಹಸಿರು ಕಡಿಮೆಯಾಗುತ್ತಿರುವುದರಿಂದ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯನ್ನು ಕಾಣಲು ಕಾರಣವಾಗಬಹುದು. ಕಳೆದ ಎರಡು ದಶಕಗಳಲ್ಲಿ ಕಟ್ಟಡ ನಿರ್ಮಾಣ ಹೆಚ್ಚಿದ್ದರೆ, ಹಚ್ಚ ಹಸಿರು ಪರಿಸರ ಮತ್ತು ಜಲಮೂಲಗಳು ಗಣನೀಯವಾಗಿ ಕಡಿಮೆಯಾಗಿದೆ. ನಗರವು ಹಗಲು ಮತ್ತು ರಾತ್ರಿ ತಾಪಮಾನದ ನಡುವಿನ ವ್ಯತ್ಯಾಸದ ದೈನಂದಿನ ತಾಪಮಾನದ ಶ್ರೇಣಿಯಲ್ಲಿ (ಡಿಟಿಆರ್) ಇಳಿಕೆಯನ್ನು ಅನುಭವಿಸುತ್ತಿದೆ. ನಮ್ಮ ವಿಶ್ಲೇಷಣೆಯ ಪ್ರಕಾರ, 2000 ರಿಂದ 2023 ರವರೆಗೆ DTR ನಲ್ಲಿ ಸುಮಾರು ಎರಡು ಡಿಗ್ರಿ ಇಳಿಕೆ ಕಂಡುಬಂದಿದೆ. ಡಿಟಿಆರ್ ಹವಾಮಾನ ಸ್ಥಿರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ: Karnataka Weather: ಉಡುಪಿ, ಮೈಸೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ

ಇದು ಜಾಗತಿಕ ಹವಾಮಾನ ಬದಲಾವಣೆಯ ಪ್ರಮುಖ ಹವಾಮಾನ ಸೂಚಕವಾಗಿದೆ. ನಗರ ಪ್ರದೇಶಗಳು ವಿಸ್ತರಣೆಯಾಗುತ್ತಿರುವಂತೆ, ಹವಾಮಾನ ನಿರೋಧಕ ವಿನ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಹಾಟ್ ಸ್ಪಾಟ್‌ಗಳನ್ನು ಗುರುತಿಸಲು ಮತ್ತು ನಕ್ಷೆ ಮಾಡಲು ಮೈಕ್ರೋ-ಲೆವೆಲ್ (ವಾರ್ಡ್) ಶಾಖ-ಅಪಾಯದ ಮೌಲ್ಯಮಾಪನಗಳನ್ನು ನಡೆಸಬೇಕು. ಬೆಂಗಳೂರಿನಲ್ಲಿ ಕಳೆದುಹೋದ ಹಸಿರು ಪ್ರದೇಶಗಳನ್ನು ಮರಳಿ ಪಡೆಯಬೇಕು. ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕು ಎಂದರು.

ಮುಂದಿನ 48 ಗಂಟೆಗಳ ಕಾಲ ನಗರದಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ ಎಂದು ಐಎಂಡಿ ತನ್ನ ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಿದೆ. ಬುಧವಾರ ಕಲಬುರ್ಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 41.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:08 am, Thu, 20 April 23