ಅಯ್ಯೋ ವಿಧಿಯೇ! ಸ್ನೇಹಿತನನ್ನು ಭೇಟಿಯಾಗಲು ಬೆಂಗಳೂರಿಗೆ ಬಂದ ಯುವಕ ದುರಂತ ಸಾವು

36 ವರ್ಷದ ಯುವಕನೋರ್ವ ಹೊಟ್ಟೆ ಪಾಡಿಗಾಗಿ ಪಶ್ಚಿಮ ಬಂಗಾಳದಿಂದ ಕರ್ನಾಟಕಕ್ಕೆ ಬಂದಿದ್ದು, ಶಿವಮೊಗ್ಗದಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದ್ರೆ, ಸ್ನೇಹಿತನನ್ನು ಭೇಟಿಯಾಗಲೆಂದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದ ಯುವಕ ದುರಂತ ಸಾವುಕಂಡಿದ್ದಾನೆ. ಇನ್ನೊಂದೆಡೆ ಮಕ್ಕಳಿಗೆ ತಿಂಡಿ ತರಲು ಹೋಗಿದ್ದವ ಶವವಾಗಿ ಪತ್ತೆಯಾಗಿದ್ದಾನೆ. ಈ ಎರಡು ಪ್ರತ್ಯೇಕ ಪ್ರಕರಣಗಳ ವಿವರ ಇಲ್ಲಿದೆ.

ಅಯ್ಯೋ ವಿಧಿಯೇ! ಸ್ನೇಹಿತನನ್ನು ಭೇಟಿಯಾಗಲು ಬೆಂಗಳೂರಿಗೆ ಬಂದ ಯುವಕ ದುರಂತ ಸಾವು
ಪ್ರಾತಿನಿಧಿಕ ಚಿತ್ರ
Image Credit source: India Today

Updated on: Mar 03, 2025 | 9:08 PM

ಬೆಂಗಳೂರು, (ಮಾರ್ಚ್​ 03): ತನ್ನ ಸ್ನೇಹಿತನನ್ನು ನೋಡಲು ಬೆಂಗಳೂರಿಗೆ ಬಂದಿದ್ದ ಯುವಕನೋರ್ವ ದುರಂತ ಸಾವನ್ನಪ್ಪಿರುವ ಕರುಳು ಚುರುಕ್ ಎನ್ನುವ ಘಟನೆ ನಡೆದಿದೆ. ಶಿವಮೊಗ್ಗದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಮೂಲದ 36 ವರ್ಷದ ವಿಶ್ವದೇವ್ ದಾಸ್, ಗೆಳೆಯನ್ನು ನೋಡಲು ಇಂದು (ಮಾರ್ಚ್ 03) ಬೆಂಗಳೂರಿಗೆ ಬಂದಿಳಿದಿದ್ದಾನೆ. ಆದ್ರೆ, ಮೆಜೆಸ್ಟಿಕ್​ನ KSRTC ಬಸ್ ನಿಲ್ದಾಣದ ಟರ್ಮಿನಲ್ 2ರಲ್ಲಿ ಬಸ್ ಇಳಿದ ಕೆಲವೇ ಕ್ಷಣದಲ್ಲಿ ದುರಂತ ಸಾವು ಕಂಡಿದ್ದಾನೆ.

ಪಶ್ಚಿಮ ಬಂಗಾಳ ಮೂಲದ ವಿಶ್ವದೇವ್ ದಾಸ್(36) ಶಿವಮೊಗ್ಗದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಇಂದು ಸ್ನೇಹಿತನನ್ನು ನೋಡಲು ಬೆಂಗಳೂರಿಗೆ ಬಂದಿದ್ದಾನೆ. ಬೆಳಗ್ಗೆ ಮುಂಜಾನೆ 3 ಗಂಟೆ ಸುಮಾರಿಗೆ ಮೆಜೆಸ್ಟಿಕ್​ನ KSRTC ಬಸ್ ನಿಲ್ದಾಣದ ಟರ್ಮಿನಲ್ 2ಕ್ಕೆ ಬಂದಿಳಿದಿದ್ದಾನೆ. ಇದೇ ವೇಳೆ ಕೆಎಸ್ಆರ್​ಟಿಸಿ ಬಸ್ ಗುದ್ದಿದೆ. ಪರಿಣಾಮ ಗೆಳೆಯನ್ನು ಕಾಣಲು ಶಿವಮೊಗ್ಗದಿಂದ ಓಡೋಡಿ ಬಂದಿದ್ದ ವಿಶ್ವದೇವ್ ದಾಸ್ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಕೋಲಾರ: ಚೆನ್ನೈ-ಬೆಂಗಳೂರು ಹೈವೆಯಲ್ಲಿ ಅಪಘಾತ, ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವು

ವಿಶ್ವದೇವ್ ದಾಸ್ ಸೆಂಟ್ರಿಂಗ್​ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲೂ ಸಹ ಸೆಂಟ್ರಿಂಗ್ ಕೆಲಸ ಇತ್ತು ಎಂದು ಆತನ ಗೆಳೆಯ ಹೇಳಿದ್ದ. ಹೀಗಾಗಿ ಈ ಬಗ್ಗೆ ಸ್ನೇಹಿತನೊಂದಿಗೆ ಮಾತುಕತೆ ನಡೆಸಲು ವಿಶ್ವದೇವ್ ದಾಸ್ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ದುರಂತ ಅಂತ್ಯಕಂಡಿದ್ದಾನೆ. ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಈ ದುರಂತ ಸಂಭವಿಸಿದ್ದು, ಈ ಸಂಬಂಧ ಉಪ್ಪಾರಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳಿಗೆ ತಿಂಡಿ ತರಲು ಹೋಗಿದ್ದವ ಶವವಾಗಿ ಪತ್ತೆ

ಆನೇಕಲ್: ನಿನ್ನೆ (ಮಾರ್ಚ್​ 02) ಮಕ್ಕಳಿಗೆ ತಿಂಡಿ ತರಲು ಹೋಗಿದ್ದವ ಇಂದು (ಮಾರ್ಚ್​ 03) ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೀಲಲಿಗೆಯ ಯಲ್ಲಮ್ಮ ದೇವಾಲಯದ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯಾಸಿನ್(26) ಶವ ಪತ್ತೆಯಾಗಿದೆ. ಖಾಸಗಿ ಶಾಲೆಯಲ್ಲಿ ಬಸ್​ ಚಾಲಕನಾಗಿ ಕೆಲಸ ಮಾಡ್ತಿದ್ದ ಯಾಸಿನ್, ನಿನ್ನೆ ಮಕ್ಕಳಿಗೆ ತಿಂಡಿ ತರಲು ಹೋಗಿದ್ದ. ಆದ್ರೆ, ಇದೀಗ ಯಾಸೀನ್​ ಮೃತದೇಹ ಜಗದೀಶ್ ಎಂಬುವವರಿಗೆ ಸೇರಿದ ಜಾಗದಲ್ಲಿ ನಿರ್ಮಾಣ ಹಂತದ ಬಾತ್ ರೂಮ್​ನಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.