ಯುಗಾದಿ ಹಬ್ಬಕ್ಕೆ ರೆಡಿಮೆಡ್ ಹೋಳಿಗೆ ತಿನ್ನುವ ಮುನ್ನ ಎಚ್ಚರ…ಎಚ್ಚರ..!
ಆಹಾರ ಇಲಾಖೆಯಿಂದ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದೆ. ಇಡ್ಲಿ, ಗೋಬಿ, ಕಲ್ಲಂಗಡಿ ಸೇರಿದಂತೆ ಅನೇಕ ಆಹಾರಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದು, ಕೆಲವೊಂದು ಆಹಾರ ಪದಾರ್ಥಗಳಲ್ಲಿ ಹಾನಿಕಾರ ಅಂಶ ಪತ್ತೆಯಾಗಿದೆ. ಹೀಗಾಗಿ ಇದನ್ನು ತಡೆಗಟ್ಟಲು ಕೆಲವೊಂದು ರೂಲ್ಸ್ ಜಾರಿ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ರೆಡಿಮೆಡ್ ಹೋಳಿಗೆ ಮೇಲೂ ಸಹ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಬೆಂಗಳೂರು, (ಮಾರ್ಚ್ 03): ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದ್ದು, ಈ ಪ್ಲಾಸ್ಟಿಕ್ ಹಾಳೆಯಿಂದ ಹಾನಿಕಾರಕ ರಾಸಾಯನಿಕ ಅಂಶ ಆಹಾರಕ್ಕೆ ಸೇರುತ್ತದೆ. ಹೀಗಾಗಿ, ಪ್ಲಾಸ್ಟಿಕ್ ಹಾಳೆ ಬಳಸುವುದನ್ನು ನಿಷೇಧಿಸಲಾಗಿದೆ. ಅದರಂತೆ ಇದೀಗ ಹೋಟೆಲ್‌ಗಳಲ್ಲಿ ರೆಡಿಮೆಡ್ ಹೋಳಿಗೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದ್ದು, ಈ ಸಂಬಂಧ ಇಂದು (ಮಾರ್ಚ್ 03) ಬೆಂಗಳೂರಿನ ಕೆಲ ಅಂಗಡಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ನೋಟಿಸ್ ನೀಡಿದ್ದಾರೆ.
ಬೆಂಗಳೂರು ಹಾಗೂ ಮೈಸೂರಲ್ಲಿ ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಂಡು ಬಂದಿದೆ. ಆಹಾರ ಇಲಾಖೆ ಅಧಿಕಾರಿಗಳು ಬೆಂಗಳೂರು ಹಾಗೂ ಮೈಸೂರಲ್ಲಿ ತಪಾಷಣೆ ನಡೆಸಿದ್ದು, ಮೈಸೂರಿನ ಎರಡು ಅಂಗಡಿಗಳಲ್ಲಿ ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಂಡು ಬಂದಿದೆ. ಹೀಗಾಗಿ ಅಧಿಕಾರಿಗಳು ಮೈಸೂರಿನ ಎರಡು ಹೋಳಿಗೆ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ: ಟಿವಿ9 ರಿಯಾಲಿಟಿ ಚೆಕ್: ಬೆಂಗಳೂರಿನ ಹಲವೆಡೆ ಇನ್ನೂ ನಿಂತಿಲ್ಲ ಇಡ್ಲಿ ತಯಾರಿಗೆ ಪ್ಲಾಸ್ಟಿಕ್ ಬಳಕೆ
ಹೋಳಿಗೆಯನ್ನ ತಯಾರಿಸಲು ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮಾಡುತ್ತಾರೆ. ಈ ಹಿನ್ನೆಲೆ ಹೋಳಿಗೆ ಅಂಗಡಿಗಳ ಮೇಲೆ ಆಹಾರ ಇಲಾಖೆ ದಾಳಿ ಮಾಡಿದ್ದು, ಪ್ಲಾಸ್ಟಿಕ್ ಬಳಕೆ ಮಾಡಿರುವ ಅಂಗಡಿಗಳಿಗೆ ನೋಟಿಸ್ ನೀಡಿದೆ. ಹೋಳಿಗೆಗೆ ಪ್ಲಾಸ್ಟಿಕ್ ಕವರ್ ಬಳಸಿದ್ರೆ ವಿಷಕಾರಿ ಅಂಶ ಹೋಳಿಗೆ ಸೇರಯವ ಸಾಧ್ಯತೆ ಇದೆ. ಇದರಿಂದ ಹೋಳಿಗೆಗೆ ಪ್ಲಾಸ್ಟಿಕ್ ಬಳಸಬಾರದು ಎಂದು ಸೂಚಿಸಲಾಗಿದೆ. ಈಗಾಗಲೇ ಆಹಾರ ಪದಾರ್ಥಗಳ ತಯಾರಿಗೆ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ.
ಇನ್ನೇನು ಯುಗಾದಿ ಹಬ್ಬ ಬರುತ್ತಿರುವುದರಿಂದ ಅಂಗಡಿಗಳಲ್ಲಿ ರೆಡಿಮೆಡ್ ಹೋಳಿಗಳ ಘಮ ಜೋರಾಗುತ್ತೆ. ಬಿಸಿ ಬಿಸಿ ಹೋಳಿಗೆ ಮಾಡಿ ಅದನ್ನು ಒಂದು ಪ್ಲಾಸ್ಟಿಕ್ ನಿಂದ ಕವರ್ ಮಾಡಿ ಇಡುತ್ತಾರೆ. ಆದ್ರೆ, ಅದನ್ನು ತಿನ್ನುವ ಮುನ್ನ ಸಾರ್ವಜನರು ಈ ಪ್ಲಾಸ್ಟಿಕ್ ಬಗ್ಗೆ ಎಚ್ಚರ ವಹಿಸುವುದು ಒಳಿತು. ಯುಗಾದಿ ಹಬ್ಬಕ್ಕಾಗಿ ಪೂರಣ್ ಪೋಳಿ ಎಂದೂ ಕರೆಯಲ್ಪಡುವ ಬೇಳೆ ಹೋಳಿಗೆಯು ಹಬ್ಬಕ್ಕಾಗಿಯೇ ತಯಾರಿಸಲಾದ ಆಕರ್ಷಕವಾದ ಸಿಹಿ ತಿಂಡಿಯಾಗಿದೆ. ಇದನ್ನು ಯುಗಾದಿಯಂದು ವಿಶೇಷವಾಗಿ ತಯಾರಿಸಲಾಗುತ್ತದೆ ಮತ್ತು ಇದು ದಕ್ಷಿಣ ಭಾರತದ ಜನಪ್ರಿಯವಾಗಿದೆ.
ಬಿಸಿ ಬಿಸಿ ಹೋಳಿಗೆ ಮೇಲೆ ಪ್ಲಾಸ್ಟಿಕ್ ಇಟ್ಟಿರುವುದರಿಂದ ಆ ಪ್ಲಾಸ್ಟಿಕ್ ಹಾಳೆಯ ವಿಷಕಾರಿ ಅಂಶ ಹೋಳಿಗೆಗೆ ಸೇರಿಕೊಳ್ಳುತ್ತೆ. ಒಂದು ವೇಳೆ ಅದನ್ನು ಸೇವಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ಹೀಗಾಗಿ ಈ ಬಗ್ಗೆ ಎಚ್ಚರದಿಂದ ಇರಬೇಕು. ಕೇವಲ ಹೋಳಿಗೆ ಮಾತ್ರವಲ್ಲ ಪ್ಲಾಸ್ಟಿಕ್ ಸಹಾಯದಿಂದ ಯಾವೆಲ್ಲಾ ಬಿಸಿ ಬಿಸಿ ಆಹಾರ ತಯಾರು ಮಾಡುತ್ತಾರೋ ಅದನ್ನು ಸೇವಿಸುವ ಮುನ್ನ ಯೋಚಿಸಬೇಕು. ಯಾಕಂದ್ರೆ ಪ್ಲಾಸ್ಟಿಕ್ ಬಹಳ ಡೇಂಜರ್.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 pm, Mon, 3 March 25