ಬೆಂಗಳೂರು: ನಗರದ ಕೆಆರ್ ಸರ್ಕಲ್ ಅಂಡರ್ಪಾಸ್ನಲ್ಲಿ (KR Circle Underpass) ಕಾರು ಮುಳುಗಡೆಯಾಗಿ ಟೆಕ್ಕಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಕಾರು ಚಾಲಕನನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹರೀಶ್ ಬಂಧಿಸಿದ ಕಾರು ಚಾಲಕ. ನೀರು ನಿಂತಿದ್ದರೂ ಬೇಜವಾಬ್ದಾರಿತನದಿಂದ ಅಂಡರ್ ಪಾಸ್ನಲ್ಲಿ ಕಾರು ಚಲಾಯಿಸಿ ಅವಘಡಕ್ಕೆ ಕಾರಣನಾಗಿರುವ ಆರೋಪದಡಿ ಹರೀಶ್ನನ್ನು ಬಂಧಿಸಲಾಗಿದೆ.
ಪ್ರಯಾಣಿಕರು ಬೇಡ ಎಂದು ಹೇಳಿದರೂ ಕೇಳದ ಚಾಲಕ ಹರೀಶ್, ನೀರು ತುಂಬಿದ್ದ ಅಂಡರ್ ಪಾಸ್ನಲ್ಲಿ ಕಾರು ಚಲಾಯಿಸಿದ್ದಾನೆ. ಈ ವೇಳೆ ಕಾರ್ ಬಂದ್ ಬಿದ್ದ ಹಿನ್ನೆಲೆ ಪ್ರಯಾಣಿಕರು ಕಾರಿನಿಂದ ಇಳಿಯಲು ಯತ್ನಿಸಿದಾಗ ಹರೀಶ್, ಬೇಡ ತಾನೇ ಕಾರ್ ಆನ್ ಮಾಡಿ ಕರೆದೊಯ್ಯುವುದಾಗಿ ಹೇಳಿದ್ದ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: Bangalore Rain: ಬೆಂಗಳೂರು ಮಳೆ ದುರಂತ, ಮಾನವೀಯತೆ ಮರೆತ ಸೇಂಟ್ ಮಾರ್ಥಾಸ್ ಆಸ್ಪತ್ರೆ, ಇನ್ಫೋಸಿಸ್ ಉದ್ಯೋಗಿ ಬಲಿ
ಮತ್ತೊಂದೆಡೆ ಬಿಬಿಎಂಪಿ ಬೆಜವಾಬ್ದಾರಿಗೆ ಅಂಡರ್ ಪಾಸ್ನಲ್ಲಿ ಮಳೆ ನೀರು ತುಂಬಿದೆ ಎಂದು ಆರೋಪಿಸಲಾಗಿದೆ. ಭಾನುರೇಖಾ ಸಾವಿಗೆ ಚಾಲಕ ಹರೀಶ್, ಬಿಬಿಎಂಪಿ ಕಾರಣ ಎಂದು ಮೃತಳ ಸಹೋದರ ಬಿಬಿಎಂಪಿ ಹಾಗೂ ಕಾರ್ ಚಾಲಕನ ವಿರುದ್ಧ ದೂರು ನೀಡಿದ್ದರು. ಅದರಂತೆ ಕಾರು ಚಾಲಕನ್ನು ಬಂಧಿಸಲಾಗಿದೆ. ಮಳೆ ಬರುತ್ತದೆ ಎಂಬ ಮುನ್ಸೂಚನೆ ಇದ್ದರೂ ಮುನ್ನೆಚ್ಚರಿಕೆ ಕೈಗೊಳ್ಳದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮವಾಗುವುದೇ? ಕಾದುನೋಡಬೇಕಿದೆ.
ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಕೆಆರ್ ಸರ್ಕಲ್ನ ಅಂಡರ್ಪಾಸ್ನಲ್ಲಿ ಸುಮಾರು 5 ಅಡಿಯಷ್ಟು ಎತ್ತರಕ್ಕೆ ನೀರು ತಿಂಬಿತ್ತು. ಹೀಗಿದ್ದರೂ ಆರು ಮಂದಿ ಪ್ರಯಾಣಿಸುತ್ತಿದ್ದ ಕಾರು ಈ ಅಂಡರ್ಪಾಸ್ನಲ್ಲಿ ಹೋಗಿ ಮುಳುಗಿತ್ತು. ಕೂಡಲೇ ಎಚ್ಚೆತ್ತ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿ ಆರು ಮಂದಿಯನ್ನು ರಕ್ಷಿಸಿದ್ದರು. ಈ ಪೈಕಿ ತೀವ್ರ ಅಸ್ವಸ್ಥಗೊಂಡಿದ್ದ ಬಾನುರೇಖಾ ಸಾವನ್ನಪ್ಪಿದ್ದಳು. ಘಟನೆ ನಂತರ ಕಾರು ಚಾಲಕ ಪರಾರಿಯಾಗಿದ್ದನು. ಈ ಘಟನೆ ನಡೆದ ನಂತರ ಅದೇ ನೀರಿನಲ್ಲಿ ಆಟೋವೊಂದು ಮುಳುಗಡೆಯಾಗಿತ್ತು. ಆಟೋ ಚಾಲಕ ಬಚಾವ್ ಆಗಿದ್ದರೆ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದಳು. ಈಕೆಯನ್ನೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ