ಸಿನಿಮಾ ಶೈಲಿಯಲ್ಲಿ ಬೈಕ್ಗಳ ಮೇಲೆ ಕಾರು ಚಲಾಯಿಸಿ ಪೊಲೀಸರಿಂದ ತಪ್ಪಿಸಿಕೊಂಡ ಕಿರಾತಕರು, ಘಟನೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಸಿನಿಮಾ ಶೈಲಿಯಲ್ಲಿ ನಡೆದ ಭೀಕರ ಅಪಘಾತಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಆನೇಕಲ್: ಸಿನಿಮಾ ಶೈಲಿಯಲ್ಲಿ ನಡೆದ ಭೀಕರ ಅಪಘಾತಕ್ಕೆ (Anekal Accident) ಇಡೀ ಗ್ರಾಮವೇ ಬೆಚ್ಚಿಬಿದ್ದ ಘಟನೆ ಬೆಂಗಳೂರು (Bangalore) ನಗರದ ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ತಮಿಳುನಾಡು ಪೊಲೀಸರ (Tamil Nadu Police) ಕೈಯಿಂದ ತಪ್ಪಿಸಿಕೊಳ್ಳಲು ಮುಂಭಾಗದಲ್ಲಿ ಬಂದ ದ್ವಿಚಕ್ರ ವಾಹನಗಳ ಮೇಲೆ ಕಾರು ಹರಿಸಿ ಎಸ್ಕೇಪ್ ಆಗಿರುವ ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಜ್ಯ ಗಡಿ ತಮಿಳುನಾಡಿನ ಜೂಜುವಾಡಿ ಬಳಿ ನಂಬರ್ ಪ್ಲೇಟ್ ಇಲ್ಲದ ಕಾರು ಅನುಮಾನಸ್ಪದವಾಗಿ ಸಂಚರಿಸುತ್ತಿತ್ತು. ಇದನ್ನು ನೋಡಿದ ತಮಿಳುನಾಡು ಪೊಲೀಸರು ಚೇಸ್ ಮಾಡಿದ್ದಾರೆ. ಈ ವೇಳೆ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪೋಲೀಸ್ ಠಾಣಾ ವ್ಯಾಪ್ತಿಯ ಬಳ್ಳೂರು ಗ್ರಾಮದಲ್ಲಿ ಮಿನಿ ಬಸ್ ಮತ್ತು ಮಿನಿ ಟೆಂಪೊ ಅಡ್ಡ ಬಂದು ತಪ್ಪಿಸಿಕೊಳ್ಳಲಾಗದೆ ಕಾರು ಸಿಕ್ಕಿಹಾಕಿಕೊಂಡಿತ್ತು. ಈ ವೇಳೆ ಅಡ್ಡಗಟ್ಟಿದ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಪ್ರವಾಸಿಗರ ಸಾವಿನ ಸ್ಪಾಟ್ ಆಗುತ್ತಿದೆ ಮುಳ್ಳಯ್ಯನಗಿರಿ ಶಿಖರ; ಸಾಲು ಸಾಲು ಅಪಘಾತ, ಪ್ರಪಾತಕ್ಕೆ ಬೀಳುತ್ತಿವೆ ಪ್ರವಾಸಿಗರ ಕಾರು
ಪೊಲೀಸರು ಸಮೀಪ ಬರುತ್ತಿದ್ದಂತೆ ಅಡ್ಡಲಾಗಿ ಬರುತ್ತಿದ್ದ ಎರಡು ಮೂರು ದ್ವಿಚಕ್ರ ವಾಹನಗಳ ಮೇಲೆ ಕಿರಾತಕರು ಕಾರು ಚಲಾಯಿಸಿಕೊಂಡು ಎಸ್ಕೇಪ್ ಆಗಿದ್ದಾರೆ. ಒಂದು ದ್ವಿಚಕ್ರ ವಾಹನವನ್ನು ಒಂದಷ್ಟು ದೂರಕ್ಕೆ ಎಳೆದುಕೊಂಡು ಹೋಗಲಾಗಿದೆ. ಈ ಭೀಕರ ದೃಶ್ಯ ಕಂಡ ಗ್ರಾಮಸ್ಥರು ಬಿಚ್ಚಿಬಿದ್ದಿದ್ದಾರೆ.
ಘಟನೆ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ. ಅಪರಾಧ ಕೃತ್ಯ ಎಸಗಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರಾ ಎನ್ನುವ ಬಗ್ಗೆಯೂ ಪೋಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆರೋಪಿಗಳ ಬಂಧನಕ್ಕೆ ತಮಿಳುನಾಡು ಹಾಗೂ ಕರ್ನಾಟಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕ್ರೈಂ ನ್ಯೂಸ್ ಓದಲು ಇಲ್ಲಿ ಕ್ಲಿಕ್ ಮಾಡಿ




