ಎನ್‌ಜಿಇಎಫ್‌ ಜಾಗದಲ್ಲಿ ವಿಶ್ವದರ್ಜೆಯ ಟ್ರೀ ಪಾರ್ಕ್ ಅಭಿವೃದ್ಧಿ: ಎಂಬಿ ಪಾಟೀಲ

|

Updated on: Jun 20, 2023 | 6:00 PM

ಎನ್‌ಜಿಇಎಫ್‌ಗೆ ಸೇರಿದ ಜಾಗದ ಪೈಕಿ 70 ಎಕರೆಯಲ್ಲಿ ದಟ್ಟ ಹಸಿರಿದ್ದು, ನಾನಾ ಪ್ರಭೇದಗಳ ಸಾವಿರಾರು ವೃಕ್ಷಗಳಿವೆ. ಜತೆಗೆ 5 ಕೈಗಾರಿಕಾ ಶೆಡ್‌ಗಳಿವೆ. ಇವುಗಳ ಪೈಕಿ ಒಂದು ಮಾತ್ರ ಶಿಥಿಲವಾಗಿದೆ.

ಎನ್‌ಜಿಇಎಫ್‌ ಜಾಗದಲ್ಲಿ ವಿಶ್ವದರ್ಜೆಯ ಟ್ರೀ ಪಾರ್ಕ್ ಅಭಿವೃದ್ಧಿ: ಎಂಬಿ ಪಾಟೀಲ
ಎನ್‌ಜಿಇಎಫ್‌ ಜಾಗದಲ್ಲಿ ವಿಶ್ವದರ್ಜೆಯ ಟ್ರೀ ಪಾರ್ಕ್ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದ ಸಚಿವ ಎಂಬಿ ಪಾಟೀಲ
Follow us on

ಬೆಂಗಳೂರು: ನಗರದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರವಿರುವ ಎನ್‌ಜಿಇಎಫ್‌ಗೆ (NGEF) ಸೇರಿದ 105 ಎಕರೆ ಜಾಗವನ್ನು ಹಾಗೆಯೇ ಉಳಿಸಿಕೊಂಡು, 30 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಆಕರ್ಷಕ ವೃಕ್ಷೋದ್ಯಾನ (Tree Park) ಅಭಿವೃದ್ಧಿಪಡಿಸಲಾಗುವುದು. ಈ ಮೂಲಕ ನಗರದಲ್ಲಿ ಹಸಿರನ್ನು ಉಳಿಸಿಕೊಂಡು, ಇದನ್ನು ಮನೋಹರವಾದ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ (MB Patil) ಹೇಳಿದ್ದಾರೆ.

ಈ ಬಗೆಗಿನ ಪ್ರಾತ್ಯಕ್ಷಿಕೆಯನ್ನು ಇಂದು ವೀಕ್ಷಿಸಿ ಪ್ರಾಥಮಿಕ ಸುತ್ತಿನ ಸಭೆ ನಡೆಸಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಎನ್‌ಜಿಇಎಫ್‌ಗೆ ಸೇರಿದ ಜಾಗದ ಪೈಕಿ 70 ಎಕರೆಯಲ್ಲಿ ದಟ್ಟ ಹಸಿರಿದ್ದು, ನಾನಾ ಪ್ರಭೇದಗಳ ಸಾವಿರಾರು ವೃಕ್ಷಗಳಿವೆ. ಜತೆಗೆ 5 ಕೈಗಾರಿಕಾ ಶೆಡ್‌ಗಳಿವೆ. ಇವುಗಳ ಪೈಕಿ ಒಂದು ಮಾತ್ರ ಶಿಥಿಲವಾಗಿದೆ. ಉಳಿದಿರುವುದನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು. ಹಂತ-1ಎ ಯಲ್ಲಿ 11 ಕೋಟಿ ರೂ. ಮತ್ತು ಹಂತ-1ಬಿ ನಲ್ಲಿ 15 ಕೋಟಿ ರೂ. ವೆಚ್ಚ ಮಾಡಿ ವೃಕ್ಷೋದ್ಯಾನ ಅಭಿವೃದ್ಧಿ ಪಡಿಸಲಾಗುವುದು. ಇಲ್ಲಿ ವೈ-ಫೈ ಸೌಲಭ್ಯದೊಂದಿಗೆ ರೆಡಿಮೇಡ್ ವರ್ಕ್‌ಸ್ಪೇಸ್‌ ಕೂಡ ಇರಲಿದೆ. ಬಳಿಕ ಹಂತ-2ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Shakti Scheme: ಪ್ರಯಾಣಿಕರ ಸಂದಣಿ ಅನುಗುಣವಾಗಿ ಹೆಚ್ಚುವರಿ KSRTC ಬಸ್​ಗಳ ಕಾರ್ಯಾಚರಣೆಗೆ ಸೂಚನೆ

ಹಂತ-1ಎ ಯಲ್ಲಿ ಸ್ಕಲ್ಪ್ಚರ್ ಕೋರ್ಟ್, 1.4 ಕಿ.ಮೀ ಉದ್ದದ ವಾಕ್‌ವೇ, ಫುಡ್‌ಕೋರ್ಟ್‌, ಎಲಿವೇಟೆಡ್‌ ವಾಕ್‌ವೇ ಮುಂತಾದ ಸೌಲಭ್ಯಗಳು ಬರಲಿವೆ. ಹಂತ-1ಬಿ ಯಲ್ಲಿ ಮಕ್ಕಳ ಆಟದ ತಾಣ, ಹೊರಾಂಗಣ ಜಿಮ್‌, ಸಾಕುಪ್ರಾಣಿಗಳ ಓಡಾಟಕ್ಕೆ ಅನುಕೂಲ, ಕಾರಂಜಿ, ವಾಚ್‌ ಟವರ್ ನಿರ್ಮಿಸಲಾಗುವುದು. ಹಂತ-2ರಲ್ಲಿ ಇನ್ನೋವೇಶನ್‌ ಹಬ್‌, ಕಲ್ಚರಲ್‌ ಹಬ್‌, ನರ್ಸರಿ, ಸ್ಪೋರ್ಟ್ಸ್ ಹಬ್‌, ಮಲ್ಟಿಪರ್ಪಸ್‌ ಥಿಯೇಟರ್​ಗಳು ಇರಲಿವೆ ಎಂದು ಸಚಿವರು ತಿಳಿಸಿದರು.

ಉದ್ದೇಶಿತ ವೃಕ್ಷೋದ್ಯಾನದಲ್ಲಿ ಕನ್ನಡ ನಾಡಿನ ಸಂಸ್ಕೃತಿಯ ಪ್ರತಿಬಿಂಬ ಇರುವಂತೆ ನೋಡಿಕೊಳ್ಳಲಾಗುವುದು. ಇದರ ಜೊತೆಗೆ ಎನ್‌ಜಿಇಎಫ್‌ನ ಬೆಳವಣಿಗೆ, ಅದರ ಯಶಸ್ಸು ಇತ್ಯಾದಿಗಳನ್ನು ಬಿಂಬಿಸಲಾಗುವುದು. ಒಟ್ಟಿನಲ್ಲಿ ಬೆಂಗಳೂರಿನ ಹಸಿರನ್ನು ಉಳಿಸಿಕೊಂಡು, ಅಭಿವೃದ್ಧಿಯನ್ನು ಸಾಧಿಸಬೇಕು ಎನ್ನುವುದು ನಮ್ಮ ಒತ್ತಾಸೆಯಾಗಿದೆ ಎಂದರು.

ನಗರದ ಪೂರ್ವ ಭಾಗ ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಆ ಭಾಗದ ನಿವಾಸಿಗಳಿಗೆ ಒಳ್ಳೆಯ ಪರಿಸರ ಇರುವಂತೆ ನೋಡಿಕೊಳ್ಳುವುದು ಕೂಡ ಈ ಆಶಯದ ಹಿಂದಿದೆ. ಇದರ ಜೊತೆಗೆ ಉದ್ದೇಶಿತ ಟ್ರೀಪಾರ್ಕ್‌ ವಿಶ್ವ ದರ್ಜೆಯ ತಾಣವಾಗಬೇಕು ಎನ್ನುವ ಕಳಕಳಿ ತಮ್ಮದಾಗಿದೆ ಎಂದು ಸಚಿವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ