
ಬೆಂಗಳೂರು, ಮಾರ್ಚ್ 10: ಖತರ್ನಾಕ್ ಪ್ಲ್ಯಾನ್ ಮಾಡಿ ಮನೆಯೊಂದರಿಂದ ಬರೋಬ್ಬರಿ ಮೂರು ಕೋಟಿ ಬೆಲೆ ಬಾಳುವ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬೆಂಗಳೂರಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ವೇಲಾರಾಮ್ ಆರೋಪಿಯಾಗಿದ್ದು, ಈತ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಟೈಲ್ಸ್ ಕಾಮಗಾರಿ ಮಡುತ್ತಿದ್ದ ಎನ್ನಲಾಗಿದೆ. ಬರೋಬ್ಬರಿ 6 ತಿಂಗಳು ಸ್ಕೆಚ್ ಹಾಕಿ ಆರೋಪಿ ಮನೆ ದೋಚಿರುವ ವಿಚಾರವೂ ತನಿಖೆ ವೇಳೆ ಬಯಲಾಗಿದೆ.
ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯುಡಿಷಿಯಲ್ ಲೇಔಟ್ನಲ್ಲಿನ ಮನೆ ಮಾಲೀಕರು ಅಮೆರಿಕಾದಲ್ಲಿ ಸೆಟಲ್ ಆಗಿದ್ದರು. ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಮಾತ್ರ ಬೆಂಗಳೂರಿನಲ್ಲಿರುವ ಈ ಮನೆಗೆ ದಂಪತಿ ಬಂದು ಹೋಗ್ತಿದ್ದರು. ಈ ನಡುವೆ ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ವೇಲಾರಾಮ್ ಕಣ್ಣು ಈ ಮನೆಯ ಮೇಲೆ ಬಿದ್ದಿದೆ. ಸುಮಾರು ಇಪ್ಪತ್ತು ಮಂದಿ ರಾಜಸ್ಥಾನ ಮೂಲದ ಯುವಕರಿಂದ ಗ್ರಾನೈಟ್, ಟೈಲ್ಸ್ ಅಳವಡಿಕೆ ಕೆಲಸ ನಡೆಯುತ್ತಿದ್ದರೂ ಇವರ್ಯಾರಿಗೂ ಅನುಮಾನ ಬಾರದಂತೆ ಪಕ್ಕದ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಆರೋಪಿ ಗಮನಿಸಿದ್ದ. ಮೂರು ಬಾರಿ ಮನೆಯ ಬಳಿ ಹೋಗಿ ಸ್ಲೈಡ್ ಡೋರ್ ಓಪನ್ ಮಾಡಿ ಹೇಗೆ ಕನ್ನ ಹಾಕಬಹುದು ಎಂಬ ಪ್ಲ್ಯಾನ್ ಮಾಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಹೇಳಿದ್ದು ಗಿಳಿಶಾಸ್ತ್ರ, ಇಕ್ಕಿದ್ದು ದುಡ್ಡು, ಚಿನ್ನಾಭರಣಕ್ಕೆ ಗಾಳ! ಐಟಿ ಅಧಿಕಾರಿಗೆ ಲಕ್ಷಾಂತರ ರೂ. ಪಂಗನಾಮ
ತನ್ನ ಯೋಜನೆಯಂತೆ ಜೊತೆಯಲ್ಲಿರುವ ಸ್ನೇಹಿತರಿಗೂ ಹೇಳದೆ ಮನೆಯ ಸ್ಲೈಡ್ ಡೋರ್ ಮೂಲಕ ಒಳಗೆ ಎಂಟ್ರಿ ಕೊಟ್ಟಿದ್ದ ವೇಲಾರಾಮ್, ಲಾಕರ್ ಓಪನ್ ಮಾಡಿ ಮೂರು ಕೋಟಿ ಬೆಲೆ ಬಾಳುವ 1 ಕೆಜಿ 800 ಗ್ರಾಂ ಚಿನ್ನಾವಭರಣ, ಡೈಮಂಡ್ ಹಾಗೂ ನಗದು ಕಳ್ಳತನ ಮಾಡಿದ್ದ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕ ಖುಷಿಗೆ ಯಾರಿಗೂ ಹೇಳದೆ ಸೀದಾ ರಾಜಸ್ಥಾನಕ್ಕೆ ತೆರಳಿ ಮನೆಯಲ್ಲಿ ಚಿನ್ನಾಭರಣ ಬಚ್ಚಿಟ್ಟಿದ್ದ. ಈ ನಡುವೆ ಮನೆಯ ಸಿಸಿಟಿವಿಯನ್ನ ಅಮೆರಿಕಾದಲ್ಲಿದ ದಂಪತಿ ಮೊಬೈಲ್ ಮೂಲಕ ಪರಿಶೀಲನೆ ನಡೆಸಿದಾಗ ಕಳ್ಳತನ ನಡೆದಿರೋ ವಿಷಯ ಗೊತ್ತಾಗಿದೆ. ಘಟನೆ ಸಂಬಂಧ ಸಂಬಂಧಿಕರ ಮೂಲಕ ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿ ವೇಲಾರಾಮ್ನ ಪೊಲೀಸರೀಗ ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:24 pm, Tue, 10 March 26