Manipur Incident: ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ವಾಪಸ್ ಆಗುತ್ತಿದ್ದ ಯುವತಿಗೆ ರ್ಯಾಪಿಡೋ ಬೈಕ್ ಚಾಲಕನಿಂದ ಲೈಂಗಿಕ ಕಿರುಕುಳ
ಮಣಿಪುರದಲ್ಲಿ ನಡೆದ ಮಹಿಳೆಯ ಬೆತ್ತಲೆ ಮೆರವಣಿಗೆ ಖಂಡಿಸಿ ಬೆಂಗಳೂರಿನ ಟೌನ್ಹಾಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು. ಇದರಲ್ಲಿ ಭಾಗಿಯಾಗಿ ಮನೆಗೆ ವಾಪಸ್ ಆಗುತ್ತಿದ್ದಾಗ ರ್ಯಾಪಿಡೋ ಬೈಕ್ ಚಾಲಕ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಯುವತಿ ಟ್ವೀಟ್ ಮಾಡಿದ್ದಾಳೆ.
ಬೆಂಗಳೂರು, ಜುಲೈ 22: ಮಣಿಪುರದಲ್ಲಿ (Manipur) ನಡೆದ ಮಹಿಳೆಯ ಬೆತ್ತಲೆ ಮೆರವಣಿಗೆ ಖಂಡಿಸಿ ನಗರದ ಟೌನ್ಹಾಲ್ನಲ್ಲಿ ನಡೆದ ಪ್ರತಿಘಟನೆಯಲ್ಲಿ ಭಾಗಿಯಾದ ಯುವತಿಯೊಬ್ಬಳಿಗೆ ರ್ಯಾಪಿಡೋ ಬೈಕ್ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಡ್ರಾಪ್ ನಂತರ ಲವ್ ಯು ಅಂತ ಮೆಸೆಜ್ ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ನೊಂದ ಯುವತಿ ಟ್ವೀಟ್ ಮಾಡಿದ್ದು, ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ.
ಮಣಿಪುರ ಘಟನೆ ಖಂಡಿಸಿ ಟೌನ್ಹಾಲ್ ಮುಂಭಾಗ ನಡೆದ ಪ್ರತಿಭಟನೆ ನಂತರ ಮನೆಗೆ ವಾಪಸ್ ಆಗಲು ಯುವತಿಯೊಬ್ಬಳು ರ್ಯಾಪಿಡೊ ಆಟೋ ಬುಕ್ ಮಾಡಿದ್ದಾಳೆ. ಇದು ಕ್ಯಾನ್ಸಲ್ ಆದ ಹಿನ್ನೆಲೆ ರ್ಯಾಪಿಡೊ ಬೈಕ್ ಬುಕ್ ಮಾಡಿದ್ದಾಳೆ. ಆದರೆ ಚಾಲಕ ರ್ಯಾಪಿಡೋ ಬೈಕ್ ಬದಲು ಬೇರೆ ಬೈಕ್ ತಂದಿದ್ದಾನೆ. ಆದರೂ ಬೈಕ್ ಹತ್ತಿದ ಯುವತಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಗ ಮಧ್ಯ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಅಷ್ಟೇ ಅಲ್ಲದೆ, ಡ್ರಾಪ್ ಮಾಡಿದ ನಂತರ ಬೈಕ್ ಚಾಲಕ ಯುವತಿಯ ಮೊಬೈಲ್ಗೆ ಕರೆ ಮಾಡಿದ್ದಾನೆ. ನಂತರ ವಾಟ್ಸ್ಆ್ಯಪ್ಗೆ ಮೆಸೆಜ್ ಮಾಡಿದ್ದಾನೆ. ಯಾಕೆ ಕಾಲ್ ಮಾಡುತ್ತೀಯಾ? ಹಣ ಪಾವತಿಸಿದ್ದೇನೆ, ಆ್ಯಪ್ ಪರಿಶೀಲನೆ ನಡೆಸುವಂತೆ ಯುವತಿ ಸೂಚಿಸಿದ್ದಾಳೆ. ಈ ವೇಳೆ ಲವ್ ಯು ಅಂತ ಮೆಸೇಜ್ ಮಾಡಿದ್ದಾನೆ.
ರ್ಯಾಪಿಡೊ ಬೈಕ್ ಚಾಲಕ ಮಾಡಿದ ಮೆಜೆಜ್ಗಳನ್ನು ಯುವತಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಆರೋಪಿಸಿದ್ದಾಳೆ. ಇದನ್ನು ಗಮನಿಸಿದ ಬೆಂಗಳೂರು ಪೊಲೀಸರು, ಟ್ವಿಟ್ ಮಾಡಿದ ಯುವತಿಯನ್ನು ಸಂಪರ್ಕ ಮಾಡಲು ಮುಂದಾಗಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ