ಬೆಂಗಳೂರು: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಭಾರತ್ ಬಂದ್‌ಗೆ ಸಂಯುಕ್ತ ಕಿಸಾನ್ ಮೋರ್ಚಾದಿಂದ ಕರೆ ನೀಡಲಾಗಿದೆ. 119 ದಿನಗಳಿಂದ ದೆಹಲಿಯಲ್ಲಿ ಹೋರಾಟ ನಡೆಸ್ತಿರುವ ರೈತರ ಹೋರಾಟಕ್ಕೆ ಇಂದು 4 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಭಾರತ್ ಬಂದ್‌ಗೆ ರೈತ ಸಂಘಟನೆಗಳು ಕರೆ ನೀಡಿವೆ. ಈ ಹೋರಾಟಕ್ಕೆ ರಾಜ್ಯ ರೈತ ಸಂಘಗಳು, ಸಂಯುಕ್ತ ಹೋರಾಟ-ಕರ್ನಾಟಕ ಸಮಿತಿ ಸೇರಿದಂತೆ ಕೆಲ ಸಂಘಟನೆಗಳು ಬೆಂಬಲ ನೀಡಿದ್ದು ಕರ್ನಾಟಕದಲ್ಲೂ ಬಂದ್ ಯಶಸ್ವಿಗೊಳಿಸುವಂತೆ ರೈತ ಮುಖಂಡ ಬಡಗಲಪುರ ನಾಗೇಂದ್ರ ಮನವಿ ಮಾಡಿಕೊಂಡಿದ್ದಾರೆ. ಹಾಗಾದ್ರೆ ಇಂದು ಕರ್ನಾಟಕದಲ್ಲಿ ಭಾರತ್ ಬಂದ್ನ ಬಿಸಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಸದ್ಯ ಭಾರತ್ ಬಂದ್‌ಗೆ ಕರ್ನಾಟಕದಲ್ಲಿ ಅಷ್ಟಾಗಿ ಉತ್ತಮ ಸ್ಪಂದನೆ ಕಾಣುತ್ತಿಲ್ಲ. ಆದ್ರೆ 11 ಗಂಟೆಯ ನಂತರ ಭಾರತ್ ಬಂದ್ನ ಬಿಸಿ ತಟ್ಟುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಬಿಎಂಟಿಸಿ, KSRTC ಬಸ್ ಸಂಚಾರ ಯಥಾಸ್ಥಿತಿ ಇದ್ದು ಮೆಟ್ರೋ ಸಂಚಾರ, ಆಟೋ ಸಂಚಾರ ಎಂದಿನಂತೆ ಇದೆ. ಓಲಾ, ಉಬರ್ ಸೇವೆಯಲ್ಲೂ ಯಾವುದೇ ವ್ಯತ್ಯಯ ಇಲ್ಲ. ಖಾಸಗಿ ಬಸ್ ಸಂಚಾರದಲ್ಲೂ ಯಾವುದೇ ವ್ಯತ್ಯಯ ಕಂಡು ಬಂದಿಲ್ಲ. ರೈಲ್ವೆ ಸಂಚಾರವೂ ಎಂದಿನಂತೆಯೇ ಇದೆ. ಅಲ್ಲದೆ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ವ್ಯತ್ಯಯ ಇಲ್ಲ. ಮೆಡಿಕಲ್ ಶಾಪ್, ಹಾಲಿನ ಮಳಿಗೆಗಳು ಎಂದಿನಂತೆ ಓಪನ್ ಆಗಿವೆ. ಇನ್ನು ಇಂದಿನ ಬಂದ್‌ಗೆ ಲಾರಿ ಮಾಲೀಕರಿಂದಲೂ ಬೆಂಬಲ ಸಿಕ್ಕಿಲ್ಲ.
ಇನ್ನು ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಕಲಬುರಗಿ, ರಾಯಚೂರಿನಲ್ಲಿ ವಿವಿಧ ಸಂಘಟನೆಗಳು ಬಂದ್ ಚಳುವಳಿ ನಡೆಸುತ್ತಿದ್ದಾರೆ. ಆದ್ರೆ ದೈನಂದಿನ ಸೇವೆಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಖಂಡಿಸಿ ಭಾರತ್ ಬಂದ್‌ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಬಲ ನೀಡಿದ್ದು ಇಂದು ವಿನೂತನ ಪ್ರತಿಭಟನೆ ಮಾಡಲಿದ್ದಾರೆ. ಬೆಳಿಗ್ಗೆ 11.30ಕ್ಕೆ ಮೆಜೆಸ್ಟಿಕ್ ನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮಾರುವ ಮೂಲಕ ರೈತರಿಗೆ ಬೆಂಬಲ ನೀಡಲಿದ್ದಾರೆ.
ಯಾವೆಲ್ಲಾ ಅಂಶಗಳನ್ನು ಇಟ್ಟುಕೊಂಡು ವಾಟಾಳ್ ಪ್ರತಿಭಟನೆಗೆ ನಡೆಸಲಿದ್ದಾರೆ?
-ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗ್ತಿಲ್ಲ
-ರೈತರ ಬೇಡಿಕೆಗಳು ಈಡೇರಿಲ್ಲ
-ಕೇಂದ್ರ ಸರ್ಕಾರ ರೈತರನ್ನು ಕಡೆಗಣಿಸಿದೆ
-ಸರ್ಕಾರ ರೈತರನ್ನು ಬೀದಿಪಾಲು ಮಾಡಿದೆ
-ನರೇಂದ್ರ ಮೋದಿ ಸರ್ಕಾರ ರೈತ ವಿರೋಧಿ
-ಸಿಎಂ ಯಡಿಯೂರಪ್ಪ ಸರ್ಕಾರ ಭ್ರಷ್ಟ ಸರ್ಕಾರ.. ಇತ್ಯಾದಿ.
ಆಂಧ್ರ ಪ್ರದೇಶದಲ್ಲಿಬಂದ್‌ಗೆ ವ್ಯಾಪಕ ಬೆಂಬಲ
ಆಂಧ್ರ ಪ್ರದೇಶದಲ್ಲಿ ಭಾರತ್ ಬಂದ್‌ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಆಂಧ್ರ ಪ್ರದೇಶದ ಗುಂಟೂರು, ವಿಜಯನಗರಂ, ಕರ್ನೂಲು, ಶ್ರೀಕಾಕುಳಂ, ವಿಶಾಖಪಟ್ಟಣಂ ಸೇರಿ ಅನೇಕ ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ಬಸ್ ನಿಲ್ದಾಣಗಳಿಗೆ ಬಸ್ಗಳು ಸೀಮಿತವಾಗಿದ್ದು ರಸ್ತೆಗಳು ಬಿಕೋ ಎನ್ನುತ್ತಿವೆ. ಕೆಲ ಸಂಘಟನೆಗಳು ಪ್ರತಿಭಟನೆ ಸಹ ನಡೆಸುತ್ತಿವೆ.
ಇದನ್ನೂ ಓದಿ: Bharat Bandh Tomorrow: ನಾಳೆ ಭಾರತ್ ಬಂದ್, ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ನಾಲ್ಕು ತಿಂಗಳು
Published On - 8:20 am, Fri, 26 March 21