ಕಲಬುರಗಿ: ಪ್ರತಿನಿತ್ಯ ಮನೆಯಲ್ಲಿ ಕಳ್ಳತನವಾಗಿದೆ, ಜನರನ್ನು ಯಾಮಾರಿಸಿ ಕಳ್ಳರು ಹಣ ದೋಚುತ್ತಿದ್ದಾರೆ, ದರೋಡೆ ಮಾಡುತ್ತಿದ್ದಾರೆ ಎಂಬ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ, ನಗರದಲ್ಲಿ ಇದೀಗ ಕಳ್ಳರು ಕನ್ನ ಹಾಕುತ್ತಿರುವ ವಸ್ತುವೇ ಬೇರೆ. ಹೌದು, ನಗರದಲ್ಲಿ ಕಳ್ಳರ ಕಣ್ಣು ಇದೀಗ ಮಕ್ಕಳು ಓಡಿಸುವ ಸೈಕಲ್ಗಳ ಮೇಲೆ ಬಿದ್ದಿದೆ.
ಹೆತ್ತವರ ಬಳಿ ಕಾಡಿ ಬೇಡಿ, ಹಣವನ್ನು ಹೊಂದಿಸಿ ಮಕ್ಕಳು ಸೈಕಲ್ ಖರೀದಿಸಿರುತ್ತಾರೆ. ಆದರೆ ಕಷ್ಟಪಟ್ಟು ಖರೀದಿಸಿದ ಚಿಣ್ಣರ ಸೈಕಲ್ಗಳ ಮೇಲೆ ಕಳ್ಳರ ಕೆಟ್ಟ ದೃಷ್ಟಿ ಬಿದ್ದಿದ್ದು, ಚನ್ನವೀರ ನಗರ ಸೇರಿದಂತೆ ನಗರದ ಅನೇಕ ಕಡೆ ಮೇಲಿಂದ ಮೇಲೆ ಸೈಕಲ್ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇದೆ. ಇದರಿಂದ, ನಗರದ ಮಕ್ಕಳು ಹಾಗೂ ಅವರ ಪೋಷಕರು ಚಿಂತೆಗೀಡಾಗಿದ್ದಾರೆ.
ಮಕ್ಕಳ ಆನಂದಕ್ಕೆ ಕಳ್ಳರಿಂದ ಕೊಡಲಿಪೆಟ್ಟು
ಕೊರೊನಾ ಮಹಾಮಾರಿಯಿಂದ ಶಾಲೆಗಳು ಬಂದ್ ಆಗಿದ್ದು ಮಕ್ಕಳು ಇದೀಗ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಈ ವೇಳೆ, ಮಕ್ಕಳ ಖುಷಿಗಾಗಿ ಮತ್ತು ಮನೆಯಲ್ಲೇ ಕುಳಿತು ಅವರ ಆರೋಗ್ಯ ಹಾಳಾಗಬಾರದು ಎಂಬ ಕಾರಣಕ್ಕಾಗಿ ಹಲವು ಪೋಷಕರು ಸಾವಿರಾರು ರೂಪಾಯಿ ಖರ್ಚು ಮಾಡಿ ತಮ್ಮ ಮಕ್ಕಳಿಗೆ ಸೈಕಲ್ ಕೊಡಿಸಿದ್ದಾರೆ. ಆದರೆ ಇತ್ತೀಚೆಗೆ, ಮಕ್ಕಳ ಆನಂದಕ್ಕೆ ಬೆಂಕಿ ಇಡುವ ಕೆಲಸಕ್ಕೆ ಖದೀಮರು ಮುಂದಾಗಿದ್ದು, ನಗರದಲ್ಲಿ ಮಕ್ಕಳ ಸೈಕಲ್ಗಳನ್ನು ಕದ್ದು ಮಾರಾಟ ಮಾಡುವ ದೊಡ್ಡ ಗ್ಯಾಂಗ್ ಒಂದು ಇದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಸೈಕಲ್ ಟಾರ್ಗೆಟ್ ಮಾಡಲು ಕಾರಣವೇನು?
ಬಹುತೇಕರು ತಮ್ಮ ಸೈಕಲ್ಗಳನ್ನು ಮನೆ ಮುಂದೆಯೇ ನಿಲ್ಲಿಸುತ್ತಾರೆ. ಅಲ್ಲದೆ, ಮಕ್ಕಳು ಹೆಚ್ಚಾಗಿ ಸೈಕಲ್ಗಳನ್ನು ಬಳಸುವುದರಿಂದ ಸರಿಯಾಗಿ ಲಾಕ್ ಮಾಡುವುದಿಲ್ಲ ಎಂಬುವ ವಿಷಯ ಸೈಕಲ್ ಕದಿಯಲು ಒಂದು ಕಾರಣವಾದರೆ ಮತ್ತೊಂದೆಡೆ ಸೈಕಲ್ಗಳ ಬೆಲೆ ಇದೀದ ಹೆಚ್ಚಾಗಿದ್ದು, ಒಂದು ಸೈಕಲ್ಗೆ ಏನಿಲ್ಲಾ ಅಂದ್ರು 5 ರಿಂದ 20 ಸಾವಿರ ರೂಪಾಯಿ ಬೆಲೆಯಿದೆ. ಹಾಗಾಗಿ, ಕಳ್ಳರ ಚಿತ್ತ ಇದೀಗ ಸೈಕಲ್ ಕಳ್ಳತನದತ್ತ ನಾಟಿದೆ. ಇನ್ನು, ದ್ವಿಚಕ್ರ ವಾಹನ ಕದ್ದರೆ ಸಿಕ್ಕಿ ಬೀಳುವ ಸಾಧ್ಯತೆ ಹೆಚ್ಚಾಗಿರುವ ಜೊತೆಗೆ ಅದನ್ನು ಮಾರಾಟ ಮಾಡುವುದು ಕಷ್ಟವಾಗಿದೆ. ಆದರೆ, ಸೈಕಲ್ಗಳನ್ನು ಸುಲಭವಾಗಿ ಮಾರಾಟ ಮಾಡಬಹುದು. ಹೀಗಾಗಿ, ಖದೀಮರು ಇದೀಗ ದ್ವಿಚಕ್ರ ವಾಹನಗಳ ಕಳ್ಳತನ ಬಿಟ್ಟು ಸೈಕಲ್ ಕಳ್ಳತನಕ್ಕೆ ಮುಂದಾಗಿದ್ದಾರೆ.
ಮನೆ ಮುಂದೆ ನಿಲ್ಲಿಸಿದ ಸೈಕಲ್ಗಳನ್ನು ಹಾಡಹಗಲೇ ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ ಅವರು ಕೂಡ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇತ್ತ, ಸಾವಿರಾರು ರೂಪಾಯಿ ಖರ್ಚು ಮಾಡಿ ಮಕ್ಕಳಿಗೆ ಸೈಕಲ್ ಕೊಡಿಸಿದ್ದೇವೆ. ಅವುಗಳು ಕಳ್ಳತನವಾದರೆ ಮತ್ತೆ ಮಕ್ಕಳಿಗೆ ಸೈಕಲ್ ಕೊಡಿಸಲು ಆಗುವುದಿಲ್ಲ. ಹೀಗಾಗಿ, ಪೊಲೀಸರು ಸೈಕಲ್ ಕಳ್ಳರನ್ನು ಪತ್ತೆ ಮಾಡಬೇಕು ಎಂದು ರಾಜು ಎಂಬ ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ನಡುವೆ, ನಗರದ ಕೆಲವೆಡೆ ಸೈಕಲ್ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿವೆ. ಈ ಬಗ್ಗೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಅಮಾಯಕರಂತೆ ಅಡ್ಡಾಡುವವರ ಮೇಲೆ ನಿಗಾ ಇಡಲು ಸೂಚಿಸಲಾಗಿದ್ದು, ಯಾರು ಈ ಕೃತ್ಯವನ್ನು ಮಾಡುತ್ತಿದ್ದಾರೆ, ಅವರು ಎಲ್ಲಿಯವರು ಎನ್ನುವುದನ್ನು ಪತ್ತೆ ಮಾಡುವ ಕೆಲಸ ಮಾಡುತ್ತೇವೆ ಎಂದು ನಗರ ಡಿಸಿಪಿ ಕಿಶೋರ್ಬಾಬು ಹೇಳಿದ್ದಾರೆ.