ಬೀದರ್: ಈಗ ಎಲ್ಲೆಲ್ಲೂ ಹೈ ಬ್ರೇಡ್ ಗೋ ತಳಿಗಳದ್ದೇ ಕಾರುಬಾರು. ಇದರಿಂದಾಗಿ ದೇಸಿ ತಳಿಯ ಜಾನುವಾರುಗಳ ಸಂತತಿ ನಲುಗುತ್ತಿದೆ. ಅದರಲ್ಲೂ ವಿಶ್ವವಿಖ್ಯಾತ ಬೀದರ್ ಜಿಲ್ಲೆಯ ದೇವಿಣಿ ತಳಿ ಸಂತತಿ ಅವಸಾನದತ್ತ ಸಾಗಿದೆ. ಆರು ಶತಮಾನದಷ್ಟು ಹಳೆಯದಾದ ದೇವಣಿ ತಳಿ ಸರಕಾರದ ಇಚ್ಛಾಶಕ್ತಿಯ ಕೊರತೆ, ರೈತರ ನಿರ್ಲಕ್ಷ್ಯದಿಂದ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸದ್ಯ ಈ ಸಂತತಿ ಕಾಪಾಡಲು ದೇವಿಣಿ ತಳಿ ಸಂರಕ್ಷಣೆ ಪಾರಂ ಮಾಡಿದ್ದು, ಅಲ್ಲಿ ದೇಶಿ ಗೋ ತಳಿಗಳನ್ನು ತಂದು ಅವುಗಳ ಸಂತತಿ ವೃದ್ಧಿಸಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ವಿಶೇಷವೆಂದರೆ ಈ ತಳಿಯ ಸಂತತಿಯನ್ನು ಹೆಚ್ಚಿಸಲು ಸ್ವತಃ ಪಶುಸಂಗೋಪನೆ ಸಚಿವರೇ ಮುಂದೆ ಬಂದಿದ್ದಾರೆ.
ಬೀದರ್ನ ದೇವಣಿ ತಳಿಯ ಸಂಖ್ಯೆಯಲ್ಲಿ ಇಳಿಕೆಯಾಗಲು ಪ್ರಮುಖ ಕಾರಣ ರೈತರಲ್ಲಿ ಈ ತಳಿಯ ಬಗ್ಗೆ ಜಾಗ್ರತಿ ಮೂಡಿಸದಿರುವುದೇ ಆಗಿದೆ. ಈ ದೇಸಿ ಗೋ ತಳಿ ಹೆಚ್ಚಿಗೆ ಹಾಲು ಕೊಡುತ್ತದೆ. ಚಳಿಗಾಲ, ಬೇಸಿಗೆಕಾಲ, ಮಳೆಗಾದಲ್ಲಿಯೂ ಬದುಕಬಲ್ಲ ಆಕಳು ಇದಾಗಿದೆ. ಸದ್ಯ ಬೀದರ್ ಜಿಲ್ಲೆಯ ಭಾಲ್ಕಿ ಬಳಿ ದೇವಣಿ ತಳಿ ಸಂರಕ್ಷಣೆಗಾಗಿ ಫಾರಂ ನಿರ್ಮಿಸಲಾಗಿದ್ದು, ಅಲ್ಲಿ ಸುಮಾರು 28 ಆಕಳು, 21 ಕರುಗಳು, 5 ಹೋರಿಗಳಿದ್ದು, ನಶಿಸಿ ಹೋಗುತ್ತಿರುವ ದೇಸಿ ಗೋವುಗಳನ್ನು ರಕ್ಷಣೆ ಮಾಡಲಾಗುತ್ತಿದೆ.
ಆರಂಭದಲ್ಲಿ 200 ರಷ್ಟಿದ್ದ ದೇವಣಿ ಗೋವುಗಳು ಇಂದು ಈ ದೇವಣಿ ತಳಿ ಸಂರಕ್ಷಣೆ ಫಾರಂನಲ್ಲಿ 60 ಗೋವುಗಳಿದೆ. ಕಳೆದೆರಡು ವರ್ಷದಲ್ಲಿ 400ಕ್ಕೂ ಹೆಚ್ಚು ಗೋವುಗಳನ್ನು ಮಾರಾಟ ಮಾಡಲಾಗಿದೆ. ಇನ್ನೂಳಿದವನ್ನು ಸಂರಕ್ಷಣೆ ಮಾಡಲಾಗುತ್ತಿದೆ ಎಂದು ದೇವಣಿ ತಳಿ ಸಂರಕ್ಷಣೆಗಾಗಿ ಫಾರಂಗೆ ಭೇಟಿ ಕೊಟ್ಟ ಬಳಿಕ ಪಶು ಸಂಗೊಪನಾ ಸಚಿವರಾದ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಮಾತ್ರ ಕಂಡು ಬರುವ ದೇವಣಿ ತಳಿಯ ಮೂಲ ಕೂಡಾ ಬೀದರ್ ಜಿಲ್ಲೆಯದ್ದು, ದೇವಣಿ ಗೋ ತಳಿ ನೋಡಲು ಆಕರ್ಷಕವಾಗಿದ್ದು, ತನ್ನ ದೈತ್ಯ ದೇಹ, ಸುಂದರವಾದ ಮೈಮಾಟದೊಂದಿಗೆ ಜನರನ್ನು ತನ್ನತ್ತ ಸೆಳೆಯುವಂತಾ ಶಕ್ತಿ ಹೊಂದಿದೆ. ಜತೆಗೆ ದೇವಣಿ ತಳಿ ವರ್ಷಕ್ಕೆ 1200 ಲೀಟರ್ ಹಾಲು ಕೊಡುತ್ತದೆ. ಇನ್ನು ಹೋರಿಗಳು ಕೂಡಾ ಬಲಿಷ್ಠವಾಗಿದ್ದು, ರೈತರಿಗೆ ಹೇಳಿ ಮಾಡಿಸಿದ ರಾಸುಗಳಾಗಿವೆ. ಪ್ರಪಂಚದ ಯಾವುದೇ ಗೋ ತಳಿಯು ಹೈನುಗಾರಿಕೆ ಹಾಗೂ ಹೊಲದಲ್ಲಿ ಕೆಲಸ ಮಾಡಲು ಬರುವುದಿಲ್ಲ. ಆದರೆ ದೇವಣಿ ತಳಿಯು ಹಾಲಿಗೂ ಹಾಗೂ ರೈತನ ಹೊಲದಲ್ಲಿ ಕೆಲಸ ಮಾಡಲು ಎರಡಕ್ಕೂ ಅನುಕೂಲವಾಗಿದೆ. ಇಂತಹ ಅಪರೂಪವಾದ ಗೋ ತಳಿಯೂ ಇಂದು ಅವಸಾನದತ್ತ ಸಾಗಿರುವುದು ವಿಷಾದದ ಸಂಗತಿಯಾಗಿದೆ.
ಬೀದರ್ ಜಿಲ್ಲೆಯಲ್ಲಿ ಈಗ ಸರಿ ಸುಮಾರು 10 ಸಾವಿರ ಮಾತ್ರ ದೇವಣಿ ತಳಿಗಳು ಕಂಡು ಬರುತ್ತಿದ್ದು, ಇದರ ಸಂತತಿ ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ ಹತ್ತು ಪಟ್ಟು ಕಡಿಮೆಯಾಗಿದೆ. ದೇಸಿ ತಳಿಯ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಇಲ್ಲದಿದ್ದರೆ ಮುಂದೊಂದು ದಿನ ದೇವಣಿ ತಳಿಯ ಬಗ್ಗೆ ಫೋಟೋದಲ್ಲಿ ತೋರಿಸುವ ಕಾಲ ಹತ್ತಿರಕ್ಕೆ ಬರುವುದರಲ್ಲಿ ಸಂದೇಹವೇ ಇಲ್ಲ. ಇನ್ನೂ ಬೀದರ್ ಜಿಲ್ಲೆಯವರೇ ಈಗ ಪಶುಸಂಗೋಪನಾ ಸಚಿವರಾಗಿದ್ದು, ಆರು ಶತಮಾನಗಳಷ್ಟು ಹಳೆಯದಾದ ದೇವಣಿ ಗೋವು ತಳಿ ಸಂರಕ್ಷಣೆ ಮಾಡುವ ಜವಾಬ್ದಾರಿ ಸಚಿವರ ಮೇಲಿದೆ ಎಂದು ದೇವಣಿ ಗೋ ತಳಿ ಸಂರಕ್ಷಕ ಡಾ. ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ.
ಪ್ರತಿಯೊಬ್ಬ ಮಾನವನೂ ಪ್ರತಿನಿತ್ಯ ಉಪಯೋಗಿಸುವ ಹಲವು ವಸ್ತುಗಳನ್ನು ದೇಸಿ ಗೋವುಗಳಿಂದ ಪಡೆಯಬಹುದಾಗಿದೆ. ದೇಸಿ ಗೋವುಗಳು ರೈತರಿಗೆ ವರದಾನವಿದ್ದಂತೆ ಅವು ರೈತರಿಗೆ ಗೊಬ್ಬರ, ಉರುವಲು ಕೃಷಿ, ಔಷಧ, ಉಳುವೆ ಹೀಗೆ ನಾನಾ ರೀತಿಯಲ್ಲಿ ಉಪಯುಕ್ತವಾಗಿವೆ. ಇಷ್ಟೆಲ್ಲಾ ಲಾಭವಿರುವ ಭಾರತೀಯ ಗೋವುಗಳ ಸಾಕಾಣಿಕೆ ಬಗ್ಗೆ ರೈತರಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಸರ್ಕಾರಗಳು ಭಾರತೀಯ ಗೋವುಗಳ ಸಾಕಣಿಕೆಯನ್ನು ಪ್ರೋತ್ಸಾಹಿಸಲು ಮುಂದೆ ಬರಬೇಕೆಂಬುವುದು ಸದ್ಯ ಇಲ್ಲಿನ ಜನರ ಮನವಿಯಾಗಿದೆ.
ಇದನ್ನೂ ಓದಿ:
4 ಗಿರ್ ತಳಿಯ ಗೋವುಗಳನ್ನ ಖರೀದಿಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ!
Published On - 12:05 pm, Wed, 30 June 21