ಬೀದರ್: ಕೊಪ್ಪಳ ಜಿಲ್ಲೆಯ ನಂತರ ಇದೀಗ ಕಲುಷಿತ ನೀರಿನ (Contaminated water) ಬಾಧೆ ಬೀದರ್ (Bidar) ಜಿಲ್ಲೆಯಲ್ಲೂ ಉದ್ಭವಿಸಿದೆ. ಕಲುಷಿತ ನೀರು ಸೇವಿಸಿ 18 ಮಂದಿ ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ಕರಿಕ್ಯಾಳ ಗ್ರಾಮದಲ್ಲಿ ನಡೆದಿದೆ. ಕುಡಿಯುವ ನೀರಿನ ಬಾವಿಗೆ ಚರಂಡಿ ನೀರು ಮಿಶ್ರಣವಾಗಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದಾರೆ.
ಕರಿಕ್ಯಾಳ ಗ್ರಾಮದಲ್ಲಿ ಕಲುಷಿತ ಬಾವಿ ನೀರು ಸೇವಿಸಿ ವಾಂತಿ ಭೇದಿ ಉಂಟಾಗಿ ಅಸ್ವಸ್ಥಗೊಂಡ 18 ಜನರ ಪೈಕಿ 6 ಮಂದಿ ಮಕ್ಕಳು ಸೇರಿದ್ದಾರೆ. ಸ್ವಸ್ಥರನ್ನು ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಯೋಗಕ್ಷೇಮ ವಿಚಾರಿಸಿದರು. ಇದೇ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ: ಕೊಪ್ಪಳ: ವಾಂತಿ, ಭೇದಿಗೆ 5 ವರ್ಷದ ಬಾಲಕ ಬಲಿ
ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರು ವಾಂತಿ ಬೇಧಿಯಾಗಿ ಅಸ್ವಸ್ಥಗೊಂಡಿದ್ದರು. ಈ ಪೈಕಿ ಒಂದೂವರೆ ವರ್ಷದ ಮಗು ತಾವರಗೇರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿತ್ತು. ನಂತರ ಹೊನ್ನಮ್ಮ ಎಂಬ ವೃದ್ದೆ ಸಾವನ್ನಪ್ಪಿದ್ದರು. ಆದರೆ ವೃದ್ಧೆಗೆ ಬೇರೆ ಬೇರೆ ಕಾಯಿಲೆಗಳಿದ್ದವು ಎಂದು ಕೊಪ್ಪಳ ಡಿಹೆಚ್ಓ ತಿಳಿಸಿದ್ದರು. ಇದಾದ ನಂತರ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವೆನೆಯಿಂದ 15 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಬಾಲಕಿ ಸಾವನ್ನಪ್ಪಿದ್ದಳು.
ನಿನ್ನೆಯಷ್ಟೇ ಕೊಪ್ಪಳದ ಕನಕಗಿರಿ ಪಟ್ಟಣದದಲ್ಲಿ ವಾಂತಿ, ಭೇದಿಗೆ 5 ವರ್ಷದ ಬಾಲಕ ಬಲಿಯಾಗಿದ್ದ. ಮಗು ಬುದ್ಧಿಮಾಂದ್ಯವಾಗಿದ್ದು, ವಾಂತಿ ಮಾಡಿಕೊಂಡಾಗ ಶ್ವಾಸಕೋಶದಲ್ಲಿ ವಾಂತಿ ಸೇರಿದೆ. ಇದರಿಂದ ಉಸಿರಾಟದ ತೊಂದರೆ ಉಂಟಾಗಿ ಮಗು ಸಾವನ್ನಪ್ಪಿದೆ ಎಂದು ಡಿಹೆಚ್ಒ ಸ್ಪಷ್ಟನೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Tue, 20 June 23