ವಿಷಕಾರಿ ರಾಸಾಯನಿಕಗಳಿಲ್ಲದ ಬೆಲ್ಲದ ಸಿಹಿಯನ್ನು ಚಟ್ನಳ್ಳಿ ಗ್ರಾಮದಲ್ಲಿ ಬಾಯ್ತುಂಬ ಸವಿಯಿರಿ

| Updated By: ಸಾಧು ಶ್ರೀನಾಥ್​

Updated on: Feb 03, 2024 | 2:29 PM

ಬೀದರ್ ಜಿಲ್ಲೆ ಚಟ್ನಳ್ಳಿ ಗ್ರಾಮದಲ್ಲಿ ತಯಾರಾಗುತ್ತಿದೆ ಸಾವಯವ ಬೆಲ್ಲ... ಇಲ್ಲಿ ತಯಾರಿಸುವ ವಿಷಮುಕ್ತ ಸಾವಯವ ಬೆಲ್ಲ ಕರ್ನಾಟಕ, ಆಂದ್ರ, ಮಹರಾಷ್ಟ್ರದಲ್ಲಿ ಮಾರಾಟವಾಗುತ್ತಿದೆ. 22 ವರ್ಷದಿಂದ ಇವರು ತಯಾರು ಮಾಡುವ ಸಾವಯವ ಬೆಲ್ಲಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ.

ವಿಷಕಾರಿ ರಾಸಾಯನಿಕಗಳಿಲ್ಲದ ಬೆಲ್ಲದ ಸಿಹಿಯನ್ನು ಚಟ್ನಳ್ಳಿ ಗ್ರಾಮದಲ್ಲಿ ಬಾಯ್ತುಂಬ ಸವಿಯಿರಿ
ಇಲ್ಲಿ ವಿಷಕಾರಿ ರಾಸಾಯನಿಕಗಳಿಲ್ಲದ ಬೆಲ್ಲದ ಸಿಹಿಯನ್ನು ಬಾಯ್ತುಂಬಾ ಸವಿಯಿರಿ
Follow us on

ಕೆಮಿಕಲ್ ಕೆಮಿಕಲ್ ಕೆಮಿಕಲ್… ಇವುಗಳ ಕರಾಳ ಸಮ್ಮುಖದಲ್ಲಿ ಯಾವ ಆಹಾರವನ್ನೂ ಧೈರ್ಯವಾಗಿ ಬಾಯಿಗಿಡುವ ಹಾಗಿಲ್ಲ. ಬೆಲ್ಲದಂತ ಬೆಲ್ಲದಲ್ಲೂ ಹತ್ತಾರು ವಿಷಕಾರಿ ರಾಸಾಯನಿಕಗಳು ಸೇರಿಕೊಂಡು ಬೆಲ್ಲ ಸವಿಯುವವರಿಗೆ ಶಾಕ್ ಕೊಟ್ಟಿದೆ. ಆದರೀಗ ಬೆಲ್ಲ ಪ್ರಿಯರಿಗೊಂದು ಸಂತಸದ ಸುದ್ದಿಯಿದೆ. ಸಂಪೂರ್ಣ ನೈಸರ್ಗಿಕವಾಗಿ, ಯಾವುದೇ ರಾಸಾಯನಿಕವಿಲ್ಲದೆ ಶುದ್ಧವಾದ ವಿಷಮುಕ್ತ ಸಾವಯವ ಸಿಹಿ ಬೆಲ್ಲವನ್ನು ಗಡಿ ಜಿಲ್ಲೆ ಬೀದರ್ ನಲ್ಲಿ ತಯಾರಿಸಲಾಗುತ್ತಿದೆ.

ಬೀದರ್ ಜಿಲ್ಲೆ ಚಟ್ನಳ್ಳಿ ಗ್ರಾಮದಲ್ಲಿ ತಯಾರಾಗುತ್ತಿದೆ ಸಾವಯವ ಬೆಲ್ಲ… ಇಲ್ಲಿ ತಯಾರಿಸುವ ವಿಷಮುಕ್ತ ಸಾವಯವ ಬೆಲ್ಲ ಕರ್ನಾಟಕ, ಆಂದ್ರ, ಮಹರಾಷ್ಟ್ರದಲ್ಲಿ ಮಾರಾಟವಾಗುತ್ತಿದೆ. 22 ವರ್ಷದಿಂದ ಇವರು ತಯಾರು ಮಾಡುವ ಸಾವಯವ ಬೆಲ್ಲಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಇವತ್ತಿನ ಯುಗದಲ್ಲಿ ಪ್ರತಿಯೊಂದು ವಸ್ತು ತಯಾರಿಸಿದರೂ ಅದಕ್ಕೆ ಕೆಮಿಕಲ್ ಮಿಶ್ರಣ ಮಾಡಿದರೆ ಮಾತ್ರ ಅದು ಅಂದಚಂದವಾಗಿ ಕಾಣುತ್ತದೆ ಎನ್ನುವಂತಾಗಿದೆ.

ಹೀಗಾಗಿಯೇ ಪ್ರತಿಯೊಂದು ವಸ್ತು ತಯಾರಿಸಲು ಕೆಮಿಕಲ್ ಮಿಶ್ರಣ ಮಾಡುತ್ತಿದ್ದಾರೆ, ಆದರೆ ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದ ರೈತರ ಮಹದೇವ ನಾಗೂರೇ ಅನ್ನೋ ರೈತರ ಸಾವಯವ ಬೆಲ್ಲ ತಯಾರಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ, ಕ್ರಿಮಿನಾಶಕಗಳನ್ನ ಬಳಸಿ ಬೆಳೆದ ಕಬ್ಬು ಇಲ್ಲಿ ತೆಗೆದುಕೊಳ್ಳುವುದಿಲ್ಲ, ಬದಲಾಗಿ ಸಾವಯವ ಗೊಬ್ಬರವನ್ನ ಹಾಕಿ, ನೈಸರ್ಗಿಕ ವಿಧಾನ ಬಳಸಿಕೊಂಡು ಬೆಳೆದ ಕಬ್ಬನ್ನ ಮಾತ್ರ ತೆಗೆದುಕೊಂಡು, ಶುದ್ಧವಾದ ಬೆಲ್ಲವನ್ನ ತಯಾರಿಸುತ್ತಿದ್ದಾರೆ.

ನಶಿಸಿ ಹೋಗುತ್ತಿರುವ ಸಾವಯವ ಪದ್ಧತಿಯನ್ನ ಮತ್ತೆ ಜಾರಿಗೆ ತಂದು, ಭೂಮಿಯ ಫಲವತ್ತತೆಯನ್ನ ಕಾಪಾಡುವುದು ಈ ರೈತನ ಉದ್ದೇಶವಾಗಿದೆ. ಗದ್ದೆಯಿಂದ ಬರುವ ಕಬ್ಬನ್ನ ನುರಿಸಿ, ಅದನ್ನ ಹದವಾಗಿ ಕುದಿಸಿ ಕಲ್ಮಷವನ್ನ ತೆಗೆಯಲು ಕಾಡು ಬೆಂಡೆ ಗಿಡದ ಲೋಳೆಯನ್ನ ಬಳಸಲಾಗುತ್ತಿದೆ. ಇದರಿಂದ ಹೊರ ತೆಗೆಯಲು ಅಡುಗೆ ಎಣ್ಣೆಯನ್ನ ಬಳಸಿ ಅಚ್ಚುಗಳನ್ನ ತಯಾರಿಸಲಾಗುತ್ತದೆ. ದಿನಕ್ಕೆ ಒಟ್ಟು 1 ಟನ್ ಕಬ್ಬನ್ನ ನುರಿಯುವ ಸಾಮರ್ಥ್ಯ ಈ ಘಟಕದ್ದಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನ ಅಗತ್ಯಕ್ಕನುಗುಣವಾಗಿ ಸಾಮರ್ಥ್ಯವನ್ನ ಹೆಚ್ಚಿಸಲು ಕೂಡ ಚಿಂತಿಸಲಾಗುತ್ತಿದ್ದು ಸಾವಯವ ಪದ್ದತಿಯಲ್ಲಿ ತಯಾರಿಸಿದ ಬೆಲ್ಲಕ್ಕೆ ಭಾರಿ ಬೇಡಿಕೆ ಇದೇ ಎನ್ನುತ್ತಾರೆ ಇಲ್ಲಿನ ರೈತ ಮಹದೇವ್ ನಾಗೂರೆ.

ಸಾಮಾನ್ಯವಾಗಿ ಈಗ ತಯಾರಿಸುತ್ತಿರುವ ಬೆಲ್ಲದಲ್ಲಿ ಸಾಕಷ್ಟು ರಾಸಾಯನಿಕಗಳನ್ನ ಬೆರೆಸಿ ಬೆಲ್ಲವನ್ನ ತಯಾರಿಸಲಾಗುತ್ತಿದೆ. ರಸಗೊಬ್ಬರವನ್ನ ಬಳಸಿ, ಕ್ರಿಮಿನಾಶಕ-ಔಷಧಿಗಳನ್ನ ಬಳಸಿ ಬೆಳೆಯುವ ಕಬ್ಬನ್ನ ನುರಿಸಿ ತೆಗೆದ ಹಾಲನ್ನ ಕುದಿಸಲಾಗುತ್ತಿತ್ತು. ಹೀಗೆ ಕುದಿಯುತ್ತಿರುವ ಹಾಲಿನಲ್ಲಿ ಕಲ್ಮಷಗಳನ್ನ ತೆಗೆಯಲು ಸೋಡಿಯಂ ಸಾಕ್ಸಲೈಟ್, ಸೋಡಿಯಂ ಕಾರ್ಬೋನೇಟ್, ಸೋಡಿಯಂ ಬೈಕಾರ್ಬೋನೇಟ್, ನೈಟ್ರೋಸಲ್ಫೈಡ್, ಗಂಧಕ ಹಾಗೂ ಕೋ ಪಾಲಿಮರ್ ಗಳನ್ನ ಬಳಸಲಾಗುತ್ತದೆ.

ಇಂತಹ ವಿಷಕಾರಿ ರಾಸಾಯನಿಕಗಳನ್ನ ಬಳಸುವುದರಿಂದ ಬೆಲ್ಲಕ್ಕೆ ಕೃತಕ ಬಣ್ಣವನ್ನ ನೀಡಲಾಗುತ್ತಿತ್ತು. ಇದರಿಂದ ಬೆಲ್ಲ ತಿನ್ನುವ ವ್ಯಕ್ತಿಗಳಿಗೆ ಸಿಹಿ ರುಚಿ ಪಡೆಯೋ ಜೊತೆಜೊತೆಗೆ ಖಾಯಿಲೆಗಳನ್ನೂ ಉಚಿತವಾಗಿ ಪಡೆಯಬೇಕಾಗಿತ್ತು. ಹೀಗೆ ಯತೇಚ್ಛವಾಗಿ ಸೋಡಿಯಂ ಅನ್ನು ಬಳಸುವ ಕಾರಣ, ಕರುಳಿನಲ್ಲಿ ಅಲ್ಸರ್ ನಂತಹ ರೋಗಗಳು ಕಾಣಿಸಿಕೊಳ್ಳುತ್ತವೆ.

ನಗರ ಪ್ರದೇಶಗಳಲ್ಲೂ ಸಾವಯವ ಪದಾರ್ಥಗಳನ್ನ ಬಳಸುವ ಬಗ್ಗೆ ಈಗಾಗಲೇ ಸಾಕಷ್ಟು ಅರಿವು ಮೂಡಿರುವಾಗಲೇ, ಸಂಪೂರ್ಣವಾಗಿ ಸಾವಯವ ಬೆಲ್ಲ ತಯಾರಿಸುತ್ತಿರುವುದು ಅಂತ ಸಾವಯವ ಪ್ರಿಯರಿಗೆ ಸಾಕಷ್ಟು ಖುಷಿ ತಂದಿದೆ. ಈಗಾಗಲೇ ಸಾವಯವ ಬೆಲ್ಲಕ್ಕೆ ಸಾಕಷ್ಟು ಡಿಮ್ಯಾಂಡ್ ಬಂದಿದ್ದು, ಬೆಂಗಳೂರಿನ ಮಾಲ್ ಗಳು ಸೇರಿದಂತೆ ವಿದೇಶದಿಂದಲೂ ನೂರಕ್ಕೂ ಹೆಚ್ಚು ಟನ್ ಬೆಲ್ಲಕ್ಕೆ ಆರ್ಡರ್ ಬಂದಿರುವುದು ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ ಎನುತ್ತಾರೆ ಬೆಲ್ಲ ತಯಾರು ಮಡುತ್ತಿರುವ ರೈತ ಸಚಿನ್ ನಾಗೂರೆ.

ಪ್ರತಿಯೊಂದು ಆಹಾರ ಪದಾರ್ಥ, ಹಣ್ಣು-ಹಂಪಲು, ತರಕಾರಿ, ಕಾಳುಗಳು ಹೀಗೆ ಪ್ರತಿಯೊಂದು ಈಗ ರಾಸಾಯನಿಕಗಳನ್ನ ಬಳಸಿ ಬೆಳೆಯುವವರ ಸಂಖ್ಯೆಯೇ ಜಾಸ್ತಿಯಾಗಿದೆ. ಅಧಿಕ ಇಳುವರಿ ಪಡೆದು ಲಾಭ ಮಾಡಿಕೊಳ್ಳುವ ಹವಣಿಕೆ ಪ್ರತಿಯೊಬ್ಬರದು, ಅತಿಯಾಸೆಗೆ ಬಿದ್ದಿರುವ ಬಹುತೇಕರು ಸಿಕ್ಕ ರಸಗೊಬ್ಬರವನ್ನ, ಕೀಟನಾಶಕಗಳನ್ನ, ಔಷಧಿಗಳನ್ನ ಬಳಸಲಾಗುತ್ತಿದೆ. ಅದರಂತೆ ಕಬ್ಬು ಬೆಳೆಯಲು ಕೂಡ ಸಾಕಷ್ಟು ಗೊಬ್ಬರವನ್ನ ಬಳಸುತ್ತಾರೆ. ಇದನ್ನ ಸೇವಿಸುವ ಜನರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಅದೆಲ್ಲದರ ಮಧ್ಯೆ ಸರ್ಕಾರವೇ ಇಂತಹ ಸಾವಯವ ಕೃಷಿ ಹಾಗೂ ಉತ್ಪನ್ನ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಅವಶ್ಯಕತೆಯೂ ಇದೆ.

Published On - 2:28 pm, Sat, 3 February 24