ಬೆಳೆ ಇಲ್ಲದೆ ಸಾಲದ ಸುಳಿಗೆ ಸಿಲುಕಿದ್ದ ರೈತ; ಚಿಯಾ ಬೆಳೆ ಕಡೆಗೆ ಮುಖಮಾಡಿದ ಬೀದರ್​ನ ಕೃಷಿಕರು

| Updated By: ವಿವೇಕ ಬಿರಾದಾರ

Updated on: Jan 02, 2023 | 6:30 AM

ಹುಮ್ನಾಬಾದ್ ತಾಲೂಕಿನ ಹಳ್ಳಿಖೆಡ್ ಗ್ರಾಮದ ರೈತ ಬೆಳೆ ಇಲ್ಲದೆ ಪದೆ ಪದೆ ನಷ್ಟಕ್ಕೆ ತುತ್ತಾಗಿ, ಸಾಲದ ಸುಳಿಗೆ ಸಿಲುಕಿದ್ದ ಕೃಷಿಕ ಚಿಯಾ ಬೆಳೆ ಕಡೆಗೆ ಮುಖಮಾಡಿದ್ದು ಲಾಭದ ನಿರಿಕ್ಷೆಯಲ್ಲಿದ್ದಾರೆ.

ಬೆಳೆ ಇಲ್ಲದೆ ಸಾಲದ ಸುಳಿಗೆ ಸಿಲುಕಿದ್ದ ರೈತ; ಚಿಯಾ ಬೆಳೆ ಕಡೆಗೆ ಮುಖಮಾಡಿದ ಬೀದರ್​ನ ಕೃಷಿಕರು
ಬೀದರ್​​ನ ರೈತ ಅಜರ್ ಮಸ್ತಾನ್
Follow us on

ಬೀದರ್​: ಬೀದರ್​ನ ರೈತರೊಬ್ಬರು ಉದ್ದು, ಸೋಯಾ, ಕಬ್ಬು ಬೆಳೆಗೆ ಮಾತ್ರ ಸೀಮಿತವಾಗಿದ್ದ. ಹೀಗಾಗಿ ಪದೆ ಪದೆ ನಷ್ಟಕ್ಕೆ ತುತ್ತಾಗಿ, ಸಾಲದ ಸುಳಿಗೆ ಸಿಲುಕಿದ್ದರು. ಬೆಳೆ ಬದಲಾವಣೆ ಮಾಡಬೇಕೆಂದು ನಿರ್ಧರಿಸಿದ ಆ ರೈತರೋರ್ವರು ಈಗ ಚಿಯಾ ಬೆಳೆ ಕಡೆಗೆ ಮುಖಮಾಡಿದ್ದು ಲಾಭದ ನಿರಿಕ್ಷೆಯಲ್ಲಿದ್ದಾರೆ.

ಗಡಿ ಜಿಲ್ಲೆ ಬೀದರ್​ನ ರೈತರು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿಕೊಂಡು ನಷ್ಟವನ್ನು ಅನುಭವಿಸುತ್ತಿದ್ದರು. ಜೊತೆಗೆ ಪದೆ ಪದೆ ಒಂದೇ ಬೆಳೆಯನ್ನು ಹೊಲದಲ್ಲಿ ನಾಟಿ ಮಾಡಿ ಏಳು ಬೀಳು ಕಂಡಿದ್ದಾರೆ. ಇದರಿಂದ ಬೇಸತ್ತ ರೈತರು ಇದೀಗ ಬಹು ಬೇಡಿಕೆ ಬೆಳೆ ಚಿಯಾ ಧಾನ್ಯ ಬೆಳೆಯುವ ಕಡೆಗೆ ಮುಖ ಮಾಡಿದ್ದಾರೆ.

ಹೌದು…ಆರ್ಥಿಕವಾಗಿ ಸದೃಢರಾಗುವ ದಿಕ್ಕಿನಲ್ಲಿ ರೈತ ವಾಣಿಜ್ಯ ಬೇಸಾಯಕ್ಕೆ ಒಲವು ತೋರಿ, ರಾಗಿ ಬೇಸಾಯದ ಮಾದರಿಯಲ್ಲೇ ಬೆಳೆಯಬಹುದಾದ ಚಿಯಾ ಬೇಸಾಯಕ್ಕೆ ಮುಂದಾಗಿದ್ದಾರೆ. ಔಷಧಿ ಗುಣಲಕ್ಷಣ ಹಾಗೂ ಪೌಷ್ಟಿಕಾಂಶ ಇರುವ ಚಿಯಾ, ದಕ್ಷಿಣ ಅಮೆರಿಕ ದೇಶದಿಂದ ವಿವಿಧ ದೇಶಗಳತ್ತ ವಾಲಿದೆ. ಈ ಬೆಳೆ ಜಾನುವಾರು ಅಥವಾ ಕಾಡುಪ್ರಾಣಿಗಳ ಹಾವಳಿ ಇಲ್ಲದೆ ನೆಮ್ಮದಿಯಿಂದ ರೈತ ಬೆಳೆಯಬಹುದಾಗಿದೆ.

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೆಡ್ ಗ್ರಾಮದ ರೈತ ಅಜರ್ ಮಸ್ತಾನ್ ತನ್ನ ನಾಲ್ಕು ಎಕರೆಯಷ್ಟು ಜಮೀನಿನಲ್ಲಿ ಚಿಯಾ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅಂತರ್ಜಾಲದಲ್ಲಿ ಚಿಯಾ ಬೆಳೆ ಕುರಿತು ಮಾಹಿತಿ ಸಂಗ್ರಹಿಸಿ, ಬಿತ್ತನೆ ಬೀಜ ಖರೀದಿಸಿ ಈ ಬೆಳೆ ಬೆಳೆದು ಸ್ಥಳೀಯ ರೈತರಿಗೆ ಮಾದರಿಯಾಗಿದ್ದಾರೆ.

ಅಜರ್ ಮಸ್ತಾನ್ ಚಿಯಾ ಬೆಳೆಗಾರ ರೈತ:-

ರಾಗಿ ಬೇಸಾಯದ ಮಾದರಿಯಲ್ಲೇ ಚಿಯಾ ಬೆಳೆಯಬಹುದು. ಅತಿಯಾದ ನೀರಿನ ಅವಲಂಬನೆ ಇಲ್ಲದ ಬೆಳೆಯುವ ಬೆಳೆ ಇದಾಗಿದೆ. ಇನ್ನೂ ಚಿಯಾ ಬೆಳೆಗೆ ಅಂತರರಾಷ್ಟ್ರಿಯ ಮಟ್ಟದಲ್ಲಿ ಬಹು ಬೇಡಿಕೆ ಇರುವ ಸಿರಿಧಾನ್ಯವಾಗಿದ್ದು, ಒಣ ಹವಾಮಾನದಲ್ಲಿ, ವಾರಕ್ಕೊಂದು ಬಾರಿ ತುಂತುರು ನೀರಾವರಿ ನೀಡಿದರೆ ಸಾಕು. 90 ರಿಂದ 100 ದಿನದಲ್ಲಿ ಫಸಲು ಪಡೆಯಬಹುದು. ಒಂದು ಎಕರೆ ಪ್ರದೇಶಕ್ಕೆ 3 ರಿಂದ 4 ಸಾವಿರ ವೆಚ್ಚ ಬರಲಿದ್ದು, ಪೈರು ಬೆಳೆಸಿ ನಾಟಿ ಅಥವಾ ಬಿತ್ತನೆ ಬೀಜ ನೇರವಾಗಿ ಸಾಲು ಬಿಟ್ಟು ಬೆಳೆಯಬಹುದು. ಒಮ್ಮೆ ಮಾತ್ರ ರಾಸಾಯನಿಕ ಗೊಬ್ಬರ ನೀಡಿದರೆ ಸಾಕು. ಸ್ಥಳಿಯ ವಾತಾವರಣಕ್ಕೆ ಬೆಳೆಯಬಹುದಾದ ವಾಣಿಜ್ಯ ಬೆಳೆ ಚಿಯಾ ಎಕರೆಗೆ 4 ರಿಂದ 5 ಕ್ವಿಂಟಲ್ ಇಳುವರಿ ಸಿಗಲಿದೆ.

ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 10 ರಿಂದ 15 ಸಾವಿರದವರೆಗೆ ದರವಿದ್ದು ರೈತರು ಇದಿರಿಂದ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಚಿಯಾ ಧಾನ್ಯದಲ್ಲಿ ಅಧಿಕ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಫಾಸ್ಫರಸ್ ಇದ್ದು ಹೀಗಾಗಿ ಮಾರುಕಟ್ಟೆಯಲ್ಲಿ ಇದಕ್ಕೆ ಭಾರೀ ಬೇಡಿಕೆಯಿದೆ. ಈ ಧಾನ್ಯ ಸೇವನೆಯಿಂದ ಮೂಳೆ ಗಟ್ಟಿ, ರಕ್ತದ ಒತ್ತಡ ನಿಯಂತ್ರಣ, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣ, ಸಕ್ಕರೆ ಕಾಯಿಲೆ ನಿಯಂತ್ರಣ, ಉತ್ತಮ ಪಚನಕ್ರಿಯೆಗೆ ಸಹಕಾರಿ ಆಗಲಿದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಬೀದರ್ ಜಿಲ್ಲೆಯಲ್ಲಿ ಚಿಯಾ ಬೆಳೆಯ ಬಗ್ಗೆ ರೈತರಿಗೆ ಅಷ್ಟೇನೂ ಮಾಹಿತಿಯಿಲ್ಲ. ಜೊತೆಗೆ ಮಾರುಕಟ್ಟೆಯ ಬಗ್ಗೆ ಕೂಡ ರೈತರಿಗೆ ಮಾಹಿತಿಯಿಲ್ಲ ಹೀಗಾಗಿ ಕೆಲವೇ ಕೆಲವು ರೈತರು ಈ ಬೆಳೆಯ ಕಡೆಗೆ ಮುಖಮಾಡಿದ್ದೇವೆಂದು ರೈತ ಅಜರ್ ಮಸ್ತಾನ್ ಹೇಳಿದ್ದಾರೆ.

ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿರುವ ಚಿಯಾ ಬೆಳೆ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆಯಲಾಗಿದೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆ ಬೆಳೆಯುವ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಕಳೆದ ಎರಡು ದಶಕದಿಂದ ಕೃಷಿ ಕಾಯಕದಲ್ಲಿ ತೋಡಗಿಕೊಂಡಿರುವ ಇವರು ಜಿಲ್ಲೆ ಹಾಗೂ ರಾಜ್ಯ ರೈತರಿಗೆ ಮಾದರಿಯಾಗಿ ನಿಂತಿದ್ದಾರೆ. ಒಟ್ಟಾರೆ ಸದಾ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ಇವರು ಮಾದರಿಯಾಗಿದ್ದಾರೆ. ಕೆಲಸ ಯಾವುದಾದರೇನು ಶ್ರದ್ದೆಯಿಂದ ಮಾಡಿದರೇ ಇನ್ನೋಬ್ಬರಿಗೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ ಅದನ್ನು ಮಾಡಿ ತೋರಿಸದ್ದಾರೆ ರೈತ ಅಜರ್ ಮಸ್ತಾನ್.

ವರದಿ-ಸುರೇಶ್ ನಾಯಕ್ ಟಿವಿ9 ಬೀದರ್