ಬೀದರ್​ ಶೂಟೌಟ್ ಆರೋಪಿಗಳಿಗಾಗಿ ತೀವ್ರ ಶೋಧ: ದರೋಡೆಕೋರರು ಹೈದರಾಬಾದ್​ನಲ್ಲೇ ಇರುವ ಶಂಕೆ

| Updated By: Ganapathi Sharma

Updated on: Jan 17, 2025 | 1:59 PM

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೀದರ್​ ಶೂಟೌಟ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹೈದರಾಬಾದ್​ನಲ್ಲಿ ಆರೋಪಿಗಳಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಚೆಕ್ ಪೋಸ್ಟ್ ನಿರ್ಮಿಸಿ, ಟೆಕ್ನಿಕಲ್ ಎವಿಡೆನ್ಸ್​ಗಳೊಂದಿಗೆ ಖಾಕಿ ಅಖಾಡಕ್ಕೆ ಧುಮುಕಿದೆ. ಆದರೆ, ಕೃತ್ಯ ನಡೆದು 24 ಗಂಟೆ ಕಳೆದರೂ ಆರೋಪಿಗಳ ಸುಳಿವು ಮಾತ್ರ ಇನ್ನೂ ದೊರೆತಿಲ್ಲ.

ಬೀದರ್​ ಶೂಟೌಟ್ ಆರೋಪಿಗಳಿಗಾಗಿ ತೀವ್ರ ಶೋಧ: ದರೋಡೆಕೋರರು ಹೈದರಾಬಾದ್​ನಲ್ಲೇ ಇರುವ ಶಂಕೆ
ಬೀದರ್​ ಶೂಟೌಟ್ ಆರೋಪಿಗಳಿಗಾಗಿ ತೀವ್ರ ಶೋಧ
Follow us on

ಬೀದರ್, ಜನವರಿ 17: ಗುರುವಾರ ಇಡೀ ಬೀದರ್ ಬೆಚ್ಚಿಬಿದ್ದಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ನ್ಯಾಯಾಲಯದ ಸನಿಹದಲ್ಲೇ ದರೋಡೆಕೋರರು ಅಟ್ಟಹಾಸ ಮೆರೆದಿದ್ದರು. ಎಟಿಎಂಗಳಿಗೆ ಹಣ ತುಂಬುವ ಜವಾಬ್ದಾರಿ ಹೊತ್ತಿದ್ದ ಸಿಎಂಎಸ್ ಕಂಪನಿ ಸಿಬ್ಬಂದಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಬಳಿಕ ಬರೋಬ್ಬರಿ 83 ಲಕ್ಷ ರೂಪಾಯಿ ಹಣದೊಂದಿಗೆ ಹೈದರಾಬಾದ್​ನತ್ತ ಪರಾರಿ ಆಗಿದ್ದರು. ಈ ದುಷ್ಕೃತ್ಯ ನಡೆದು 24 ಗಂಟೆಗಳೇ ಕಳೆದು ಹೋಗಿದೆ. ಆದರೆ ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ.

ಬೀದರ್ ಹಾಗೂ ಮಹಾರಾಷ್ಟ್ರದ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ತೆಲಂಗಾಣ ಪೊಲೀಸರ ಸಹಾಯ ಪಡೆದು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಲಾಡ್ಜ್​​​​​​​​ಗಳಲ್ಲಿ ಇಂಚಿಂಚೂ ಜಾಲಾಡುತ್ತಿದ್ದಾರೆ. ಆರೋಪಿಗಳು ಹೈದರಾಬಾದ್​ನಲ್ಲೇ ಉಳಿದುಕೊಂಡಿರುವ ಶಂಕೆ ಇದ್ದು, 3 ಕಮಿಷನರೇಟ್​ ವ್ಯಾಪ್ತಿಯಲ್ಲಿ ಚೆಕ್​ಪೋಸ್ಟ್ ನಿರ್ಮಿಸಿ ಪೊಲೀಸರು ಹೊಂಚು ಹಾಕಿದ್ದಾರೆ.

ಟ್ರಾವೆಲ್ಸ್ ಸಿಬ್ಬಂದಿ ಮೇಲೂ ಗುಂಡು ಹಾರಿಸಿ ಪರಾರಿಯಾಗಿದ್ದ ದುಷ್ಕರ್ಮಿಗಳು

ಹುಡುಕಾಟ ನಡೆಸುತ್ತಿರುವ ಪೊಲೀಸರ ಕಣ್ಣಿಗೆ ಖದೀಮರು ಕಾಣಿಸಿಕೊಂಡಿದ್ದರು. ದರೋಡೆಕೋರರು ಛತ್ತೀಸ್​ಗಢದ ರಾಯ್​​ಪುರ್​ಗೆ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಈ ವೇಳೆ ಹೈದರಾಬಾದ್​​ನ ಟ್ರಾವೆಲ್ಸ್​ ಕಚೇರಿಗೆ ಬಂದಿದ್ದ ಸಿಬ್ಬಂದಿ, ಅನುಮಾನದಿಂದ ಬ್ಯಾಗ್ ಪರಿಶೀಲಿಸಿದ್ದರು. ಕೂಡಲೇ ಅಲರ್ಟ್ ಆದ ದರೋಡೆಕೋರರು ಟ್ರಾವೆಲ್ಸ್ ಸಿಬ್ಬಂದಿ ಮೇಲೂ ಗುಂಡು ಹಾರಿಸಿ ಕಾಲ್ಕಿತ್ತಿದ್ದಾರೆ.

ಒಂದೆಡೆ, ಶೋಧ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದರೆ, ಇತ್ತ ಬೀದರ್​ನಲ್ಲಿ ಎಟಿಎಂಗೆ ಹಣ ಸಾಗಿಸುವ ವಾಹನದ ಚಾಲಕ ರಾಜಶೇಖರ್ ವಿಚಾರಣೆ ನಡೆಯುತ್ತಿದೆ. ಶೂಟೌಟ್ ನಡೆದ ಜಾಗಕ್ಕೆ ರಾಜಶೇಖರನನ್ನು ಕರೆತಂದು ಸ್ಥಳ ಮಹಜರು ನಡೆಸಲಾಗಿದೆ.

ಕರ್ನಾಟಕವನ್ನೇ ನಡುಗಿಸುತ್ತಿದೆಯಾ ಅದೊಂದು ಗ್ಯಾಂಗ್?

ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಮತ್ತೊಂದು ವಿಚಾರ ಮುನ್ನೆಲೆಗೆ ಬಂದಿದೆ. ಬೀದರ್​ನಲ್ಲಿ ನಡೆದ ದರೋಡೆಗೂ ಬೆಂಗಳೂರಿನಲ್ಲಿ 2023ರ ಅಕ್ಟೋಬರ್​ನಲ್ಲಿ ನಡೆದಿದ್ದ ರಾಬರಿಗೂ ಸಾಮ್ಯತೆ ಕಾಣಿಸಿಕೊಂಡಿದೆ. ಬ್ಯಾಡರಹಳ್ಳಿಯಲ್ಲೂ ಎರಡು ವರ್ಷಗಳ ಹಿಂದೆ ಇಂತಹದ್ದೇ ಕೃತ್ಯ ನಡೆದಿತ್ತು. ಚಿನ್ನಾಭರಣ ಮಾಲೀಕನ ಮೇಲೆ ಗುಂಡು ಹಾರಿಸಿದ್ದ ದುಷ್ಕರ್ಮಿಗಳು 1 ಕೆ.ಜಿ ಚಿನ್ನ ಕದ್ದೊಯ್ದಿದ್ದರು. ಈ ಪ್ರಕರಣದ ಆರೋಪಿಗಳ ಸಣ್ಣ ಸುಳಿವು ಕೂಡ ಈವರೆಗೆ ಸಿಕ್ಕಿಲ್ಲ. ಹೀಗಾಗಿ ಇದೇ ಗ್ಯಾಂಗ್​ನಿಂದಲೇ ಬೀದರ್​ನಲ್ಲಿ ದರೋಡೆ ನಡೆಯಿತೇ ಎಂಬ ಶಂಕೆ ಮೂಡಿದೆ.

ಇದನ್ನೂ ಓದಿ: ಬೆನ್ನಟ್ಟಿದ್ದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿ ಬೀದರ್​ ದರೋಡೆಕೋರರು ಎಸ್ಕೇಪ್

ದರೋಡೆಕೋರ ಕೊಲೆಪಾತಕಿಗಳಿಗೆ ರಾಜ್ಯದ ಪೊಲೀಸರು ಬಲೆ ಬೀಸಿದ್ದಾರೆ. ಕಲಬುರಗಿಯ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಬೀದರ್ ಸಾಥ್ ಕೊಟ್ಟಿದ್ದಾರೆ. ಕಲಬುರಗಿಯ ಟೆಕ್ನಿಕಲ್ ಏಕ್ಸಪರ್ಟ್​ಗಳು ಆರೋಪಿಗಳ ಮೊಬೈಲ್ ಟವರ್, ಸಿಸಿಟಿವಿ ಆಧರಿಸಿ ಆಪರೇಷನ್ ಶುರು ಮಾಡಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಆಗ್ತಿಲ್ಲ: ವಿಜಯೇಂದ್ರ

ಬೀದರ್​ನಲ್ಲಿ ನಡೆದ ದರೋಡೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ದೇಶದಲ್ಲೇ ಇಂತಹ ಘಟನೆಗಳ್ಯಾವುವೂ ಆಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.