ಬೀದರ್ ATM ದರೋಡೆಕೋರರ ಸುಳಿವು ಕೊಟ್ಟವರಿಗೆ ಭಾರೀ ಬಹುಮಾನ ಘೋಷಣೆ

ಬೀದರ್​ ಶೂಟೌಟ್ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಘಟನೆ ನಡೆದು ಒಂದು ತಿಂಗಳು ಕಳೆದರೂ ಆರೋಪಿಗಳು ಇನ್ನೂವರೆಗೂ ಪತ್ತೆಯಾಗಿಲ್ಲ. ಪೊಲೀಸರು ಆರೋಪಿಗಳಿಗಾಗಿ ಎಲ್ಲಕಡೆ ಬಲೆ ಬೀಸಿದ್ದಾರೆ. ಆರೋಪಿಗಳಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಈ ನಡುವೆ ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಬೀದರ್ ATM ದರೋಡೆಕೋರರ ಸುಳಿವು ಕೊಟ್ಟವರಿಗೆ ಭಾರೀ ಬಹುಮಾನ ಘೋಷಣೆ
ಶೂಟೌಟ್​ ಆರೋಪಿಗಳು
Edited By:

Updated on: Feb 15, 2025 | 2:25 PM

ಬೀದರ್​, ಫೆಬ್ರವರಿ 15: ಎಟಿಎಂಗಳಿಗೆ ಹಣ ತುಂಬುವ ಜವಾಬ್ದಾರಿ ಹೊತ್ತಿದ್ದ ಸಿಎಂಎಸ್ ಕಂಪನಿ ಸಿಬ್ಬಂದಿಗೆ ಗುಂಡಿಕ್ಕಿ ಹತ್ಯೆ ಮಾಡಿ, 83 ಲಕ್ಷ ರೂಪಾಯಿ ಹಣದೊಂದಿಗೆ ಹೈದರಾಬಾದ್​ನತ್ತ ಪರಾರಿಯಾಗಿದ್ದ ಆರೋಪಿಗಳು ಇನ್ನೂವರೆಗೂ ಪತ್ತೆಯಾಗಿಲ್ಲ. ಹೀಗಾಗಿ, ಈ ದರೋಡೆಕೋರರ ಸುಳಿವು ಕೊಟ್ಟವರಿಗೆ ಬೀದರ್ ಪೊಲೀಸರು (Bidar Police) ಬಹುಮಾನ ಘೋಷಣೆ ಮಾಡಿದ್ದಾರೆ. ಬಿಹಾರ್ ಮೂಲದ ದರೋಡೆಕೋರರಾದ ಅಮನ್ ಕುಮಾರ್, ಅಲೋಕ್ ಕುಮಾರ್ ಸುಳಿವು ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ದರೋಡೆ ನಡೆದಿದ್ದು ಹೇಗೆ? ಎಲ್ಲಿ? ಯಾವಾಗ?

ಜನವರಿ 16 ರಂದು ಬೀದರ್‌ನಲ್ಲಿ ಹಾಡುಹಗಲೇ ಸಿನಿಮೀಯ ರೀತಿ ದರೋಡೆಯೊಂದು ನಡೆದಿತ್ತು. ಗಡಿ ಜಿಲ್ಲೆಯ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಬೀದರ್​ ನಗರದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ನ್ಯಾಯಾಲಯದ ಸನಿಹದಲ್ಲಿನ ಎಟಿಎಮ್​ನಲ್ಲಿ ಹಣ ಹಾಕಲು ಬಂದಿದ್ದ ಸಿಎಂಎಸ್ ಏಜೆನ್ಸ್ ಸಿಬ್ಬಂದಿಗಳ ಮೇಲೆ ಬೈಕ್​ನಲ್ಲಿ ಬಂದಿದ್ದ ಮುಸುಕುದಾರಿ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದರು. ಎಟಿಎಂಗೆ ಹಣ ಹಾಕುತ್ತಿದ್ದ ಸಿಎಂಎಸ್ ಎಜೆನ್ಸಿಯ ಗಿರಿ ವೆಂಕಟೇಶ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಬೆಳಗ್ಗೆ 10:55 ಸುಮಾರಿಗೆ ಬೈಕ್​ನಲ್ಲಿ ಬಂದ ಮುಸುಕುದಾರಿ ಇಬ್ಬರು ದರೋಡೆಕೋರರ ಗ್ಯಾಂಗ್ ಕಣ್ಣಿಗೆ ಖಾರದ‌ ಪುಡಿ ಎರಚಿ 10 ಸುತ್ತು ಗುಂಡು ಹಾರಿಸಿ 83 ಲಕ್ಷ ರೂ. ಇದ್ದ ಹಣದ ಪೆಟ್ಟಿಗೆ ಕದ್ದೊಯ್ದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಮೃತ ಗಿರಿ ವೆಂಕಟೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಪೊಲೀಸರ ತಂಡ, ಬೆರಳಚ್ಚು ತಜ್ಞರು ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೀದರ್‌ ಜಿಲ್ಲಾ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಹಣದ ಪೆಟ್ಟಿಗೆ ತೆಗೆದುಕೊಂಡು ಹೋದ ಇಬ್ಬರು ಖದೀಮರ ಬೆನ್ನು ಬಿದ್ದಿರುವ ಪೊಲೀಸರು ಆರೋಪಿಗಳ ಚಲನವಲನದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಬೀದರ್​ ಶೂಟೌಟ್ ಆರೋಪಿಗಳಿಗಾಗಿ ತೀವ್ರ ಶೋಧ: ದರೋಡೆಕೋರರು ಹೈದರಾಬಾದ್​ನಲ್ಲೇ ಇರುವ ಶಂಕೆ

ಎಟಿಎಂಗೆ ಹಾಕುವ ಹಣದ ಪೆಟ್ಟಿಗೆ ಜೊತೆ ದರೋಡೆಕಾರರು ಬೀದರ್​ನಿಂದ ನೇರವಾಗಿ ಹೈದರಾಬಾದ್​​ಗೆ ಹೋಗಿದ್ದಾರೆ. ದರೋಡೆಕೋರರು ಹೈದರಾಬಾದ್​ ಅಬ್ಜಲ್ ಗಂಜ್​ನಲ್ಲಿ ಪ್ರತ್ಯಕ್ಷರಾಗಿದ್ದರು. ಹೈದರಾಬಾದ್​ನಿಂದ ಖಾಸಗಿ ಬಸ್​ನಲ್ಲಿ ಛತ್ತಿಸಗಡದ ರಾಯಪುರಕ್ಕೆ ಸತೀಶ್​ಅನ್ನೋವರ ಹೆಸರಿಗೆ ಟಿಕೇಟ್ ಬುಕ್ ಮಾಡಿದ್ದರು. ಅಲ್ಲಿ ಖಾಸಗಿ ಬಸ್​ನ ಸಿಬ್ಬಂದಿ ಲಗೇಜ್ ಚೇಕ್ ಮಾಡುವಾಗ ಅದಕ್ಕೆ ದರೋಡೆಕೋರರು ಅಪೋಸ್ ಮಾಡಿದ್ದಾರೆ, ಆದರೆ ನಾವು ಲಗೇಜ್ ಚೇಕ್ ಮಾಡುತ್ತೇವೆ ಎಂದು ಖಾಸಗಿ ಬಸ್ ಚಾಲಕರು ಒತ್ತಾಯ ಮಾಡಿದ್ದಾರೆ. ತಕ್ಷಣ ದುಷ್ಕರ್ಮಿಗಳು ತಮ್ಮ ಬಳಿ ಇದ್ದ ಪಿಸ್ತೋಲ್​​ನಿಂದ ಗುಂಡು ಹಾರಿಸಿದ್ದಾರೆ. ದುಷ್ಕರ್ಮಿಗಳು ಹಾರಿಸಿದ ಗುಂಡು ಖಾಸಗಿ ಬಸ್ ಮ್ಯಾನೇಜರ್ ಹಾಗೂ ಕ್ಲಿನರ್​ಗೆ ತಗುಲಿದ್ದು ಅವರನ್ನ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿಗಳಿಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Sat, 15 February 25