
ಬೀದರ್, ಆಗಸ್ಟ್ 01: ಬೀದರ (Bidar) ಜಿಲ್ಲೆ ಐತಿಹಾಸಿಕ ಸ್ಮಾರಕಗಳಿಂದ ರಾಷ್ಟ್ರದ ಗಮನ ಸೆಳೆಯುತ್ತಿದೆ. ದೇಶದ ಅತೀ ದೊಡ್ಡ ಕೋಟೆ (Fort), ಆರು ಶತಮಾನದಷ್ಟು ಹಳೇಯದಾದ ಬಹುಮನಿ ಸುಲ್ತಾನರ ಕಾಲದ ರಾಜರ ಘೋರಿಗಳು ಬೀದರ್ನಲ್ಲಿವೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಅವಕಾಶಗಳಿದ್ದರೂ ಪ್ರವಾಸಿಗರನ್ನು ಸೆಳೆಯುವಲ್ಲಿ ಪ್ರವಾಸೋದ್ಯಮ ಇಲಾಖೆ ಮಾತ್ರ ವಿಫಲವಾಗಿದೆ. ಇಲ್ಲಿನ ಐತಿಹಾಸಿಕ ಸ್ಮಾರಕಗಳ ರಕ್ಷಣೆಯೂ ಕೂಡ ಮಾಡುತ್ತಿಲ್ಲವಾದ್ದರಿಂದ ಅವುಗಳು ಕೂಡ ಹಾಳಾಗುತ್ತಿವೆ.
ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಇಲ್ಲಿನ ಕೋಟೆಯನ್ನು ನೋಡಲು ಬರುತ್ತಾರೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಕೋಟೆಯ ಬಗ್ಗೆ ಮಾಹಿತಿ ಕೊಡಲು ಗೈಡ್ ಇಲ್ಲ. ಇದರಿಂದಾಗಿ ಕೋಟೆಯ ಇತಿಹಾಸವನ್ನು ತಿಳಿದುಕೊಳ್ಳದೆ ಮಕ್ಕಳು ವಾಪಸ್ ಹೋಗುತ್ತಿದ್ದಾರೆ.
ಇಲ್ಲಿನ ಅದೆಷ್ಟೋ ಸಾಮಾಧಿಗಳು, ಕೋಟೆಗಳು ಹಾಳಾಗಿ ಹೋಗುತ್ತಿವೆ. ಜೊತೆಗೆ ಐದಾರು ವರ್ಷಗಳ ಹಿಂದೆ ಬೀದರ್ನಲ್ಲಿ ಸಾವಿರ ವರ್ಷದಷ್ಟು ಹಳೆಯದಾದ ಬಹಮನಿ ಸುಲ್ತಾನರು ನಿರ್ಮಿಸಿದ ಜಲಮಾರ್ಗ ಪತ್ತೆಯಾಗಿತ್ತು. ಜಲಮಾರ್ಗದಲ್ಲಿನ ಹೂಳು ಅರ್ಧಕ್ಕೆ ತೆಗೆಸಿ ಬಿಡಲಾಗಿದೆ.
ಪ್ರತಿ ಶನಿವಾರ ಹಾಗೂ ಭಾನುವಾರದಂದು ಬೀದರ್ ಕೋಟೆ, ಮಹಮಹ್ಮದ್ ಗವಾನ್ ಪುರಾತನ ವಿಶ್ವವಿದ್ಯಾಲಯ, ಚೌಬಾದ್ ಹಾಗೂ ಅಷ್ಟೂರಿನಲ್ಲಿರುವ ಬಹುಮನಿ ಸುಲ್ತಾನರ ಸ್ಮಾರಕ, ನರಸಿಂಹ ಝರಣಾ, ಗುರುನಾನಕ ಝೀರಾ, ಬಸವಕಲ್ಯಾಣ ಕೋಟೆ, ಜಲಸಂಗ್ವಿ ಹಾಗೂ ನಾರಾಯಣಪುರದ ಐತಿಹಾಸಿಕ ಶಿವನ ದೇವಾಲಯಗಳನ್ನ ನೋಡಲು ಪ್ರತಿನಿತ್ಯ ಕನಿಷ್ಠ ಎರಡು ಸಾವಿರ ಜನ ಬರುತ್ತಾರೆ. ಇನ್ನುಳಿದ ದಿನಗಳಲ್ಲಿ ಈ ಸಂಖ್ಯೆ 500 ದಾಟುವುದಿಲ್ಲ. ಇದಕ್ಕೆ ಪ್ರಮುಖವಾದ ಕಾರಣವೆಂದರೆ ಜಿಲ್ಲೆಯಲ್ಲಿನ ಐತಿಹಾಸಿಕ ಸ್ಥಳಗಳ ಬಗ್ಗೆ ಪ್ರಚಾರದ ಕೊರತೆ ಇದೆ.
ಜಿಲ್ಲೆಯಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಉತ್ತಮವಾದ ಹೊಟೇಲ್ಗಳಿಲ್ಲ. ಹೀಗಾಗಿ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ. ಆದರೆ ಜಿಲ್ಲಾಡಳಿತ, ಸರಕಾರ ಹಾಗೂ ಜನರಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುತ್ತಿಲ್ಲ.
ಇದನ್ನೂ ಓದಿ: ಬೀದರ್ನಲ್ಲಿ ಪತ್ತೆಯಾದ ನೂರಾರು ವರ್ಷ ಇತಿಹಾಸದ ಅನಂತ ಪದ್ಮನಾಭ ದೇಗುಲಕ್ಕೆ ಬೇಕಿದೆ ರಸ್ತೆ ಸಂಪರ್ಕ
ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಕೆಲ ಹಿರಿಯ ರಾಜಕಾರಣಿಗಳು ಮಾತನಾಡಿ, ಇಲ್ಲಿನ ಐತಿಹಾಸಿಕ ಕೋಟೆಗಳು, ಸ್ಮಾರಕಗಳು ಪುರಾತತ್ವ ಇಲಾಖೆಯ ಅಡಿಯಲ್ಲಿವೆ. ನಾವು ಏನೂ ಮಾಡದಂತ ಸ್ಥಿತಿಯಲ್ಲಿದ್ದೇವೆ ಎಂದು ಹೇಳಿದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ. ಸರ್ಕಾರ ಮನಸ್ಸು ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಯತ್ತ ಗಮನಹರಿಸಬೇಕು. ಜಿಲ್ಲೆಗೆ ಪ್ರವಾಸಿ ಕಾರಿಡಾರ್ ಯೋಜನೆ ಘೋಷಣೆ ಮಾಡಬೇಕು. ಇದರಿಂದ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಿಸುವುದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೀದರ್ ಹೆಸರು ರಾರಾಜಿಸಲಿದೆ.
Published On - 10:04 pm, Fri, 1 August 25