ಬೀದರ್: ಅಂತರ್ಜಲ ಹೆಚ್ಚಿಸಿದ ಐದು ಸಾವಿರಕ್ಕೂ ಹೆಚ್ಚು ಕೃಷಿ ಹೊಂಡಗಳು ರೈತರ ಮೊಗದಲ್ಲಿ ಮಂದಹಾಸ

| Updated By: preethi shettigar

Updated on: Nov 30, 2021 | 7:56 AM

ಕಳೆದ ಐದು ವರ್ಷದಲ್ಲಿ ನಿರ್ಮಿಸಿದ ಎಲ್ಲ ಕೃಷಿ ಹೊಂಡಗಳು ಭರ್ತಿಯಾಗಿದ್ದು, ಕೃಷಿ ಹೊಂಡಗಳು ರೈತರಿಗೆ ವರದಾನವಾಗಿವೆ. ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದ್ದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿದಿದೆ. ಕೃಷಿ ಹೊಂಡ ನಿರ್ಮಿಸಿರುವುದರಿಂದ ನೀರಿನ ಮಟ್ಟ ಸುಧಾರಿಸಿದೆ.

ಬೀದರ್: ಅಂತರ್ಜಲ ಹೆಚ್ಚಿಸಿದ ಐದು ಸಾವಿರಕ್ಕೂ ಹೆಚ್ಚು ಕೃಷಿ ಹೊಂಡಗಳು ರೈತರ ಮೊಗದಲ್ಲಿ ಮಂದಹಾಸ
ಕೃಷಿ ಹೊಂಡ
Follow us on

ಬೀದರ್: ಜಿಲ್ಲೆಯಲ್ಲಿ ಮಳೆ ಕಡಿಮೆ. ಹೀಗಾಗಿಯೇ ಬೆಸಿಗೆ ಆರಂಭವಾದರೆ ಸಾಕು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತದೆ. ಸಾವಿರ ಅಡಿಯಷ್ಟು ಬೋರ್ ವೆಲ್ ಕೊರೆಸಿದರು ಇಲ್ಲಿ ನೀರು ಬರುವುದು ಅಪರೂಪ. ಆದರೆ ಈಗ ಐದಾರು ವರ್ಷದಿಂದ ಜಿಲ್ಲೆಯಲ್ಲಿ ಅಂತರ್ಜಲ ಕ್ರಮೇಣ ವೃದ್ಧಿಸುತ್ತಿದೆ ಸಾವಿರ ಅಡಿಯಷ್ಟು ಬೋರ್ ವೆಲ್ ಕೊರೆಸುವವರಿಗೂ ಐನೂರು ಅಡಿಗೆ ನೀರು ಬರುತ್ತಿದೆ ಅದಕ್ಕೆ ಪ್ರಮುಖವಾದ ಕಾರಣ ಕೃಷಿ ಹೊಂಡಗಳು.

ಬೀದರ್ ಜಿಲ್ಲೆಯಲ್ಲಿ ನದಿಗಳು ಹೆಚ್ಚಾಗಿ ಇಲ್ಲ. ಹೀಗಾಗಿ ಪ್ರತಿ ಬೆಸಿಗೆಯಲ್ಲಿಯೂ ಕೂಡಾ ಇಲ್ಲಿನ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಾರೆ. ಕಿಲೋಮೀಟರ್ ಗಟ್ಟಲೇ ಅಲೆದಾಡಿ ಕುಡಿಯುವ ನೀರು ತರುವ ಸ್ಥಿತಿ ಇಲ್ಲಿನ ಜನರದ್ದು, ಇನ್ನು ಹತ್ತಾರು ವರ್ಷದಿಂದ ಈ ಜಿಲ್ಲೆಯ ಜನರು ಇದೆ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಾರೆ. ಆದರೆ ಕಳೆದ ಐದಾರು ವರ್ಷದಿಂದ ಜಿಲ್ಲೆಯಲ್ಲಿ ಸ್ಪಲ್ಪಮಟ್ಟಿಗೆ ಉತ್ತಮವಾಗಿ ಮಳೆಯಾಗುತ್ತಿದೆ.

ತಗ್ಗು ಪ್ರದೇಶದಲ್ಲಿ ನೀರು ನಿಂತುಕೊಳ್ಳುತ್ತಿದೆ ಜೊತೆಗೆ ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ರೈತರು ತಮ್ಮದೇ ಹೊಲದಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಸ್ವಲ್ಪ ಮಳೆಯಾದರೆ ಸಾಕು ಕೃಷಿ ಹೊಂಡಗಳಲ್ಲಿ ಬರಪುರ ನೀರು ಸಂಗ್ರಹವಾಗುತ್ತಿದೆ. ಇದರ ಪರಿಣಾಮವಾಗಿ ಅಂತರ್ಜಲ ಕೂಡಾ ಇಲ್ಲಿ ವೃದ್ಧಿಯಾಗುತ್ತಿದ್ದು, ಈ ಹಿಂದೆಯಲ್ಲ ಸಾವಿರ ಅಡಿಯಷ್ಟು ಬೋರ್ ವೆಲ್ ಕೊರೆಸಿದರೆ ನೀರು ಬರೋದು ಪಕ್ಕಾ ಇರುತ್ತಿರಲಿಲ್ಲ. ಆದರೀಗ ಐನೂರು ಅಡಿಯಷ್ಟು ಬೋರ್ ವೆಲ್ ಕೊರೆಸಿದರೆ ನೀರು ಬರೋದು ಪಕ್ಕಾ ಆಗಿದೆ.

ಕೃಷಿ ಹೊಂಡದಿಂದ ಹತ್ತಾರು ಪ್ರಯೋಜನಗಳಿವೆ. ರೈತರು ತಮ್ಮ ಹೊಲದಲ್ಲಿ ಯಾವುದೇ ಬೆಳೆಯನ್ನು ಬೆಳೆದರೆ ಆ ಬೆಳೆಗೆ ನೀರಿನ ಸಮಸ್ಯೆಯಾದಾಗ ಇದೆ ಕೃಷಿ ಹೊಂಡದಲ್ಲಿನ ನೀರನ್ನು ಬಳಸಿಕೊಂಡು ಒಣಗಿ ಹೋಗುವ ಬೆಳೆಯನ್ನು ಕಾಪಾಡಬಹುದು. ಜೊತೆಗೆ ಕೃಷಿ ಹೊಂಡದಲ್ಲಿನ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ವೃದ್ಧಿಗೂ ಕೂಡಾ ಕಾರಣವಾಗುತ್ತದೆಂದು ರೈತ ವಿಜಯಕುಮಾರ್ ಜನವಾಡ ಹೇಳಿದ್ದಾರೆ.

ಕಳೆದ ಐದು ವರ್ಷದಲ್ಲಿ ನಿರ್ಮಿಸಿದ ಎಲ್ಲ ಕೃಷಿ ಹೊಂಡಗಳು ಭರ್ತಿಯಾಗಿದ್ದು, ಕೃಷಿ ಹೊಂಡಗಳು ರೈತರಿಗೆ ವರದಾನವಾಗಿವೆ. ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದ್ದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿದಿದೆ. ಕೃಷಿ ಹೊಂಡ ನಿರ್ಮಿಸಿರುವುದರಿಂದ ನೀರಿನ ಮಟ್ಟ ಸುಧಾರಿಸಿದೆ. ವಿಫಲಗೊಂಡಿದ್ದ ಕೊಳವೆಬಾವಿಗಳಲ್ಲಿ ನೀರು ಬಂದಿದೆ. ಮಣ್ಣಿನ ಸಂರಕ್ಷಣೆ ಆಗಿ, ಜಮೀನಿನ ಫಲವತ್ತತೆ ಹೆಚ್ಚಿದೆ. ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೂಪಗೊಂಡಿರುವ ಕೃಷಿ ಹೊಂಡಗಳು ಬರದಿಂದ ಹೈರಾಣಾಗುವ ಜಿಲ್ಲೆಯ ರೈತರಿಗೆ ಆಸರೆ ಆಗುತ್ತವೆ. ಈ ಯೋಜನೆಯಿಂದ ಒಣ ಮತ್ತು ಮಳೆಯಾಶ್ರಿತ ಪ್ರದೇಶದ ರೈತರಿಗೆ ಅನುಕೂಲವಾಗಿದೆ.

ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಇದು ವರದಾನ. ಇದರಿಂದ ಆದಾಯವೂ ವೃದ್ಧಿಯಾಗುತ್ತದೆ. ಜಮೀನಿನಿಂದ ಹಳ್ಳಕ್ಕೆ ಹರಿದು ಹೋಗುವ ಮಳೆ ನೀರನ್ನು ಕೃಷಿ ಹೊಂಡಗಳಲ್ಲಿ ಸಂಗ್ರಹಿಸಿ, ಬೆಳೆಗಳು ಒಣಗುವ ಹಂತದಲ್ಲಿ ನೀರುಣಿಸಿ ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಇನ್ನೂ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡ ರೈತರಿಗೆ ಪೆಟ್ರೋಲ್ ಚಾಲಿತ ನೀರು ಎತ್ತುವ ಯಂತ್ರ, ಅದಕ್ಕೆ ಬೇಕಾದ ಪೈಪ್​ಗಳನ್ನೂ ಕೂಡಾ ಶೇಕಡಾ 90 ರ ಸಬ್ಸಿಡಿಯಲ್ಲಿ ಕೊಡಲಾಗುತ್ತದೆ. ನಾಲ್ಕೈದು ರೈತರು ಒಟ್ಟಾಗಿ ಬಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಭೇಟಿಯಾದರೇ, ನಾಲ್ಕು ಜನ ರೈತರಿಗೆ ಉಚಿತವಾಗಿ ನೀರು ಎತ್ತುವ ಯಂತ್ರವನ್ನು ಕೊಡಲಾಗುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿ ತಾರಾಮಣಿ ಹೇಳಿದ್ದಾರೆ.

ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಹೊಂಡಗಳನ್ನು ಇಲ್ಲಿ ರೈತರ ಹೊಲಗಳಲ್ಲಿ ನಿರ್ಮಾಣಮಾಡಿ ಕೊಡಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ ಕೃಷಿ ಹೊಂಡಗಳು ರೈತರ ಪಾಲಿನ ಕಾಮದೇನುವಂತಾಗಿದೆ. ನೀರಿಲ್ಲದೆ ಬೆಳೆ ಒಣಗುವ ಹಂತಕ್ಕೆ ಬಂದಾಗ ಕೃಷಿ ಹೊಂಡಗಳು ರೈತರ ಕೈ ಹಿಡಿಯುತ್ತವೆ. ಜೊತೆಗೆ ಇದರಿಂದ ನೀರಿನ ಅಂತರ್ಜಲ ಮಟ್ಟವೂ ಕೂಡ ಜಾಸ್ತಿಯಾಗಿ ನೀರಿಲ್ಲದೆ ಬತ್ತಿಹೋಗಿರುವ ಅದೆಷ್ಟೋ ಬೋರ್ ವೆಲ್​ಗಳಲ್ಲಿ ಮತ್ತೆ ನೀರು ಬರುವಂತೆ ಮಾಡಿದೆ. ಇದು ಸಹಜವಾಗಿಯೇ ರೈತರ ಮೊಗದಲ್ಲಿ ನಗು ಮೂಡಿಸಿದೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ:

ಕೃಷಿ ಕಾನೂನು ಹಿಂಪಡೆಯುವ ಮಸೂದೆ ಮಂಡನೆಗೆ ಅಡ್ಡಿ: ವಿರೋಧ ಪಕ್ಷಗಳ ಉದ್ದೇಶ ಪ್ರಶ್ನಿಸಿದ ಸಚಿವ ಪ್ರಲ್ಹಾದ್ ಜೋಶಿ

ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಸರ್ವನಾಶವಾದರೂ ಕೃಷಿ ಅಧಿಕಾರಿಗಳು ರೈತರ ಬವಣೆ ವಿಚಾರಿಸುವ ಗೋಜಿಗೆ ಹೋಗಿಲ್ಲ