ಕೃಷಿ ಕಾನೂನು ಹಿಂಪಡೆಯುವ ಮಸೂದೆ ಮಂಡನೆಗೆ ಅಡ್ಡಿ: ವಿರೋಧ ಪಕ್ಷಗಳ ಉದ್ದೇಶ ಪ್ರಶ್ನಿಸಿದ ಸಚಿವ ಪ್ರಲ್ಹಾದ್ ಜೋಶಿ

ಮಸೂದೆಗೆ ಅಂಗೀಕಾರ ದೊರೆತ ನಂತರ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವರು ನಿಮ್ಮ ಉದ್ದೇಶವೇನು ಎಂದು ಪ್ರತಿಪಕ್ಷಗಳನ್ನು ಪ್ರಶ್ನಿಸಿದರು.

ಕೃಷಿ ಕಾನೂನು ಹಿಂಪಡೆಯುವ ಮಸೂದೆ ಮಂಡನೆಗೆ ಅಡ್ಡಿ: ವಿರೋಧ ಪಕ್ಷಗಳ ಉದ್ದೇಶ ಪ್ರಶ್ನಿಸಿದ ಸಚಿವ ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ದೆಹಲಿ: ಸದನದಲ್ಲಿ ಸೋಮವಾರ ಮಂಡಿಸಲಾದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮಸೂದೆಯನ್ನು ವಿರೋಧಿಸಿದ ಪ್ರತಿಪಕ್ಷಗಳ ಉದ್ದೇಶವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು. ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಲೋಕಸಭೆಯು ಈ ಮಸೂದೆಗಳಿಗೆ ಅಂಗೀಕಾರ ನೀಡಿತು. ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಜೊತೆಗೆ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲದ ಖಾತ್ರಿ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದವು. ಮಸೂದೆಗೆ ಅಂಗೀಕಾರ ದೊರೆತ ನಂತರ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವರು ನಿಮ್ಮ ಉದ್ದೇಶವೇನು ಎಂದು ಪ್ರತಿಪಕ್ಷಗಳನ್ನು ಪ್ರಶ್ನಿಸಿದರು. ಎರಡೂ ಸದನಗಳಲ್ಲಿ ಇಂದೇ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುವ ಉದ್ದೇಶ ಸರ್ಕಾರಕ್ಕೆ ಇತ್ತು. ಆದರೆ ಪ್ರತಿಪಕ್ಷಗಳ ಸದಸ್ಯರ ನಡವಳಿಕೆಯು ಸರಿಯಿರಲಿಲ್ಲ ಎಂದು ಹೇಳಿದರು.

ಸದನದ ಕಲಾಪ ಮುಗಿದ ನಂತರ ಮಾತನಾಡಿದ ಅವರು, ಕಳೆದ ವರ್ಷ ಆಗಸ್ಟ್ 11ರಂದು ಅಂದರೆ ಮುಂಗಾರು ಅಧಿವೇಶನದ ಕೊನೆಯ ದಿನ ಅವರು (ವಿರೋಧ ಪಕ್ಷಗಳು) ಹೇಗೆ ವರ್ತಿಸಿದರು ಎಂಬುದು ಇಡೀ ದೇಶಕ್ಕೆ ಗೊತ್ತಾಗಿದೆ. ಏಕೆಂದರೆ ಅವರೇ ತಮ್ಮ ನಡವಳಿಕೆಗಳ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಕಳೆದ ವರ್ಷ ಅಧಿವೇಶನದ ಕೊನೆಯ ದಿನವಾಗಿದ್ದರಿಂದ ನಾವು ಶಿಸ್ತುಕ್ರಮ ಜರುಗಿಸಲು ಸಾಧ್ಯವಾಗಲಿಲ್ಲ. ಆದರೆ ಇದು ಚಳಿಗಾಲದ ಅಧಿವೇಶನದ ಮೊದಲ ದಿನವಾದ ಕಾರಣ ನಾವು ಕ್ರಮ ತೆಗೆದುಕೊಳ್ಳಬೇಕಾಯಿತು. ತಮ್ಮ ವರ್ತನೆಗೆ ಕ್ಷಮೆಯಾಚಿಸುವಂತೆ ನಾವು ಕೇಳಿದೆವು. ಆದರೆ, ನಾವು ಕ್ಷಮೆಕೇಳುವುದಿಲ್ಲ ಎಂದು ಅವರು ಸಾರಾಸಗಟಾಗಿ ತಿರಸ್ಕರಿಸಿದರು. ಹೀಗಾಗಿ ಇಂದು ಇಂಥ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. ಸಭಾಕ್ಷರಿಗೆ ಮತ್ತು ಸದನಕ್ಕೆ ಕ್ಷಮೆ ಕೇಳಲು ಅವರು ಸಮ್ಮತಿಸಿದರೆ ಸರ್ಕಾರವು ಈ ವಿಚಾರವನ್ನು ಮುಕ್ತವಾಗಿ ಪರಿಶೀಲಿಸಲಿದೆ ಎಂದು ಹೇಳಿದರು.

ಕೃಷಿ ಕಾನೂನು ಹಿಂಪಡೆಯುವ ಮಸೂದೆಯನ್ನು ಸದನದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಮಂಡಿಸಿದರು. ವಿರೋಧ ಪಕ್ಷಗಳ ಸದಸ್ಯರು ಈ ವೇಳೆ ಗದ್ದಲ ಎಬ್ಬಿಸಿದರು. ಚರ್ಚೆಗೆ ಪರಿಸ್ಥಿತಿ ಪೂರಕವಾಗಿಲ್ಲ ಎಂದು ಅಭಿಪ್ರಾಯಪಟ್ಟ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಸೂದೆಗಳಿಗೆ ಬಹುಮತವಿದೆ ಎಂದು ಘೋಷಿಸಿ ಅಂಗೀಕರಿಸಿದರು. ಮಸೂದೆಗಳಿಗೆ ಅಂಗೀಕಾರ ದೊರೆತ ನಂತರ ಲೋಕಸಭೆ ಕಲಾಪವನ್ನು ಸ್ಪೀಕರ್ ಓಂ ಬಿರ್ಲಾ ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಇದನ್ನೂ ಓದಿ: Farm Laws Repeal Bill 2021 ಕೃಷಿ ಕಾನೂನುಗಳ ರದ್ದತಿ ಮಸೂದೆ 2021ಗೆ ರಾಜ್ಯಸಭೆ ಅಂಗೀಕಾರ ಇದನ್ನೂ ಓದಿ: Farm Laws Repeal Bill 2021 ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆ ಕೃಷಿ ಕಾನೂನುಗಳ ರದ್ದತಿ ಮಸೂದೆ 2021ಗೆ ಅಂಗೀಕಾರ

Published On - 11:40 pm, Mon, 29 November 21

Click on your DTH Provider to Add TV9 Kannada