ಮೈಕೊರೆಯುವ ಥಂಡಿಗೆ ಆ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದು ಮನೆಯಿಂದ ಹೊರಬರದಷ್ಟೂ ಚಳಿ ಕಾಡತೊಡಗಿದೆ. ಕಳೆದೊಂದು ವಾರದಿಂದ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು ಹಿಂದಿನ ವರ್ಷಕ್ಕೆ ಹೋಲಿದರೆ ಈ ವರ್ಷದ ಚಳಿ ಹೆಚ್ಚಿದೆ. ಬೆಳಗ್ಗೆ ಮಕ್ಕಳು, ವಯೋವೃದ್ಧರು ಸ್ವೆಟ್ಟರ್ ಇಲ್ಲದೆ ಹೋಗಲಾಗುತ್ತಿಲ್ಲ. ಜನರೂ ಟೋಪಿ, ಸ್ವೆಟ್ಟರ್, ಜರ್ಕಿನ್ ಹಾಕಿಕೊಂಡೇ ಮನೆಯಿಂದ ಹೊರ ಬರುತ್ತಿದ್ದಾರೆ.
ರಾಜ್ಯದಲ್ಲೇ ಅತೀ ಚಳಿ ಪ್ರಮಾಣ ಗಡಿ ಜಿಲ್ಲೆ ಬೀದರ್ (Bidar) ನಲ್ಲಿ ದಾಖಲಾಗಿದೆ. ಮೂರು ದಿನದಿಂದ 5 ರಿಂದ 6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇನ್ನೊಂದು ವಾರದಲ್ಲಿ ತಾಪಮಾನ ಇನ್ನೂ ಕುಸಿಯುವ ಸಾಧ್ಯತೆಯಿದೆ. ಚಳಿಗೆ ಬೆಳಗ್ಗೆ ಹೊತ್ತು ಹತ್ತಾದರೂ ಜನ ಹೊರಬರುತ್ತಿಲ್ಲ. ಮಕ್ಕಳು, ವಯೋವೃದ್ಧರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಶೀತಗಾಳಿ ಮಿಶ್ರಿತ ವಾತಾವರಣದಿಂದ ಜನ ಹೈರಾಣುಗೊಂಡಿದ್ದಾರೆ. ಇನ್ನೂ ಕೆಲವು ದಿನ ಹೀಗೆಯೇ ಇರಲಿದೆಯಂತೆ ಮೈಕೊರೆಯುವ ಚಳಿ.
ಹೌದು ಗಡೀ ಜಿಲ್ಲೆ ಬೀದರ್ ನಲ್ಲೀಗ ಮೈಕೊರೆಯುವ ಚಳಿ ಶುರುವಾಗಿದೆ. ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ ಜಿಲ್ಲೆಯ ಜನರ ಜೀವನ ಶೈಲಿಯನ್ನೇ ಈಗ ಬದಲಾಯಿಸಿದ್ದು ದಿನವಿಡೀ ಚಳಿಯ ಅನುಭವ ಹೆಚ್ಚಾಗಿದೆ. ಬೆಳಗ್ಗೆ 7 ಗಂಟೆಯಾದರೂ ಬೆಳಕಾಗುತ್ತಿಲ್ಲ. ಸಂಜೆ 5:30 ಗಂಟೆಗೆಲ್ಲಾ ಕತ್ತಲು ಆವರಿಸುತ್ತಿದೆ. ಕನಿಷ್ಟ ತಾಪಮಾನ 5 ರಿಂದ 6 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿದಿರುತ್ತದೆ. ಅತಿಯಾದ ಮೈ ಕೊರೆಯುವ ವಾತಾವರಣ ಪ್ರವಾಸಿಗರಿಗೆ ಮೋಜು ಮಸ್ತಿಯ ಸುಖಾನುಭವ ನೀಡಿದರೆ, ಕೆಲಸಕ್ಕೆ ತೆರಳುವ ಸ್ಥಳೀಯರಿಗೆ, ವ್ಯಾಪಾರಿಗಳಿಗೆ ಅನಾನುಕೂಲವಾಗಿದೆ.
ಚುಮು ಚುಮು ಚಳಿಗೆ ಮನೆ ಬಿಟ್ಟು ಹೊರ ಬಾರದ ನಗರ ಪ್ರದೇಶದ ಜನ ಚಳಿಗೆ 9 ಗಂಟೆಯ ಒಳಗಡೆ ಗೂಡು ಸೇರುತ್ತಿದ್ದಾರೆ. ದಟ್ಟ ಇಬ್ಬನಿಯಿಂದಾಗಿ ಬೈಕ್ ಸವಾರರು, ವಿದ್ಯಾರ್ಥಿಗಳು ಸೇರಿದಂತೆ ಜನರು ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿ ಜಾಸ್ತಿಯಿದ್ದು ಕೂಲಿ ಮಾಡಿಕೊಂಡು ಬದುಕು ಕಟ್ಟಿಕೊಂಡವರಿಗೆ ಈ ಚಳಿಯಿಂದ ಸಮಸ್ಯೆಯಾಗುತ್ತಿದೆಂದು ಕಾರ್ಮಿಕ ಮಹಿಳೆಯೊಬ್ಬರು ಹೇಳುತ್ತಾರೆ.
ಚಳಿಗೆ ಜನರು ರಸ್ತೆ ಬದಿ ಬೆಂಕಿ ಕಾಯಿಸುತ್ತ ಕುಳಿತಿರುವ ದೃಶ್ಯ ಈಗ ಕಂಡುಬರುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಜನರು ಈ ಚಳಿಗೆ ನಡುಗುತ್ತಿದ್ದು, ಚಳಿ ಕಡಿಮೆ ಮಾಡಿಕೊಳ್ಳಲು ರಸ್ತೆ ಬದಿ ಬೆಂಕಿ ಕಾಯಿಸುತ್ತಿದ್ದಾರೆ. ಮಳೆರಾಯನ ಶಾಪದಿಂದ ಮಳೆಯಿಲ್ಲದೆ ಕೊರಗುತ್ತಿರುವ ಜನತೆ ಕಳೆದ ಒಂದು ವಾರದಿಂದ ಚಳಿಯಿಂದ ನಡುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಗಾಗ ಬೀಳುವ ದಟ್ಟವಾದ ಇಬ್ಬನಿಯಿಂದಲೂ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಚಳಿಗಾಲ ಆರಂಭದಲ್ಲಿ ಅಷ್ಟೇನು ಚಳಿ ಕಂಡು ಬರಲಿಲ್ಲವಾದರೂ, ಇದೀಗ ಜಿಲ್ಲೆಯ ವಿವಿಧೆಡೆ ಕನಿಷ್ಠ ತಾಪಮಾನಕ್ಕೆ ಇಳಿಯುತ್ತಿದೆ. ಈ ವರ್ಷ ಜಿಲ್ಲೆಯಲ್ಲಿ ಭರಪೂರ ಮಳೆಯಾಗಿದ್ದು ನದಿ, ಜಲಾಶಯ, ಹಳ್ಳ- ಕೊಳ್ಳಗಳಲ್ಲಿ ನೀರು ತುಂಬಿತುಳುಕಿತ್ತು. ಹೀಗಾಗಿ ಈ ವರ್ಷ ಮೈ ನಡುಗಿಸುವ ಚಳಿ ದಾಖಲಾಗುತ್ತಿರುವುದು ವಿಶೇಷವಾಗಿದೆ.
ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಕನಿಷ್ಠ ಉಷ್ಣಾಂಶವು 12 ಡಿಗ್ರಿ ದಾಖಲಾಗುತ್ತಿತ್ತು. ಭಾನುವಾರ ಏಕಾಏಕಿ 5.5 ಡಿಗ್ರಿ ಸೆಲ್ಷಿಯಸ್ಗೆ ಕುಸಿದಿದ್ದು, 2015ರ ನಂತರ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಎಂದು ದಾಖಲೆ ಬರೆಯಿತು. 2022ರಲ್ಲಿ 5.7, 2021ರಲ್ಲಿ 8.6 ಡಿಗ್ರಿ ಸೆಲ್ಷಿಯಸ್ ಕನಿಷ್ಠ ಉಷ್ಠಾಂಶ ದಾಖಲಾಗಿತ್ತು. 2015ರ ಜನವರಿ 10ರಂದು ದಾಖಲಾಗಿದ್ದ 5.8 ಡಿಗ್ರಿ ಸೆಲ್ಷಿಯಸ್ ಇತ್ತೀಚಿನ ದಿನಗಳಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಎನಿಸಿತ್ತು. ಬೀದರ್ ಜಿಲ್ಲೆಯಲ್ಲಿ ಜನವರಿ 25ರವರೆಗೂ ಕನಿಷ್ಠ ಉಷ್ಠಾಂಶ 12ರಿಂದ 14 ಡಿಗ್ರಿ ಆಸುಪಾಸಿನಲ್ಲಿಯೇ ಇರಬಹುದು. ಚಳಿ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ ಹೇಳಿದ್ದಾರೆ.
ಚಳಿಗಾಲದ ಎಫೆಕ್ಟ್ ಬೀದರ್ ನಗರ ಸಂಪೂರ್ಣ ಬದಲಾಗಿ ಹೋಗಿದ್ದು ನಸುಕಿನ ಜಾವ ಜನರು ಓಡಾಡದಂತಾಗಿದೆ. ಗಡೀ ಜಿಲ್ಲೆ ಜನರಿಗೆ ಕೆಲವೂ ಸಲ ಊಟಿಯಲ್ಲಿನ ಮಂಜಿನ ಅನುಭವ ಆಗುತ್ತಿದ್ದು ನಗರದ ಪ್ರಕೃತಿ ಸೌಂದರ್ಯಕ್ಕೆ ಇಲ್ಲಿನ ಜನರೇ ಫಿದಾ ಆಗಿ ಹೋಗಿದ್ದಾರೆ. ಇನ್ನೂ ಈ ಮೈಕೊರೆಯುವ ಚಳಿಯಲ್ಲಿ ಬೆಳಗಿನ ವಾತಾವರಣದಲ್ಲಿ ವಾಕಿಂಗ್ ಹೋಗುವವರು ತುಂಬಾನೆ ಖುಷಿ ಪಡುತ್ತಿದ್ರೆ, ಮಂಜಿನ ನಡುವೆ ಮಕ್ಕಳು ಸೈಕಲ್ ಮೇಲೆ ಹೋಗುತ್ತಿದ್ದರೆ ಅದರ ಮಜವೇ ಬ್ಯಾರೆ ಅನ್ನುತ್ತಿದ್ದಾರೆ ಇಲ್ಲಿನ ಜನರು.
ವರದಿ: ಸುರೇಶ್ ನಾಯಕ್, ಟಿವಿ9, ಬೀದರ್