ಬೀದರ್, ಸೆ.15: ಒಂದು ಲಕ್ಷ ಲಂಚ (bribe) ಸ್ವೀಕರಿಸುವಾಗ ಬೀದರ್ ಜಿಲ್ಲೆಯ ಬಸವಕಲ್ಯಾಣ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಉಪ ತಹಶೀಲ್ದಾರ್ ಶಿವಾನಂದ ಬಿರಾದಾರ್. ಇವರು ಕೊಹಿನೂರು ನಾಡಕಚೇರಿ ಉಪ ತಹಶೀಲ್ದಾರ್ ಆಗಿದ್ದು, ಮುಚ್ಚಿಳಮ ಗ್ರಾಮದ ರೈತ ಸುಧೀರ್ ಎಂಬುವವರು ಜಮೀನು ಪಹಣಿ ಕೊಡುವಂತೆ ಕೇಳಿದ್ದರು. ಈ ಹಿನ್ನಲೆ ಉಪ ತಹಶೀಲ್ದಾರ್ 1 ಲಕ್ಷ ರೂಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಲೋಕಾಯುಕ್ತ DySP ಎನ್ಎಂ ಓಲೇಕಾರ್ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದ್ದು, ಲಂಚ ಸ್ವೀಕರಿಸುವಾಗ ಶಿವಾನಂದ ಅವರು ಸಿಕ್ಕಿಬಿದ್ದಿದ್ದಾರೆ.
ಇನ್ನು ನಿನ್ನೆಯಷ್ಟೇ ತುಮಕೂರಿನಲ್ಲಿ ಸಹಾಯಕ ಕಮಿಷನರ್ ತಬಸ್ಸುಮ್ ಜಹೇರಾ ಮತ್ತು ಉಪ ತಹಶೀಲ್ದಾರ್ ಶಬ್ಬೀರ್ ಅಹ್ಮದ್ ಅವರಿಬ್ಬರನ್ನು ಲಂಚ ಸ್ವೀಕರಿಸಿದ ಆರೋಪದಲ್ಲಿ ವಿಶೇಷ ಲೋಕಾಯುಕ್ತ ನ್ಯಾಯಾಲಯವು ದೋಷಿ ಎಂದು ಘೋಷಿಸಿತ್ತು. ಜೊತೆಗೆ ಇಬ್ಬರಿಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತಬಸ್ಸುಮ್ ಜಹೇರಾ ಪ್ರಸ್ತುತ ಕೆಐಎಡಿಬಿಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅಹ್ಮದ್ ತುಮಕೂರು ಜಿಲ್ಲೆಯ ಬೆಳ್ಳಾವಿಯಲ್ಲಿ ಉಪ ತಹಶೀಲ್ದಾರ್ ಆಗಿದ್ದಾರೆ.
ಇನ್ನು ಇವರು ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಆವರಗೆರೆ ನಿವಾಸಿ ವಿ.ಟಿ. ಜಯರಾಂ ಅವರು, ತಮ್ಮ ತಂದೆಗೆ ಸೇರಿದ್ದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ದೂರು ಸಲ್ಲಿಸಿದ್ದರು. ತಮ್ಮ ತಂದೆಯ ಹೆಸರಿಗೆ ಜಮೀನಿನ ದಾಖಲೆಗಳನ್ನು ಮರು ವರ್ಗಾಯಿಸಿ, ಮಾಲೀಕತ್ವವನ್ನು ಮರುಸ್ಥಾಪಿಸುವಂತೆ ಕೋರಿ ಅಂದಿನ ಸಹಾಯಕ ಆಯುಕ್ತರಾದ ತಬಸ್ಸುಮ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಎಸಿ ತನ್ನ ಕಚೇರಿಯ ಸಿಬ್ಬಂದಿ ಶಬ್ಬೀರ್ ಅವರನ್ನು ಭೇಟಿಯಾಗುವಂತೆ ಕೇಳಿದ್ದರು. ಈ ಮಧ್ಯೆ ಕೆಲಸ ಮಾಡಿಕೊಡಲು 35,000 ರೂ. ಲಂಚ ಬೇಡಿಕೆ ಮುಂದಿಟ್ಟಿದ್ದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ