ಲಂಚಕ್ಕೆ ಬೇಡಿಕೆ, ದಳ್ಳಾಳಿಗಳ ಹಾವಳಿ: ಬೆಂಗಳೂರಿನ ಹಲವೆಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ
ಸಾರ್ವಜನಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆ ಯಶವಂತಪುರ, ಜಯನಗರ, ಇಂದಿರಾನಗರ, ಜ್ಞಾನಭಾರತಿ ಕಚೇರಿ ಸೇರಿದಂತೆ ನಗರದ ಎಲ್ಲಾ ಆರ್‌ಟಿಒ ಕಚೇರಿಗಳ ಮೇಲೆ ಬುಧವಾರ ಲೋಕಾಯುಕ್ತ ದಾಳಿ ಮಾಡಲಾಗಿದೆ. ನಗರದ ಎಲ್ಲಾ ಆರ್‌ಟಿಒ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಕಡತ ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 13: ಯಶವಂತಪುರ, ಜಯನಗರ, ಇಂದಿರಾನಗರ, ಜ್ಞಾನಭಾರತಿ ಕಚೇರಿ ಸೇರಿದಂತೆ ನಗರದ ಎಲ್ಲಾ ಆರ್‌ಟಿಒ ಕಚೇರಿಗಳ ಮೇಲೆ ಬುಧವಾರ ಲೋಕಾಯುಕ್ತ ದಾಳಿ (Lokayukta raids) ಮಾಡಲಾಗಿದೆ. ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ನೇತೃತ್ವದಲ್ಲಿ ದಾಳಿ ಮಾಡಿದ್ದು, ಎಲ್ಲಾ ಆರ್‌ಟಿಒ ಕಚೇರಿಗಳಲ್ಲಿ ಕಡತ ಪರಿಶೀಲಿಸಿದ್ದಾರೆ. ಜಯನಗರದ RTO ಕಚೇರಿಗೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಭೇಟಿ ನೀಡಿದ್ದು, ಆರ್‌ಟಿಒ ಸುರೇಶ್ ಕಚೇರಿಯಲ್ಲಿ ಕುಳಿತು ದಾಳಿಯ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ಸಾರ್ವಜನಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಪವನ್ ನಜೀರ್ ನೇತೃತ್ವದಲ್ಲಿ ದೇವನಹಳ್ಳಿ ಆರ್‌ಟಿಒ ಕಛೇರಿ ಮೇಲೆ ದಾಳಿ ಮಾಡಿದ್ದು, ಆರ್‌ಟಿಒ ಶ್ರೀನಿವಾಸ್ ಹಾಗೂ ಅಧಿಕಾರಿಗಳನ್ನ ಕೂರಿಸಿಕೊಂಡು ಸತತ 2 ಗಂಟೆಗೂ ಅಧಿಕ ಕಾಲದಿಂದ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.
ಕೆಆರ್ಪುರ ಮತ್ತು ಇಂದಿರಾನಗರ ಆರ್‌ಟಿಒ ಕಚೇರಿಗಳ ಮೇಲೆ ಸಹ ಲೋಕಾ ದಾಳಿ ಮಾಡಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ಸುದೇಶ್ ರಾಜು ಪರದೇಶಿ, ಡಿವೈಎಸ್ಪಿ ಗೋಪಾಲ್ ಜೋಗಿನಿ ನೇತೃತ್ವದಲಿ ದಾಳಿ ಮಾಡಿದ್ದು, ಅಧಿಕಾರಿಗಳಿಂದ ಲಂಚಕ್ಕೆ ಬೇಡಿಕೆ, ದಳ್ಳಾಳಿಗಳ ಹಾವಳಿ ಬಗ್ಗೆ ದೂರುಗಳು ನೀಡಲಾಗಿದೆ. ಹಾಗಾಗಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 13 ಕಡೆಗಳಲ್ಲಿ ಪರಿಶೀಲನೆ: ಡಿಜಿಪಿ ಪ್ರಶಾಂತ್ ಕುಮಾರ್ ಠಾಕೋರ್
ಲೋಕಾಯುಕ್ತ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೋರ್ ಮಾತನಾಡಿ, ಬೆಂಗಳೂರು ನಗರದಲ್ಲಿ 13 ಕಡೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಕರ್ನಾಟಕ ಲೋಕಾಯುಕ್ತ ಆ್ಯಕ್ಟ್ ಪ್ರಕಾರ ಸಾರ್ವಜನಿಕರಿಗೆ ಸರಿಯಾದ ರೀತಿ ಸೇವೆ ಸೇರಿದಂತೆ ವಿವಿಧ ದೂರು ಬಂದ ಹಿನ್ನಲೆ ದಾಳಿ ಮಾಡಲಾಗಿದೆ. ದಾಳಿಯಲ್ಲಿ ಎಲ್ಲ ಕಡೆಗಳಲ್ಲಿ ಸಿಕ್ಕಿರುವ ಎಲ್ಲದರ ಬಗ್ಗೆ ಮಾಹಿತಿ ನಾಳೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:13 pm, Wed, 13 September 23