Bidar: ಮನ್ನಾಖೇಳಿಯಲ್ಲಿ ಚಾಲಕನ ಬರ್ಬರ ಕೊಲೆ; ಕಾರಣ ನಿಗೂಢ

ಚಾಲಕನೋರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮನ್ನಾಖೇಳಿ ಗ್ರಾಮದಲ್ಲಿ ನಡೆದಿದೆ. ಚಾಕುವಿನಿಂದ ಇರಿದು, ಕಲ್ಲಿನಿಂದ ತಲೆಗೆ ಜಜ್ಜಿ ಗಣಪತಿ ವಗ್ಗೇರಿ (32) ಎಂಬಾತನನ್ನು ಮರ್ಡರ್​ ಮಾಡಲಾಗಿದ್ದು, ಕೊಂದಿದ್ದು ಯಾರು? ಮತ್ತೆ ಯಾಕೆ? ಎಂಬ ಪ್ರಶ್ನೆ ಇನ್ನೂ ನಿಗೂಢವಾಗಿಯೇ ಉಳಿದಿದೆ.

Bidar: ಮನ್ನಾಖೇಳಿಯಲ್ಲಿ ಚಾಲಕನ ಬರ್ಬರ ಕೊಲೆ; ಕಾರಣ ನಿಗೂಢ
ಗಣಪತಿ ವಗ್ಗೇರಿ
Updated By: ಪ್ರಸನ್ನ ಹೆಗಡೆ

Updated on: Oct 02, 2025 | 8:39 PM

ಬೀದರ್​, ಅಕ್ಟೋಬರ್​ 02: ಚಾಕುವಿನಿಂದ ಇರಿದು, ಕಲ್ಲಿನಿಂದ ತಲೆಗೆ ಜಜ್ಜಿ ಚಾಲಕನೋರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮನ್ನಾಖೇಳಿ ಗ್ರಾಮದಲ್ಲಿ ನಡೆದಿದೆ. ಗಣಪತಿ ವಗ್ಗೇರಿ (32) ಕೊಲೆಯಾದ ಯುವಕನಾಗಿದ್ದು, ಮನ್ನಾಖೇಳಿ ಪಟ್ಟಣದ ಜೆಸ್ಕಾ ಕಚೇರಿ ಬಳಿ ಮರ್ಡರ್​ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಯಾರ ಜೊತೆಗೂ ಜಗಳ, ಗಲಾಟೆ ಮಾಡಿಕೊಳ್ಳದೆ ಅವರಿವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನೆಮಗನ ಸಾವು​ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಗಣಪತಿಗೆ 9 ವರ್ಷದ ಹಿಂದೆ ಮದುವೆಯಾಗಿದ್ದು, ಪುಟ್ಟಪುಟ್ಟ ಮೂರು ಮಕ್ಕಳಿದ್ದಾರೆ. ಮೊದಲು ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಈತ, ಕಳೆದ ನಾಲ್ಕೈದು ವರ್ಷಗಳಿಂದ ತನ್ನೂರಿನಲ್ಲಿಯೇ ಅವರಿವರ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಚಿಕ್ಕಂದಿನಿಂದಲೂ ಶಾಂತ ಸ್ವಭಾವದವರಾಗಿದ್ದು, ಯಾರ ಜೊತೆಗೂ ಜಗಳವಾಡಿದ ಉದಾಹರಣೆ ಇಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡಿದ್ದ. ಆಸ್ತಿ ಅಂತಾ ಏನು ಇಲ್ಲದಿದ್ದರೂ ನಾಲ್ಕು ಜನ ಅಣ್ಣತಮ್ಮಂದಿರು ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು ಎಂಬುದು ಸ್ಥಳೀಯರ ಮಾತು.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಯುವಕನ ಕೊಲೆಯ ಸುದ್ದಿ ತಿಳಿಯುತ್ತಿದಂತೆ ಊರಿಗೆ ಊರೇ ಬೆಚ್ಚಿ ಬಿದ್ದಿದೆ. ಹಬ್ಬದ ಸಡಗರದಲ್ಲಿದ್ದ ಗ್ರಾಮಸ್ಥರಿಗೆ ಈ ವಿಚಾರ ಬರ ಸಿಡಿಲಿನಂತೆ ಅಪ್ಪಳಿಸಿದ್ದು, ಗಣಪತಿಯನ್ನ ಕೊಂದಿದ್ದು ಯಾರು? ಮತ್ತೆ ಯಾಕೆ? ಎಂಬ ಪ್ರಶ್ನೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮನ್ನಾಖೇಳಿ ಪೊಲೀಸರು, ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ. ಮನೆಮಗ ನಡು ರಸ್ತೆಯಲ್ಲಿ ಹೆಣವಾಗಿದ್ದು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗಣಪತಿಗೆ ಯಾರೂ ಶತ್ರುಗಳು ಇರಲಿಲ್ಲ. ಹೀಗಿದ್ದರೂ ಆತನನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದು, ಚಿಕ್ಕ ಚಿಕ್ಕ ಮೂರು ಮಕ್ಕಳು ತಬ್ಬಲಿಗಳಾಗಿದ್ದಾರೆ. ಯಾರು ಕೊಲೆ ಮಾಡಿದ್ದಾರೋ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಗಣಪತಿ ವಗ್ಗೇರಿ ಸಹೋದರ ಭೀಮಶಿ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.