ಬೀದರ್: ಅತಿವೃಷ್ಠಿಯ ಹೊಡೆತಕ್ಕೆ ಬೀದರ್ ಜಿಲ್ಲೆಯ ಬಹುತೇಕ ರೈತರು ನಷ್ಟ ಅನುಭವಿಸಿದ್ದಾರೆ. ಹೊಲದಲ್ಲಿ ಬಿತ್ತಿದ ಬೆಳೆ ಎಲ್ಲಾ ಮಳೆಯಿಂದ ಕೊಚ್ಚಿಕೊಂಡು ಹೋಗಿ ಸಾಲದ ಸುಳಿಗೆ ಸಿಲುಕಿ ನರಳುತ್ತಿದ್ದಾರೆ. ಆದರೆ ಇಲ್ಲೋಬ್ಬರು ರೈತ ( Farmer) ಇಂತಹ ಹತ್ತಾರು ಸಮಸ್ಯೆಗಳ ನಡುವೆಯೂ 3 ಎಕರೆಯ ಭೂಮಿಯಲ್ಲಿ ಬಾಳೆ ಬೆಳೆದು ಬದುಕನ್ನು ಬಂಗಾರವಾಗಿಸಿಕೊಂಡಿದ್ದಾರೆ. ಕಡಿಮೆ ನೀರಿನಲ್ಲಿ ವೈಜ್ಜಾನಿಕ ಪದ್ಧತಿ ಬಳಸಿ, ಬಾಳೆ ಬೆಳೆದಿದ್ದಾರೆ. ಅಷ್ಟೇ ಅಲ್ಲದೇ ಲಕ್ಷಾಂತರ ರೂಪಾಯಿ ಆದಾಯದ ನಿರಿಕ್ಷೇಯಲ್ಲಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಒಂದು ದಶಕದಿಂದಲೂ ಪದೇ ಪದೇ ಬರಗಾಲ, ಅತಿವೃಷ್ಠಿ ಅನಾವೃಷ್ಠಿಯಿಂದ ರೈತರು ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟದ ಸ್ಥಿತಿಯನ್ನು ಎದುರಿಸುವಂತಾಗಿದೆ. ಉದ್ದು, ಕಬ್ಬು, ಸೋಯಾ ಬೆಳೆದ ರೈತರು ನಷ್ಟದ ಹಾದಿ ತುಳಿಯುತ್ತಿರುವ ಸಂಖ್ಯೆ ಹೆಚ್ಚುತ್ತಿರುವ ಇಂದಿನ ದಿನದಲ್ಲಿ ಸೋಯಾ, ಕಬ್ಬು ಬೆಳೆಗೆ ಬ್ರೇಕ್ ಹಾಕಿ ತೋಟಗಾರಿಗೆ ಬೆಳೆಗೆ ಮನಸ್ಸು ಮಾಡಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಣಮೆಳಕುಂದಾ ಗ್ರಾಮದ ರೈತ ಜಾಲಿಂದರ್ ಪ್ರಗತಿಪರ ಯುವ ರೈತ. ತಮ್ಮ 30 ಎಕರೆ ಕಮೀನಿನಲ್ಲಿ 3 ಎಕರೆ ಪ್ರದೇಶದಲ್ಲಿ ಬಾಳೆಯ ಗಿಡಗಳನ್ನು ನೆಟ್ಟು ಉತ್ತಮ ಫಸಲಿನ ನೀರಿಕ್ಷೇಯಲ್ಲಿದ್ದಾರೆ.
ಈ ರೈತ ತಮ್ಮ ಮೂರು ಎಕರೆ ಜಮೀನಿನಲ್ಲಿ 3,600 ಸಸಿಗಳಂತೆ ನೆಟ್ಟಿದ್ದಾರೆ. ಅಂಗಾಂಶ ಕೃಷಿ ಬಾಳೆ ‘ಜಿ-ನೇನ್’ ತಳಿ ಬಳಸಿದ್ದಾರೆ. ಗಿಡಗಳಿಗೆ ಉತ್ತಮ ಕೊಟ್ಟಿಗೆ ಗೊಬ್ಬರ, ಕಾಲಕಾಲಕ್ಕೆ ಕಾಂಪೋಸ್ಟ್, ಪೊಟ್ಯಾಷ್, ಕಾಂಪ್ಲೆಕ್ಸ್ ಗೊಬ್ಬರ ನೀಡಿದ್ದಾರೆ. ಇದರಿಂದಾಗಿ ಲಘು ಪೋಷಕಾಂಶಗಳ ಕೊರತೆ ನೀಗಿ, ಉತ್ತಮ ಇಳುವರಿ ಬಂದಿದೆ. ಗಿಡಗಳಿಗೆ ರೋಗನಿರೋಧಕ ಶಕ್ತಿ ವೃದ್ಧಿಯಾಗಿದೆ. ಹನಿ ನೀರಾವರಿ ಮೂಲಕ ರಸಾವರಿ ಪದ್ಧತಿ ಅನುಸರಿಸಿ, ನೀರಿನಲ್ಲಿ ಕರಗುವ ಗೊಬ್ಬರವನ್ನು ಗಿಡಗಳಿಗೆ ಸಮೃದ್ಧಿಯಾಗಿ ನೀಡಿದ್ದಾರೆ. ಇದರ ಪರಿಣಾಮವಾಗಿ ಇಂದು ಒಂದು ಬಾಳೆ ತೋಟದಲ್ಲಿ 4 ಅಡಿಯಷ್ಟು ಉದ್ದದ 45 ರಿಂದ 50 ಕೆಜಿ ತೂಕದ ಗೊನೆಗಳು ನೇತಾಡುತ್ತಿವೆ.
ರೈತ ಜಾಲಿಂದರ್ ತಮ್ಮ ಹೊಲದಲ್ಲಿ ಬಾಳೆ ಬೆಳೆಗೆ ಖರ್ಚುಮಾಡಿದ್ದು, ಕೇವಲ 70 ಸಾವಿರ ಮಾತ್ರ. ತೋಟಗಾರಿಕೆ ಇಲಾಖೆಯು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಇವರಿಗೆ 70 ಸಾವಿರ ರೂಪಾಯಿ ಸಬ್ಸಿಡಿ ನೀಡಿದೆ. ಹನಿ ನೀರಾವರಿಗೆ ಶೇ.90 ರಷ್ಟು ಸಬ್ಸಿಡಿ ಸಿಕ್ಕಿದೆ ಮನೆಯವರು ಎಲ್ಲರೂ ಕೂಡಿಕೊಂಡು ಕೆಲಸಮಾಡಿದ್ದಾರೆ. ಹೀಗಾಗಿ ಕೂಲಿ ಆಳಿನ ಸಮಸ್ಯೆ ಕೂಡಾ ಇವರಿಗಿಲ್ಲ. ಪ್ರತಿ ಬಾಳೆ ಗೊನೆ 25-30 ಕೆಜಿಯಷ್ಟು ತೂಕ ಬರುವುದು ಸಾಮಾನ್ಯ. ಆದರೆ, ಇಲ್ಲಿನ ರೈತರ ಬಾಳೆ ಗೊನೆ 40-50 ಕೆಜಿ ತೂಗುತ್ತಿವೆ.
ಸದ್ಯ ಪ್ರತಿ ಕೆಜಿ ಬಾಳೆಗೆ 8 ರೂಪಾಯಿಯಂತೆ ಇಡಿ ತೋಟವನ್ನೇ ಗುತ್ತಿಗೆ ಕೊಟ್ಟಿದ್ದಾರೆ. ಹೀಗಾಗಿ ಇವರಿಗೆ ಮಾರುಕಟ್ಟೆ ಸಮಸ್ಯೆಯೇ ಬಂದಿಲ್ಲ. ಇವರ ಹೊಲಕ್ಕೆ ಬಂದು ಬಾಳೆಯನ್ನು ಕಟಾವು ಮಾಡಿಕೊಂಡು ಅವರೆ ಹೋಗುತ್ತಿದ್ದಾರೆ. ಹೀಗಾಗಿ ಸಾಗಾಟದ ವೆಚ್ಚ, ಬಾಳೆ ಕಟಾವು ಮಾಡುವ ಕೂಲಿ ಆಳುಗಳ ಖರ್ಚು ಕೂಡಾ ಇವರಿಗೆ ಉಳಿಯುತ್ತಿದೆ. ಮೂರು ಎಕರೆಗೆ ಕನಿಷ್ಟವೆಂದರು 8 ಲಕ್ಷ ರೂಪಾಯಿ ಆದಾಯ ಬರುವ ನಿರಿಕ್ಷೇಯನ್ನು ರೈತ ಹೊಂದಿದ್ದಾರೆ.
ನೀರಿನ ಅನುಕೂಲತೆ ಇದ್ದವರು ತೋಟಗಾರಿಕೆ ಅಧಿಕಾರಿಗಳ ಮತ್ತು ಅನುಭವಿ ರೈತ ಮಿತ್ರರ ಸಲಹೆ ಪಡೆದು ಬಾಳೆ ಬೆಳೆಯನ್ನು, ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿ, ಕಾಲಕಾಲಕ್ಕೆ ತಪ್ಪದೇ ಗೊಬ್ಬರ, ಔಷಧೋಪಚಾರ ಮಾಡಿದ್ದಾರೆ. ಹೀಗಾಗಿ ಇವರ ಬಾಳೆ ಬೆಳೆ ಚೆನ್ನಾಗಿ ಬಂದಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.
ಈಗಿನ ಬಾಳೆ ದರಕ್ಕೆ ಹೋಲಿಸಿದರೆ ಇವರಿಗೆ ಮೂರು ಎಕರೆಗೆ ಏನಿಲ್ಲವೆಂದರು 8 ಲಕ್ಷ ಆದಾಯ ಬರುವುದು ಪಕ್ಕಾ ಆದಂತಾಗಿದೆ ಕಬ್ಬು ಬೆಳೆದು ಕೈ ಸುಟ್ಟುಕೊಳ್ಳುವುದರ ಬದಲು ಬಾಳೆ ಬೆಳೆದು ಈ ರೈತ ಸೈ ಎಣಿಸಿಕೊಂಡಿದ್ದಾನೆಂದು ಹಿರಿಯ ರೈತ ಸೋಮನಾಂಥ್ ತಿಳಿಸಿದ್ದಾರೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ:
ಬರಡು ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದ ಸಾಹಸಿ ರೈತ; ಮಳೆ ನೀರನ್ನೇ ಆಧಾರವಾಗಿಸಿ ವರ್ಷಕ್ಕೆ 10 ಲಕ್ಷ ರೂ. ಆದಾಯ
ಮುಕ್ಕಾಲು ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಆದಾಯ ಗಳಿಸಿದ ರೈತ; ಬಿಬಿಎಂ ಪದವೀಧರನ ಕೃಷಿ ಒಲವು