ಬೀದರ್: ಈರುಳ್ಳಿ(Onion) ಬೆಳೆದು ರೈತರು ನಷ್ಟಕ್ಕೆ ಸಿಲುಕಿದ್ದಾರೆ. ಖರ್ಚು ಮಾಡಿದ ಹಣ ಸಹ ಬಾರದೆ ರೈತ ಕಂಗಾಲಾಗಿದ್ದಾನೆ. ಹೌದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಿಪ್ಪರರ್ಗಾ ಗ್ರಾಮದ ಬಹುತೇಕ ರೈತರು ಈರುಳ್ಳಿ ಬೆಳೆಯನ್ನೇ ಬೆಳೆಯುತ್ತಾರೆ. ಗ್ರಾಮದಲ್ಲಿರುವ 300 ಎಕರೆಗೂ ಅಧಿಕ ಜಮೀನಿನಲ್ಲಿ ಈರುಳ್ಳಿ ಬೆಳೆದು ಪ್ರತಿ ವರ್ಷವೂ ಲಾಭ ಗಳಿಸುತ್ತಿದ್ದರು. ಈರುಳ್ಳಿ ಬೆಳೆಯಿಂದಲೇ ಸುಂದರವಾದ ಬದುಕನ್ನ ಕಟ್ಟುಕೊಂಡಿದ್ದರು. ಆದರೆ ಈ ವರ್ಷ ಈರುಳ್ಳಿ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿತಗೊಂಡಿದ್ದು ರೈತರನ್ನ ಕಂಗಾಲು ಮಾಡಿದೆ. ಕಳೆದೊಂದು ತಿಂಗಳಿಂದ ಈರುಳ್ಳಿ ಬೆಳೆ ಕುಸಿತ ಕಂಡಿರುವುದಕ್ಕೆ ಎಲ್ಲ ರೈತರು ಈರುಳ್ಳಿಯನ್ನ ಯಾವ ರೇಟ್ಗೆ ಮಾರಬೇಕು ಎಂದು ಆತಂಕದಲ್ಲಿ ಇದ್ದಾರೆ. ಎಷ್ಟೋ ರೈತರು ಯಾವಾಗ ಬೆಲೆ ಜಾಸ್ತಿಯಾಗುತ್ತದೆಯೋ ಎಂದು ತಾವು ಸಾಲ ಮಾಡಿ ಬೆಳೆದ ಈರುಳ್ಳಿಯನ್ನು ಇನ್ನು ಇಟ್ಟುಕೊಂಡಿದ್ದಾರೆ. ಆದ್ರೆ, ಮಾರುಕಟ್ಟೆಗಳಲ್ಲಿ ಬಾಯಿಗೆ ಬಂದಂತೆ ಕ್ವಿಂಟಾಲ್ಗೆ ನಾಲ್ಕೈದು ನೂರು ರೂಪಾಯಿಗೆ ಕೇಳುತ್ತಿರುವುದಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರು ಕೂಡ ಸಿಕ್ಕಾಪಟ್ಟೆ ಡಿಮ್ಯಾಂಡ್ ಆಗಿದ್ದಾರೆ. ಈರುಳ್ಳಿ ಕೀಳೋದಕ್ಕೆ ಹಾಗೂ ಇನ್ನಿತರ ಕೆಲಸಗಳಿಗೆ ಬರಬೇಕು ಅಂದ್ರೆ, ಅವರಿಗೆ ನಿಗದಿತ ಕೈ ತುಂಬ ಹಣ ನೀಡಿದರೆ ಮಾತ್ರ ಕೆಲಸಕ್ಕೆ ಬರುತ್ತಾರೆ. ಇತ್ತ ಈರುಳ್ಳಿ ಬೆಲೆ ನೋಡಿದ್ರೆ, ಲಕ್ಷಾಂತರ ಖರ್ಚು ಮಾಡಿ ಬೆಳೆದಿರುವ ಬೆಳೆಯ ಅರ್ಧದಷ್ಟು ಕೈಗೆ ಸಿಗುತ್ತಿಲ್ಲ. ಎಷ್ಟೋ ರೈತರು ಬೇಸರದಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದ್ರೆ, ಏನೂ ಸಿಗಲ್ಲ ಎಂದು ಸಿಕ್ಕ ಸಿಕ್ಕವರಿಗೆ ಹಳ್ಳಿ ಭಾಗಗಳಲ್ಲಿಯೇ ಕೊಡಲು ಮುಂದಾಗಿದ್ದಾರೆ. ಈಗ ಚುನಾವಣೆ ಇದ್ದು, ಮನೆ ಮನೆಗೆ ಮತ ಕೇಳಲು ಬರುತ್ತಿದ್ದಾರೆ. ಆದರೆ ರೈತರ ಸಂಕಷ್ಟ ಮಾತ್ರ ಅವರಿಗೆ ಕೇಳಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಇದನ್ನೂ ಓದಿ:PM Kisan Yojana: ಕೇಂದ್ರ ಸರ್ಕಾರದಿಂದ 14ನೇ ಕಂತಿನ ಹಣ ಬಿಡುಗಡೆಗೆ ಮುನ್ನ ರೈತರು ಮಾಡಬೇಕಾದ ಕೆಲಸಗಳಿವು
ಇನ್ನು ನಮ್ಮ ಗ್ರಾಮದಲ್ಲಿ ಬಹುತೇಕ ರೈತರು ಈರುಳ್ಳಿ ಬೆಳೆಯನ್ನೇ ಬೆಳೆಯುತ್ತೇವೆ. ಒಮ್ಮೊಮ್ಮೆ ಈರುಳ್ಳಿ ಬೆಲೆ ಗಗನಕ್ಕೇರುತ್ತದೆ. ಆದ್ರೆ, ಬೆಲೆ ಕುಸಿದರೇ ಮಾತ್ರ ಪಾತಾಳಕ್ಕೆ ಇಳಿದು ಹೋಗುತ್ತದೆ. ರೈತರು ಇಂತಹ ಸಮಯದಲ್ಲಿ ಏನು ಮಾಡಬೇಕು ಎಂಬುದೇ ತಿಳಿಯದಂತಾಗಿದ್ದು ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಸರಕಾರ ನಮ್ಮ ಸಮಸ್ಯೆಯನ್ನ ಅರಿತು ಬೆಲೆ ಕುಸಿತದಿಂದ ಕಂಗಾಲಾಗಿರುವ ಈರುಳ್ಳಿಯನ್ನ ಬೆಂಬಲ ಬೆಲೆಯಲ್ಲಿ ಖರೀದಿಸಬೇಕೆಂದು ರೈತರು ಮನವಿ ಮಾಡುತ್ತಿದ್ದಾರೆ.
ಒಂದು ಎಕರೆ ಈರುಳ್ಳಿ ಬೆಳೆಯಬೇಕಾದರೆ 50 ರಿಂದ 55 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಉತ್ತಮ ಬೆಲೆ ಸಿಕ್ಕರೆ ಒಂದು ಲಕ್ಷಕ್ಕಿಂತ ಹೆಚ್ಚು ಆದಾಯ ಪಡೆಯಬಹುದಾಗಿದೆ. ಹೀಗಾಗಿಯೇ ರೈತರು ಈ ವರ್ಷ ಹೆಚ್ಚೆಚ್ಚು ಈರುಳ್ಳಿಯನ್ನ ಬೆಳೆಸಿದ್ದರು. ಆದರೆ ಬೆಲೆಯಿಲ್ಲದೆ ರೈತನಿಗೆ ಭಾರೀ ನಷ್ಟವಾಗಿದೆ. ರೈತರ ಸಮಸ್ಯೆಗಳು ಇಂದು ನಾಳೆಯೋ ಮುಗಿಯೋ ಸಮಸ್ಯೆಗಳಲ್ಲ, ಆದರೆ ಸರಕಾರ ಇವರ ಸಮಸ್ಯೆಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದರೆ ರೈತರ ಸಮಸ್ಯೆಗಳು ಬಗೆಹರಿಯುವುದರಲ್ಲಿ ಅನುಮಾನವೇ ಇಲ್ಲ. ರೈತರು ಬೆಳೆದ ಬೆಳೆಗೆ ದಲ್ಲಾಳಿಗಳ ಕಾಟವಿದ್ದು, ಇದನ್ನ ತಪ್ಪಿಸಿ, ಜೊತೆಗೆ ಬೆಂಬಲ ಬೆಲೆಯಲ್ಲಿ ತರಕಾರಿ, ದವಸ ಧಾನ್ಯವನ್ನ ಖರೀಧಿಸಿ ಸರಕಾರವೇ ಮಾರಾಟ ಮಾಡಿದರೆ ರೈತರು ಕೂಡ ಖುಷಿಯಿಂದಲೇ ಬದುಕು ಸಾಗಿಸುವುದರಲ್ಲಿ ಅನುಮಾನವಿಲ್ಲ.
ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ