PM Kisan: ಪಿಎಂ ಕಿಸಾನ್ 14ನೇ ಕಂತು ಯಾವಾಗ? ಹೊಸ ರೈತರು ನೊಂದಾಯಿಸುವುದು ಹೇಗೆ? ಎಲ್ಲಾ ವಿವರ ಇಲ್ಲಿದೆ
PM Kisan Samman Nidhi 14th Installment: ಲಕ್ಷಾಂತರ ರೈತರ ಕೆವೈಸಿ ಅಪ್ಡೇಟ್ ಸರಿಯಾಗಿ ಆಗದೇ ಇದ್ದರಿಂದ 13ನೇ ಕಂತು ಪಡೆದವರ ಸಂಖ್ಯೆ ಇಳಿಮುಖವಾಗಿತ್ತು. ಪಟ್ಟಿಯಿಂದ ಕೈಬಿಟ್ಟು ಹೋದರ ರೈತರು ಮತ್ತು ಯೋಜನೆಗೆ ಇನ್ನೂ ನೊಂದಾಯಿಸಿಕೊಳ್ಳದೇ ಇರುವ ರೈತರು ಹೊಸದಾಗಿ ಮತ್ತೊಮ್ಮೆ ಯೋಜನೆಗೆ ರಿಜಿಸ್ಟರ್ ಅಗಬಹುದು.
ನವದೆಹಲಿ: ಇದೇ ಫೆಬ್ರುವರಿ ಕೊನೆಯಲ್ಲಿ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (Pradhan Mantri Kisan Samman Nidhi Yojana) ತನ್ನ 13ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಿತ್ತು. ಇದೀಗ 14ನೇ ಕಂತಿನ ಹಣ ಬಿಡುಗಡೆಗೆ ರೈತರು ಕಾಯುತ್ತಿದ್ದಾರೆ. ಸರ್ಕಾರ 14ನೇ ಕಂತಿನ ಹಣ (PM Kisan Scheme 14th Installment) ಯಾವಾ ಬಿಡುಗಡೆ ಆಗುತ್ತದೆ ಎಂದು ಹೇಳಿಲ್ಲವಾದರೂ ಏಪ್ರಿಲ್ನಿಂದ ಜುಲೈವರೆಗೆ ಯಾವಾಗ ಬೇಕಾದರೂ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಣ್ಣ ರೈತರಿಗೆ ಬೇಸಾಯಕ್ಕೆ ಸಹಾಯಕವಾಗಲೆಂದು ಕೇಂದ್ರ ಸರ್ಕಾರ 2019 ಫೆಬ್ರುವರಿಯಲ್ಲಿ ಪಿಎಂ ಕಿಸಾನ್ ಸಮ್ಮಾನಿ ನಿಧಿ ಯೋಜನೆಯನ್ನು ಜಾರಿಗೆ ತಂದಿತ್ತು. ಪ್ರತೀ ವರ್ಷ ತಲಾ 2 ಸಾವಿರ ರೂಗಳ 3 ಸಮಾನ ಕಂತುಗಳು ಸೇರಿ ವರ್ಷಕ್ಕೆ 6,000 ರೂ ಹಣವನ್ನು ಅರ್ಹ ರೈತರ ಖಾತೆಗಳಿಗೆ ನೇರವಾಗಿ ಹಾಕುವುದು ಈ ಯೋಜನೆಯ ಉದ್ದೇಶ. ಈಗ ಈ ಯೋಜನೆ ಬಹುತೇಕ ಎಲ್ಲಾ ರೈತರಿಗೂ ವಿಸ್ತರಣೆ ಆಗಿದೆ. ಈವರೆಗೂ 2,000 ರೂಗಳ ಒಟ್ಟು 13 ಕಂತುಗಳನ್ನು ಕೇಂದ್ರ ಬಿಡುಗಡೆ ಮಾಡಿದೆ. 2023 ಫೆಬ್ರುವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ 13ನೇ ಕಂತಿನ ಹಣ ಬಿಡುಗಡೆ ಆಗಿದೆ ಎಂದು ಘೋಷಿಸಿದ್ದರು.
ಹೊಸದಾಗಿ ಯೋಜನೆಗೆ ನೊಂದಾಯಿಸಿಕೊಳ್ಳುವ ಅವಕಾಶ:
ಕರ್ನಾಟಕದ ರೈತರಿಗೆ ಡಬಲ್ ಖುಷಿ ಇದೆ. ಕೇಂದ್ರದಿಂದ ವರ್ಷಕ್ಕೆ 6 ಸಾವಿರ ರೂ ಜೊತೆಗೆ ರಾಜ್ಯ ಸರ್ಕಾರದಿಂದಲೂ ವರ್ಷಕ್ಕೆ 4 ಸಾವಿರ ರೂ ಸಿಗುತ್ತದೆ. ಅಂದರೆ ವರ್ಷಕ್ಕೆ ಒಟ್ಟು 10 ಸಾವಿರ ರೂ ಹಣವನ್ನು ಕರ್ನಾಟಕದ ರೈತರು ಪಡೆಯುತ್ತಾರೆ. ಪಿಎಂ ಕಿಸಾನ್ ಯೋಜನೆಯಲ್ಲಿ ದೇಶಾದ್ಯಂತ ಒಟ್ಟು 8 ಕೋಟಿಯಷ್ಟು ರೈತರು ನೊಂದಾಯಿತರಾಗಿದ್ದಾರೆ. 13ನೇ ಕಂತಿನ ಹಣ ಬಿಡುಗಡೆಗೆ ಮುನ್ನ ಯೋಜನೆಯ ಫಲಾನುಭವಿ ರೈತರಿಗೆ ಕೆವೈಸಿಯನ್ನು ಮತ್ತೊಮ್ಮೆ ಅಪ್ಡೇಟ್ ಮಾಡುವಂತೆ ಕೇಳಲಾಗಿತ್ತು. ಲಕ್ಷಾಂತರ ರೈತರ ಕೆವೈಸಿ ಅಪ್ಡೇಟ್ ಸರಿಯಾಗಿ ಆಗದೇ ಇದ್ದರಿಂದ 13ನೇ ಕಂತು ಪಡೆದವರ ಸಂಖ್ಯೆ ಇಳಿಮುಖವಾಗಿತ್ತು. ಪಟ್ಟಿಯಿಂದ ಕೈಬಿಟ್ಟು ಹೋದರ ರೈತರು ಮತ್ತು ಯೋಜನೆಗೆ ಇನ್ನೂ ನೊಂದಾಯಿಸಿಕೊಳ್ಳದೇ ಇರುವ ರೈತರು ಹೊಸದಾಗಿ ಮತ್ತೊಮ್ಮೆ ಯೋಜನೆಗೆ ರಿಜಿಸ್ಟರ್ ಅಗಬಹುದು.
ಇದನ್ನೂ ಓದಿ: ಇದು ಐಪಿಎಲ್ ಟ್ರೆಂಡ್! ಟಿವಿ ಮಾಧ್ಯಮ ಬಿಟ್ಟು ಠೀವಿಯಿಂದ ಡಿಜಿಟಲ್ ಕಡೆಗೆ ಮುಖ ಮಾಡಿದ ಐಪಿಎಲ್ ವೀಕ್ಷಕರು, ಜಾಹೀರಾತುದಾರರು!
ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಪಡೆಯಲು ರೈತರು ನೊಂದಾಯಿಸುವ ವಿಧಾನ ಇದು
- ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ pmkisan.gov.in ಭೇಟಿ ನೀಡಿ.
- ವೆಬ್ಸೈಟ್ನ ಮಧ್ಯಭಾಗದಲ್ಲಿ ಫಾರ್ಮ್ಸ್ ಕಾರ್ನರ್ ಅಡಿಯಲ್ಲಿ ಹಲವು ಸೆಕ್ಷನ್ಗಳನ್ನು ನೀವು ಕಾಣಬಹುದು.
- ಅದರಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಅನ್ನು ಕ್ಲಿಕ್ ಮಾಡಿ
- ನೊಂದಾಯಿಸಬೇಕೆಂದಿರುವ ರೈತರ ಆಧಾರ್ ನಂಬರ್, ಹಾಗೂ ಆಧಾರ್ ಜೊತೆ ಜೋಡಿತವಾದ ಮೊಬೈಲ್ ನಂಬರ್ ಅನ್ನು ಅಲ್ಲಿ ನಮೂದಿಸಬೇಕು. ಬಳಿಕ ಯಾವ ರಾಜ್ಯ ಎಂದು ಆಯ್ಕೆ ಮಾಡಿ ಕ್ಯಾಪ್ಚಾ ಕೋಡ್ ಟೈಪಿಸಿ, ಒಟಿಪಿ ಪಡೆಯಬೇಕು.
- ಇದಾದ ಬಳಿಕ ಪಿಎಂ ಕಿಸಾನ್ ಅರ್ಜಿ ಕಾಣುತ್ತದೆ. ಅದನ್ನು ಭರ್ತಿ ಮಾಡಿ ಕೊನೆಯಲ್ಲಿ ಸೇವ್ ಕೊಡಬೇಕು. ಆ ಅರ್ಜಿಯನ್ನು ನೀವು ಪ್ರಿಂಟ್ ಪಡೆಯಬಹುದು.
ಇದನ್ನೂ ಓದಿ: DA Hike: ಸರ್ಕಾರಿ ನೌಕರರಿಗೆ ಡಬಲ್ ಧಮಾಕ; ಜುಲೈನಲ್ಲಿ ಮತ್ತೆ ಡಿಎ ಹೆಚ್ಚಳ; ಹೊಸ ಸೂತ್ರದಲ್ಲಿ ಸಂಬಳ ಎಷ್ಟು ಜಾಸ್ತಿಯಾಗುತ್ತೆ?
ರೈತ ಕೇಂದ್ರಕ್ಕೆ ಹೋಗಿ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಬಹುದು
ಆನ್ಲೈನ್ನಲ್ಲಿ ಪಿಎಂ ಕಿಸಾನ್ ಯೋಜನೆಗೆ ಹೆಸರು ನೊಂದಾಯಿಸಲು ಗೊಂದಲವೆನಿಸಿದರೆ ರೈತರು ತಮ್ಮ ಗ್ರಾಮ ಸಮೀಪದ ರೈತ ಕೇಂದ್ರಗಳಿಗೆ ಹೋಗಿ ರಿಜಿಸ್ಟರ್ ಆಗಬಹುದು. ಆಧಾರ್ ಕಾರ್ಡ್, ಜಮೀನು ಖಾತೆ ಪ್ರಿಂಟನ್ನು ತೆಗೆದುಕೊಂಡು ಹೋಗಿ ಕೊಡಬೇಕಾಗುತ್ತದೆ.
ಇಲ್ಲಿ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಳ್ಳಲು ಕೆಲ ಷರತ್ತುಗಳಿವೆ. ಅರ್ಹ ರೈತರು ಜಮೀನಿನ ಮಾಲೀಕರಾಗಿರಬೇಕು. ಅವರ ಕುಟುಂಬ ಸದಸ್ಯರಲ್ಲಿ ಯಾರೂ ತೆರಿಗೆ ಪಾವತಿದಾರರಾಗಿರಬಾರದು. ಸಂಸದರು, ಶಾಸಕರು ಇತ್ಯಾದಿ ಆಗಿರಬಾರದು. ಸರ್ಕಾರಿ ಉದ್ಯೋಗಿಗಳಾಗಿರಬಾರದು. ವೈದ್ಯ, ವಕೀಲ, ಎಂಜಿನಿಯರ್ ಇತ್ಯಾದಿ ವೃತ್ತಿಪರರಾಗಿರಬಾರದು. ಈ ಬಗ್ಗೆ ಪಿಎಂ ಕಿಸಾನ್ ವೆಬ್ಸೈಟ್ಗೆ ಹೋದರೆ ಇನ್ನಷ್ಟು ಮಾಹಿತಿ ಪಡೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:34 pm, Mon, 10 April 23