DA Hike: ಸರ್ಕಾರಿ ನೌಕರರಿಗೆ ಡಬಲ್ ಧಮಾಕ; ಜುಲೈನಲ್ಲಿ ಮತ್ತೆ ಡಿಎ ಹೆಚ್ಚಳ; ಹೊಸ ಸೂತ್ರದಲ್ಲಿ ಸಂಬಳ ಎಷ್ಟು ಜಾಸ್ತಿಯಾಗುತ್ತೆ?
7th Pay Commision Update: ಶೇ. 42ರಷ್ಟಿರುವ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಜುಲೈ ತಿಂಗಳಲ್ಲಿ ಶೇ. 46ಕ್ಕೆ ಏರುವ ನಿರೀಕ್ಷೆ ಇದೆ. ಜುಲೈನಲ್ಲಿ ಹೊಸ ಸೂತ್ರದ ಆಧಾರದ ಮೇಲೆ ಡಿಎ ಹೆಚ್ಚಳ ಆಗಬಹುದು ಎಂದು ವರದಿಗಳು ಹೇಳುತ್ತಿವೆ. ಅದರ ವಿವರ ಈ ವರದಿಯಲ್ಲಿದೆ.
ನವದೆಹಲಿ: ಕಳೆದ ತಿಂಗಳು ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಅನ್ನು ಶೇ. 4ರಷ್ಟು ಹೆಚ್ಚಳ ಮಾಡಿತ್ತು. ಇದೀಗ ಇನ್ನೆರಡು ತಿಂಗಳಲ್ಲಿ ಸರ್ಕಾರ ಮತ್ತೊಮ್ಮೆ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸುವ ಸಾಧ್ಯತೆ ಇದೆ. ಶೇ. 42ರಷ್ಟಿರುವ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಜುಲೈ ತಿಂಗಳಲ್ಲಿ ಶೇ. 46ಕ್ಕೆ ಏರುವ ನಿರೀಕ್ಷೆ ಇದೆ. ಜುಲೈನಲ್ಲಿ ಹೊಸ ಸೂತ್ರದ ಆಧಾರದ ಮೇಲೆ ಡಿಎ ಹೆಚ್ಚಳ ಆಗಬಹುದು ಎಂದು ವರದಿಗಳು ಹೇಳುತ್ತಿವೆ. ಡಿಎ (Dearness Allowance) ಅಥವಾ ತುಟ್ಟಿ ಭತ್ಯೆಯನ್ನು ಹಾಲಿ ಉದ್ಯೋಗದಲ್ಲಿರುವವರಿಗೆ ಕೊಡಲಾಗುತ್ತದೆ. ಡಿಆರ್ (Dearness Relief) ಅಥವಾ ತುಟ್ಟಿ ಪರಿಹಾರವನ್ನು ಸರ್ಕಾರಿ ನೌಕರಿಯಿಂದ ನಿವೃತ್ತರಾಗಿ ಮಾಸಿಕ ಪಿಂಚಣಿ (Pensioners) ಪಡೆಯುತ್ತಿರುವವರಿಗೆ ನೀಡಲಾಗುತ್ತದೆ. ಪ್ರತೀ ವರ್ಷ ಜನವರಿ ಮತ್ತು ಜುಲೈ ತಿಂಗಳಲ್ಲಿ ಡಿಎ ಮತ್ತು ಡಿಆರ್ ಪರಿಷ್ಕರಣೆ ಮಾಡಲಾಗುತ್ತದೆ. ದೇಶದಲ್ಲಿ ಒಟ್ಟು 47.58 ಕೇಂದ್ರ ಸರ್ಕಾರಿ ನೌಕರರಿದ್ದಾರೆ. 69.76ಲಕ್ಷ ಪಿಂಚಣಿದಾರರಿದ್ದಾರೆ.
ಸರ್ಕಾರಿ ನೌಕರರಿಗೆ ಡಿಎ ಮತ್ತು ಡಿಆರ್ ಕೊಡುವುದು ಯಾಕೆ?
ವೇತನ ಆಯೋಗದ ಶಿಫಾರಸಿನ ಮೇರೆಗೆ ಡಿಎ ಮತ್ತು ಡಿಆರ್ ಸೌಲಭ್ಯ ಕೊಡಲಾಗುತ್ತಿದೆ. ಬೆಲೆ ಏರಿಕೆಯ ಸೂಚಕವಾದ ಹಣದುಬ್ಬರದ ಆಧಾರದ ಮೇಲೆ ಡಿಎ ನೀಡಲಾಗುತ್ತದೆ. ಅಂದರೆ ಪ್ರತೀ ವರ್ಷವೂ ಜನಜೀವನಕ್ಕೆ ಅಗತ್ಯವಾದ ವಸ್ತುಗಳ ಬೆಲೆ ಎಷ್ಟು ಏರಿದೆ, ಅದರಿಂದ ಉದ್ಯೋಗಿಗಳ ವೆಚ್ಚ ಎಷ್ಟು ಹೆಚ್ಚಾಗುತ್ತದೆ? ಎಂಬಿತ್ಯಾದಿ ಲೆಕ್ಕಾಚಾರಗಳನ್ನು ಹಾಕಲಾಗುತ್ತದೆ. ವೇತನ ಪರಿಷ್ಕರಣೆ ಆದರೂ ಹಣದುಬ್ಬರದಿಂದಾಗಿ ಸಂಬಳ ಹೆಚ್ಚಳ ಉಪಯೋಗಕ್ಕಿಲ್ಲದಂತಾಗುತ್ತದೆ. ಹೀಗಾಗಿ, ಹಣದುಬ್ಬರ ಪರಿಣಾಮವನ್ನು ನಿಷ್ಕ್ರಿಯಗೊಳಿಸಲು ಡಿಎ ಮತ್ತು ಡಿಆರ್ ಅನ್ನು ಏರಿಸಲಾಗುತ್ತದೆ. ಸಾಮಾನ್ಯವಾಗಿ ಶೇ. 4ರಷ್ಟು ಡಿಎ ಹೆಚ್ಚಳವಾಗುತ್ತದೆ.
ಸರ್ಕಾರದ ಪರಿಷ್ಕೃತ ಡಿಎ ಲೆಕ್ಕಾಚಾರ ಮತ್ತು ಹೊಸ ಸೂತ್ರ
ತುಟ್ಟಿಭತ್ಯೆ ಎಷ್ಟು ಏರಿಕೆ ಮಾಡಬಹುದು ಎಂಬುದಕ್ಕೆ ನಿರ್ದಿಷ್ಟ ಸೂತ್ರ ಇರುತ್ತದೆ. ಕೇಂದ್ರ ಕಾರ್ಮಿಕ ಸಚಿವಾಲಯ 2016ರಲ್ಲಿ ಈ ಸೂತ್ರದಲ್ಲಿ ತುಸು ಮಾರ್ಪಾಡು ತಂದಿದೆ. ತುಟ್ಟಿಭತ್ಯೆಯ ಮೂಲ ವರ್ಷವನ್ನು (ಬೇಸ್ ಇಯರ್– Base Year) 1963-65 ಬದಲು 2016=100 ಆಗಿ ಬದಲಾಯಿಸಿ, ಹೊಸ ವೇತನ ದರ ಸೂಚಿ (WRI- Wage Rate Index) ಬಿಡುಗಡೆ ಮಾಡಿತು. ಅದರಂತೆ ಈ ಕೆಳಗೆ ಸೂತ್ರ ರೂಪಿಸಲಾಗಿದೆ. ಡಿಎ ಎಷ್ಟು ಪ್ರತಿಶತದಷ್ಟು ಏರಿಕೆ ಮಾಡಬಹುದು ಎಂಬುದರ ಫಾರ್ಮುಲಾ ಇದು.
(2016=100 ಅನ್ನು ಮೂಲ ವರ್ಷವಾಗಿ ಇಟ್ಟುಕೊಂಡು ಕಳೆದ 12 ತಿಂಗಳಲ್ಲಿ ಆದ ಸರಾಸರಿ ಹಣದುಬ್ಬರ ಪ್ರಮಾಣ – 115.76 / 115.76) X 100.
ಕಳೆದ ತಿಂಗಳು ಶೇ. 4 ಡಿಎ ಪರಿಷ್ಕರಣೆ ಬಳಿಕ ಸಂಬಳ ಎಷ್ಟು ಹೆಚ್ಚಳ?
ಜನವರಿಯಿಂದ ಅನ್ವಯವಾಗುವಂತೆ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಶೇ. 4ರಷ್ಟು ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಿತ್ತು. ಅಂದರೆ ಡಿಎ ಪ್ರಮಾಣ ಈಗ ಶೇ. 42ರಷ್ಟಿದೆ. ಉದ್ಯೋಗಿಯ ಮೂಲ ವೇತನದ ಆಧಾರದ ಮೇಲೆ ಡಿಎ ಪ್ರಮಾಣ ಹೆಚ್ಚಾಗುತ್ತದೆ.
ಇದನ್ನೂ ಓದಿ: KMF vs Amul: ಕೆಎಂಎಫ್ ಎದುರು ಸೆಣಸಿ ಗೆಲ್ಲಲು ಅಮುಲ್ಗೆ ಆಗುತ್ತಾ? ಎರಡು ದೈತ್ಯ ಹಾಲು ಉತ್ಪಾದಕರ ಮಧ್ಯೆ ಒಂದು ಹೋಲಿಕೆ
ಉದಾಹರಣೆಗೆ ಒಬ್ಬ ಉದ್ಯೋಗಿಯ ಮೂಲ ವೇತನ 30,000 ರೂ ಇದ್ದು ಕೈಗೆ ಬರುವ ಸಂಬಳ 50,000 ರೂ ಇದೆ ಎಂದಿಟ್ಟುಕೊಳ್ಳಿ. ಇಲ್ಲಿ ಡಿಎ ಹೆಚ್ಚಳಕ್ಕೆ ಆಧಾರವಾಗುವುದು ಮೂಲ ವೇತನದ ಪ್ರಮಾಣ. ಶೇ. 38ರಷ್ಟು ಡಿಎ ಎಂದರೆ 11,400 ರೂ ಆಗುತ್ತದೆ. ಈಗ ಶೇ. 4ರಷ್ಟು ಹೆಚ್ಚಳವಾಗಿ ಶೇ. 42 ಡಿಎ ಆಗಿದೆ. ಅಂದರೆ 12,600 ರೂ ಡಿಎ ಸಿಗುತ್ತದೆ. ಅಂದರೆ 30 ಸಾವಿರ ರೂ ಬೇಸಿಕ್ ಸ್ಯಾಲರಿ ಇರುವವರಿಗೆ ಡಿಎ ಸುಮಾರು 1,200 ರೂಪಾಯಿಯಷ್ಟು ಹೆಚ್ಚಾದಂತಾಗುತ್ತದೆ. ಈಗ ಇವರಿಗೆ ಇನ್ನೂ ಶೇ. 4ರಷ್ಟು ಡಿಎ ಹೆಚ್ಚಾದರೆ 13,800 ರು ಹೆಚ್ಚಾಗುತ್ತದೆ. ಸಂಬಳದಲ್ಲಿ ಮತ್ತೆ 1,200 ರೂ ಹೆಚ್ಚಾಗುತ್ತದೆ.
ಹಣದುಬ್ಬರ ಅಳೆಯಲು ಬೇಸ್ ಇಯರ್ ಅಥವಾ ಮೂಲ ವರ್ಷದ ಲೆಕ್ಕಾಚಾರ ಹೇಗೆ?
ಈ ಸುದ್ದಿಯ ಆರಂಭದಲ್ಲಿ ನೀವು ಡಿಎ ಲೆಕ್ಕಾಚಾರದಲ್ಲಿ 2016=100 ಅನ್ನು ಬೇಸ್ ಇಯರ್ ಆಗಿ ಇಟ್ಟು ಸೂತ್ರ ಪರಿಷ್ಕರಿಸಲಾಗಿದೆ ಎಂದು ಓದಿರಬಹುದು. ಈ ಮೂಲ ವರ್ಷದ ಲೆಕ್ಕಾಚಾರ ಹೇಗೆ? ಈಗ ಹಣದುಬ್ಬರಕ್ಕೆ ಮೂಲ ವರ್ಷ 2016 ಎಂದು ಮಾಡಲಾಗಿದೆ. ಆಗ ಆಯ್ದ ವಸ್ತುಗಳ ಒಂದು ವರ್ಗೀಕರಣ ಮಾಡಲಾಗುತ್ತದೆ. ಈ ಗುಂಪಿನ ಮೌಲ್ಯ 100 ಎಂದು ನಿಗದಿ ಮಾಡಲಾಗುತ್ತದೆ. ಆ ಗುಂಪಿನಲ್ಲಿರುವ ವಸ್ತುಗಳ ಒಟ್ಟು ದರ ಅ ವರ್ಷ ಎಷ್ಟೆಂದು ಅಳೆಯಲಾಗುತ್ತದೆ. ಉದಾಹರಣೆಗೆ, ಆ ಗುಂಪಿನಲ್ಲಿರುವ ವಿವಿಧ ವಸ್ತುಗಳ ಒಟ್ಟು ಮೌಲ್ಯ 2016ರಲ್ಲಿ 5 ಲಕ್ಷ ರೂ ಎಂದಿದೆ ಎಂದಿಟ್ಟುಕೊಳ್ಳಿ. ಈ ವರ್ಷ ನಿರ್ದಿಷ್ಟ ಅವಧಿಯಲ್ಲಿ ಇದೇ ವಸ್ತುಗಳ ಒಟ್ಟು ಬೆಲೆ 6 ಲಕ್ಷ ರೂ ಆಗಿದೆ ಎಂದಾದರೆ, ಹಣದುಬ್ಬರವು 2016ಕ್ಕೆ ಹೋಲಿಸಿದರೆ ಶೇ. 20 ಹೆಚ್ಚು ಆಗುತ್ತದೆ. ಇದು ಕಳೆದ 7 ವರ್ಷಗಳಲ್ಲಿ ಆದ ಹಣದುಬ್ಬರ ಏರಿಕೆ ಪ್ರಮಾಣ. ಇದೇ ಆಧಾರದಲ್ಲಿ 6 ತಿಂಗಳ ಹಣದುಬ್ಬರದ ಸರಾಸರಿಯನ್ನು ಪಡೆದು, ಡಿಎ ಎಷ್ಟು ಹೆಚ್ಚಿಸಬೇಕೆಂದು ನಿರ್ಧರಿಸಲಾಗುತ್ತದೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Sun, 9 April 23