ಮೈಸೂರು: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರ ಸಾವು
ಕರ್ನಾಟಕದ ವಿವಿಧೆಡೆ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ ಹಲವಾರು ಜನರು ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಬೈಕ್ ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿಯೂ ಅಪಘಾತಗಳು ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿವೆ. ಬೆಂಗಳೂರು-ಹೈದರಾಬಾದ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ರೈತನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಳಗಾವಿಯಲ್ಲಿಯೂ ಬಸ್ ಮತ್ತು ಲಾರಿ ನಡುವಿನ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾಳೆ.

ಮೈಸೂರು, ಜೂನ್ 04: ಮೈಸೂರು (Mysore) ಜಿಲ್ಲೆಯ ನಂಜನಗೂಡು (Nanjangud) ತಾಲೂಕಿನ ಜೆ.ಪಿ ಹುಂಡಿ ಬಳಿ ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಂಚಿಪುರ ಗ್ರಾಮದ ನಿವಾಸಿಗಳಾದ ಚೆನ್ನಮಲ್ಲಮ್ಮ, ಮಂಗಳು ರೂಪ, ಅಳಿಯ ಚಿನ್ನಸ್ವಾಮಿ ಮೃತದುರ್ದೈವಿಗಳು. ಮೂವರು ಮಾದನಹಳ್ಳಿಯಿಂದ ತಮ್ಮ ಊರಿಗೆ ತೆರೆಳ್ಳುತ್ತಿದ್ದರು. ಲಾರಿ ಹುಲ್ಲಹಳ್ಳಿಯಿಂದ ಸಂಗಮ ಕಡೆಗೆ ತೆರಳುತ್ತಿತ್ತು. ದಾರಿ ಮಧ್ಯೆ ಜೆಪಿ ಹುಂಡಿ ಬಳಿ ಅಪಘಾತ ಸಂಭವಿಸಿದೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ಬಾಳ ಫ್ಲೈ ಓವರ್ ಬಳಿ ಅಪಘಾತ: ಇಬ್ಬರ ಸಾವು
ಬೆಂಗಳೂರು: ಹೆಬ್ಬಾಳ ಫ್ಲೈ ಓವರ್ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅಸ್ಸಾಂ ಮೂಲದ ಅರ್ಜುನ್ (37), ಬಹದ್ದೂರ್ (24) ಮೃತದುರ್ದೈವಿಗಳು. ಮೃತರು ಹೆಚ್ಎಸ್ಆರ್ ಲೇಔಟ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ನಂದಿ ಹಿಲ್ನಿಂದ ಬೆಂಗಳೂರು ಬರುವಾಗ ಮಾರ್ಗ ಮಧ್ಯೆ ಬೆಳಿಗ್ಗೆ 8:15 ಕ್ಕೆ ಅಪಘಾತ ಸಂಭವಿಸಿದೆ. ಪಲ್ಸರ್ 220 ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತಡೆಗೋಡೆಗೆ ಗುದ್ದಿದೆ. ಅಪಘಾತ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಇಬ್ಬರ ಮೃತದೇಹ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬೆಂಗಳೂರು ಹೈದರಾಬಾದ್ ರಸ್ತೆಯಲ್ಲಿ ಸರಣಿ ಅಪಘಾತ
ಬೆಂಗಳೂರು ಹೈದರಾಬಾದ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ಗೆ ಆಂಧ್ರ ಮೂಲದ ಕಾರು ಡಿಕ್ಕಿ ಹೊಡೆದಿದೆ. ಆಂಧ್ರದ ಕಳ್ಯಾಣದುರ್ಗ ಎಂಎಲ್ಎ ಅಮಲಿನೇನಿ ಸುರೇಂದ್ರಬಾಬು ಅವರಿಂದ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ದೇವನಹಳ್ಳಿ ತಾಲೂಕಿನ ಆವತಿ ಬಳಿಯ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಎರಡು ಬೆನ್ಜ್ ಹಾಗೂ ಟ್ರಾಕ್ಟರ್ ನಡುವೆ ಸಂಭವಿಸಿದೆ. ಅಪಘಾತದಲ್ಲಿ ಟ್ಯ್ರಾಕ್ಟರ್ನಲ್ಲಿದ್ದ ರೈತ ಲವ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರೈತ ಹೊಸ ಟ್ರ್ಯಾಕ್ಟರ್ ತೆಗೆದುಕೊಂಡು ಮನೆ ಕಡೆ ಹೋಗುತ್ತಿರುವ ವೇಳೆ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ: ವಿಡಿಯೋ ನೋಡಿ
ಬಸ್, ಲಾರಿ ನಡುವೆ ಅಪಘಾತ
ಬೆಳಗಾವಿ: ಗೋಕಾಕ್ ತಾಲೂಕಿನ ಬೆನಚಿನಮರಡಿ ಗ್ರಾಮದ ಬಳಿ ಬಸ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ, ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಲಾರಿ ಡಿಕ್ಕಿ ರಭಸಕ್ಕೆ ಪಲ್ಟಿಯಾಗಿದ್ದ ಬಸ್ನಡಿ ಸಿಲುಕಿ ಕೊಳವಿ ಗ್ರಾಮದ ಯಲ್ಲವ್ವ ಬೀರನಗಡ್ಡಿ (70) ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.







