ಇದು ಐಪಿಎಲ್ ಟ್ರೆಂಡ್! ಟಿವಿ ಮಾಧ್ಯಮ ಬಿಟ್ಟು ಠೀವಿಯಿಂದ ಡಿಜಿಟಲ್ ಕಡೆಗೆ ಮುಖ ಮಾಡಿದ ಐಪಿಎಲ್ ವೀಕ್ಷಕರು, ಜಾಹೀರಾತುದಾರರು!
ಭಾರತದಲ್ಲಿ ವಯಾಕಾಮ್-18 ಜಿಯೋ ಸಿನಿಮಾ ಅಪ್ಲಿಕೇಷನ್‌ನಲ್ಲಿ ಐಪಿಲ್ 2023 ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತಿದೆ. ಒಟ್ಟು 20,500 ಕೋಟಿ ರೂಪಾಯಿಗೆ ವಯಾಕಾಮ್-18 ಭಾರತದಲ್ಲಿ ಡಿಜಿಟಲ್ ನೇರ ಪ್ರಸಾರ ಪಂದ್ಯಗಳ ಹಕ್ಕುಗಳನ್ನು ಪಡೆದುಕೊಂಡಿದೆ.
ನವದೆಹಲಿ: ಜನಪ್ರಿಯತೆಯ ಉತ್ತುಂಗದಲ್ಲಿರುವ ಇಂಡಿಯನ್ ಪ್ರೀಮಿಯಂ ಲೀಗ್ (IPL 2023) ಋತುವಿನಲ್ಲಿ ಈ ಬಾರಿ ಹೊಸ ಟ್ರೆಂಡ್ ಕಂಡುಬಂದಿದೆ. ಜಾಹೀರಾತುದಾರರು ಟೆಲಿವಿಶನ್ ಮಾಧ್ಯಮವನ್ನು (IPL Broadcasting) ಬಿಟ್ಟು ಡಿಜಿಟಲ್ ಕಡೆ ಮುಖ ಮಾಡಿದ್ದಾರೆ. ಬಾರ್ಕ್ ಇಂಡಿಯಾದ ಟೀವಿ ರೇಟಿಂಗ್‌ನಲ್ಲಿ (TVR), ಕಳೆದ ವರ್ಷ ಮೊದಲ ಪಂದ್ಯದಲ್ಲಿ ಸುಮಾರು 52 ಜಾಹೀರಾತುದಾರರು (Advertisers) ಟಿವಿಯಲ್ಲಿ ಜಾಹೀರಾತುಗಳನ್ನು ನೀಡಿದ್ದರು. ಈ ವರ್ಷ ಕೇವಲ 31 ಜಾಹೀರಾತುದಾರರು ಕಾಣಿಸಿಕೊಂಡರು. ಅಂದರೆ ಶೇ 40ರಷ್ಟು ಜಾಹೀರಾತುದಾರರು ಟಿವಿ ಜಾಹೀರಾತು ಪ್ರಸಾರದಿಂದ ವಿಮುಖರಾಗಿದ್ದಾರೆ.
ಕಳೆದ ಐಪಿಎಲ್ ಋತುವಿನಲ್ಲಿ ಟಿವಿ ಜಾಹೀರಾತುದಾರರ ಸಂಖ್ಯೆ ಸುಮಾರು 100 ಆಗಿತ್ತು. ಈ ಬಾರಿ 100 ಜಾಹೀರಾತುದಾರರ ಅಂಕಿಯನ್ನು ಮುಟ್ಟಲು ಸಾಧ್ಯವಾಗಬಹುದಾ ಅನ್ನೋ ಅನುಮಾನ ಕಾಡತೊಡಗಿದೆ. ಹಾಗೆ ನೋಡಿದಲ್ಲಿ, ಇದು ತುಂಬಾ ಕಷ್ಟಕರವೆಂದು ತೋರುತ್ತದೆ. ಟಿವಿಯಲ್ಲಿ ಪ್ರಾಯೋಜಕರ ಸಂಖ್ಯೆಯೂ ಕಡಿಮೆಯಾಗಿದೆ. ಕಳೆದ ವರ್ಷ ಇದ್ದ 16 ರಿಂದ ಈ ವರ್ಷ 12 ಕ್ಕೆ ಇಳಿದಿದೆ. ಈ 12ರಲ್ಲಿ ಒಬ್ಬ ಪ್ರಾಯೋಜಕರು ತಡವಾಗಿ ಮೂರನೇ ಪಂದ್ಯದೊಂದಿಗೆ ತಳುಕು ಹಾಕಿಕೊಂಡಿದ್ದಾರೆ.
ರಿಲಯನ್ಸ್‌ಗೆ ಸಂಬಂಧಿಸಿದ ಕಂಪನಿಗಳು ಜಾಹೀರಾತುದಾರರ ಪಟ್ಟಿಯಿಂದ ಸಂಪೂರ್ಣವಾಗಿ ಕಾಣೆಯಾಗಿವೆ. ಕಾರಣ ರಿಲಯನ್ಸ್ ಗ್ರೂಪ್‌ನ ವಯಾಕಾಮ್-18 ಐಪಿಎಲ್‌ನ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದೆ. ಬೈಜೂಸ್, ಕ್ರೆಡ್, ಮುತ್ತೂಟ್, ನೆಟ್‌ಮೆಡ್ಸ್, ಸ್ವಿಗ್ಗಿ, ಫ್ಲಿಪ್‌ಕಾರ್ಟ್, ಫೋನ್‌ಪೇ, ಮೀಶೋ, ಸ್ಯಾಮ್‌ಸಂಗ್, ಒನ್‌ಪ್ಲಸ್, ವೇದಾಂಟು, ಸ್ಪಾಟಿಫೈ ಮತ್ತು ಹ್ಯಾವೆಲ್ಸ್ ಇವು ಟೀವಿಯಿಂದ ವಿಮುಖವಾದ ಇತರ ದೊಡ್ಡ ಟಿವಿ ಜಾಹೀರಾತುದಾರರು. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದಲ್ಲಿ ಟಿವಿಯಲ್ಲಿ ಐಪಿಎಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತಿದೆ.
ಟಿವಿ ಜಾಹೀರಾತು ಆದಾಯದ ಪ್ರಮುಖ ಭಾಗವನ್ನು ಡಿಜಿಟಲ್ ಆವರಿಸಿಕೊಂಡಿದೆ. 125ಕ್ಕೂ ಹೆಚ್ಚು ಜಾಹೀರಾತುದಾರರು ಟಿವಿಯನ್ನು ದಾಟಿ ಡಿಜಿಟಲ್ ಜಾಹೀರಾತಿಗಾಗಿ ವಯಾಕಾಮ್-18 ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇವುಗಳಲ್ಲಿ ಅಮೆಜಾನ್, ಫೋನ್ ಪೇ, ಸ್ಯಾಮ್‌ಸಂಗ್, ಜಿಯೋಮಾರ್ಟ್, ಯುಬಿ, ಟಿವಿಎಸ್, ಕ್ಯಾಸ್ಟ್ರಾಲ್, ಇಟಿ ಮನಿ, ಪೂಮಾ, ಅಜಿಯೋನಂತಹ ಕಂಪನಿಗಳು ಸೇರಿವೆ.
ಟಿವಿಯಲ್ಲಿ ಜಾಹೀರಾತುದಾರರು ಕಡಿಮೆಯಾಗುತ್ತಿದ್ದು, ಇದು ಟಿವಿ ಪ್ರಸಾರಕರ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಐಪಿಎಲ್ ಆದಾಯದ ಸಂಪೂರ್ಣ ಅಂಕಿ- ಅಂಶಗಳೊಂದಿಗೆ ಹೊರಬರಲು ಇನ್ನೂ ಸಮಯವಿದೆ, ಐಪಿಎಲ್ ಮುಂದುವರಿದಂತೆ ಚಿತ್ರಣವು ಹೆಚ್ಚು ಸ್ಪಷ್ಟವಾಗುತ್ತದೆ.
ಭಾರತದಲ್ಲಿ ವಯಾಕಾಮ್-18 ಜಿಯೋ ಸಿನಿಮಾ ಅಪ್ಲಿಕೇಷನ್‌ನಲ್ಲಿ (Jio Cinema App) ಐಪಿಲ್ 2023 ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತಿದೆ. ಒಟ್ಟು 20,500 ಕೋಟಿ ರೂಪಾಯಿಗೆ ವಯಾಕಾಮ್-18 ಭಾರತದಲ್ಲಿ ಡಿಜಿಟಲ್ ನೇರ ಪ್ರಸಾರ ಪಂದ್ಯಗಳ ಹಕ್ಕುಗಳನ್ನು ಪಡೆದುಕೊಂಡಿದೆ. ಜಿಯೋ ಚಂದಾದಾರಿಕೆ ಹೊಂದಿರುವ ಎಲ್ಲ ಟೆಲಿಕಾಂ ಪೂರೈಕೆದಾರರ ಬಳಕೆದಾರರು ಉಚಿತವಾಗಿ ಜಿಯೋ ಸಿನಿಮಾ ಅಪ್ಲಿಕೇಷನ್‌ಗೆ ಲಾಗ್ ಇನ್ ಮಾಡುವ ಮೂಲಕ ಐಪಿಎಲ್ ಪಂದ್ಯಗಳನ್ನು ಆನಂದಿಸಬಹುದು.
ಒಂದೇ ದಿನದಲ್ಲಿ ಅತಿ ಹೆಚ್ಚು ಡೌನ್ಲೋಡ್ ಕಂಡ ಜಿಯೋ ಸಿನಿಮಾ ಆ್ಯಪ್
ಇದೇ ವೇಳೆ, ಐಪಿಎಲ್ ಅನ್ನು ಡಿಜಿಟಲ್ ಆಗಿ ಪ್ರಸಾರ ಮಾಡುವ ಹಕ್ಕು ಜಿಯೋಗೆ ಸಿಕ್ಕಿದೆ. ಹೆಚ್ಚು ಮಂದಿಗೆ ಪರಿಚಯ ಇಲ್ಲದ ಜಿಯೋ ಸಿನಿಮಾ ಆ್ಯಪ್ನಲ್ಲಿ ಐಪಿಎಲ್ ಪಂದ್ಯಗಳ ಉಚಿತ ಪ್ರಸಾರ ಲಭ್ಯ ಇದೆ. ಜಿಯೋದ ಈ ನಡೆ ಸಖತ್ತಾಗಿ ಫಲ ಕೊಟ್ಟಿದೆ. ಐಪಿಎಲ್ ಉದ್ಘಾಟನೆಯ ಮೊದಲ ದಿನವೇ 2.5 ಕೋಟಿ ಜನರು ಜಿಯೋ ಸಿನಿಮಾ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಒಂದೇ ದಿನದಲ್ಲಿ ಅತಿ ಹೆಚ್ಚು ಡೌನ್ಲೋಡ್ ಆದ ಹೊಸ ದಾಖಲೆಯನ್ನು ಜಿಯೋ ಸಿನಿಮಾ ಬರೆದಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:27 am, Mon, 10 April 23