SSLC Exam 2023: ತಮ್ಮನ ಸಾವಿನ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಸಹೋದರಿ ಕೀರ್ತನಾ
ತಮ್ಮನ ಸಾವಿನ ದುಃಖದಲ್ಲಿದ್ದ ಈಕೆ ಪರೀಕ್ಷೆ ಬರೆಯಲು ನಿರಾಕರಿಸಿದ್ದಳು. ಆದರೆ ಶಿಕ್ಷಕರು ಮತ್ತು ಬಾಲಕಿಯ ತಂದೆ ಸೇರಿ ಸಂಬಂಧಿಕರು ಮನವೊಲಿಸಿದ್ದರ ಫಲವಾಗಿ ದುಃಖದ ಮಧ್ಯೆಯೂ ಕೀರ್ತನಾ ಪರೀಕ್ಷೆ ಬರೆದ ನಂತರ ತಮ್ಮನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದಳು.
ಬೀದರ್: ತನ್ನ ಒಡಹುಟ್ಟಿದ ಸಹೋದರನ (Brother) ಸಾವಿನ ದು:ಖದ ಮಧ್ಯೆಯೂ ಸಹೋದರಿಯೊಬ್ಬಳು (Sister) ಪರೀಕ್ಷೆ ಬರೆದಿರುವ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ (Chitguppa) ತಾಲೂಕಿನ ತಾಳಮಡಗಿ ಗ್ರಾಮದ ನಡೆದಿದೆ. ತನ್ನ 9 ವರ್ಷದ ಕಿರಿಯ ಸಹೋದರ ಕಿಡ್ನಿ ವೈಫಲ್ಯದಿಂದ (Kidney Failure) ಬಳಲುತ್ತಿದ್ದು ಮೃತಪಟ್ಟಿದ್ದ. ತಮ್ಮನ ಸಾವಿನ ಸುದ್ದಿ ತಿಳಿದ ಹಿರಿಯಕ್ಕ ಕೀರ್ತನಾ ಮೊದಲು ಪರೀಕ್ಷೆ ಬರೆಯಲು ನಿರಾಕರಿಸಿದ್ದಳು. ಆದರೂ ಕೊನೆಗೆ ವಿದ್ಯಾರ್ಥಿನಿ ಕೀರ್ತನಾ ಪ್ರಶಾಂತ ಊರಿನ ಸರ್ಕಾರಿ ಪ್ರೌಢಶಾಲೆ ಕೇಂದ್ರದಲ್ಲಿ ಗುರುವಾರ ಎಸ್ಎಸ್ಎಲ್ಸಿ (SSLC Exam 2023) ಇಂಗ್ಲಿಷ್ ಪರೀಕ್ಷೆ ಬರೆದಿದ್ದಾಳೆ. ಏಕೈಕ ಸಹೋದರ 7ನೇ ತರಗತಿ ಪರೀಕ್ಷೆ ಬರೆದಿದ್ದ ಕಾರ್ತಿಕ ಬುಧವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಗುರುವಾರ ಅಂತ್ಯಕ್ರಿಯೆ (Last Rites) ನೆರವೇರಿತು.
ಇದೆಲ್ಲದರ ಮಧ್ಯೆ, ತಮ್ಮನ ಸಾವಿನ ದುಃಖದಲ್ಲಿದ್ದ ಈಕೆ ಪರೀಕ್ಷೆ ಬರೆಯಲು ನಿರಾಕರಿಸಿದ್ದಳು. ಬೆಳಗ್ಗೆ ವಿಷಯ ಗೊತ್ತಾಗುತ್ತಿದ್ದಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಸುರೇಶ ಕಟ್ಟಿಮನಿ, ಕಸ್ಟೋಡಿಯನ್ ಮಲ್ಲಪ್ಪ ಜಿಗಜೀವಣಿ ಬಾಲಕಿಯ ತಂದೆ ಸೇರಿ ಸಂಬಂಧಿಕರು ಮನವೊಲಿಸಿದ್ದರ ಫಲವಾಗಿ ದುಃಖದ ಮಧ್ಯೆಯೂ ಕೀರ್ತನಾ ಪರೀಕ್ಷೆ ಬರೆದ ನಂತರ ತಮ್ಮನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದಳು.
ಪರೀಕ್ಷೆ ಬರೆದು ಹೊರಬಂದು ವಿಡಿಯೋ ಕಾಲ್ ಮೂಲಕ ತಂದೆಯ ಅಂತ್ಯಸಂಸ್ಕಾರ ವೀಕ್ಷಿಸಿದ ವಿದ್ಯಾರ್ಥಿನಿ
ಶಿವಮೊಗ್ಗ: ಎಸ್ಎಸ್ಎಲ್ಸಿ ಪರೀಕ್ಷೆ (SSLC Exams 2023) ಬರೆಯುತ್ತಿರುವ ವಿದ್ಯಾರ್ಥಿನಿಯ ಕರುಣಾಜನಕ ಕಥೆ ಇದು. ಗುರುವಾರ ಇಂಗ್ಲಿಷ್ ಪರೀಕ್ಷೆ ಬರೆದ ನಂತರ ಪರೀಕ್ಷಾ ಕೊಠಡಿಯಿಂದ ಹೊರಬಂದು ತನ್ನ ತಂದೆಯ ಅಂತ್ಯಸಂಸ್ಕಾರವನ್ನು ವಿಡಿಯೋ ಕಾಲ್ ಮೂಲಕ ವೀಕ್ಷಿಸಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಗೇರುಪುರದ ಹಿಂದುಳಿದ ವರ್ಗಗಳ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿ ಆರ್ಶಿಯಾ ಮನಿಯಾರ್ ತಂದೆಯನ್ನು ಕಳೆದುಕೊಂಡ ದುರ್ದೈವಿಯಾಗಿದ್ದಾಳೆ.
ಕೊಪ್ಪಳ ಮೂಲದ ಅರ್ಶಿಯಾಳ ತಂದೆ ಅಬಿದ್ ಪಾಷಾ ಅವರಿಗೆ ಬುಧವಾರ ರಾತ್ರಿ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದರು. ವಿಷಯ ತಿಳಿದ ಶಿಕ್ಷಕರು ತಕ್ಷಣ ಅರ್ಶಿಯಾಳನ್ನು ಕೊಪ್ಪಳಕ್ಕೆ ಕರೆದೊಯ್ದಿದ್ದಾರೆ. ಸುಮಾರು 7,00 ಕಿಮೀ ದೂರ ಪ್ರಯಾಣಿಸಿ ಅರ್ಶಿಯಾಳಿಗೆ ತನ್ನ ತಂದೆಯ ಮೃತದೇಹದ ದರ್ಶನ ಮಾಡಿಸಿ ಮತ್ತೆ ಪರೀಕ್ಷೆ ಬರೆಯಲು ಶಿಕ್ಷಕರು ಸಹಕರಿಸಿದ್ದಾರೆ.
ತನ್ನ ತಂದೆಯ ಪಾರ್ಥಿವ ಶರೀರದ ದರ್ಶನ ಪಡೆದ ನಂತರ ಅರ್ಶಿಯಾ ಇಂಗ್ಲಿಷ್ ಪರೀಕ್ಷೆ ಬರೆಯಲು ಮುಂದಾಗಿದ್ದಾಳೆ. ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿನಿಗೆ ಶಿಕ್ಷಕರು ವಿಡಿಯೋ ಕಾಲ್ ಮೂಲಕ ಶವಸಂಸ್ಕಾರ ವೀಕ್ಷಣೆಗೆ ಅನುವುಮಾಡಿಕೊಟ್ಟಿದ್ದಾರೆ. ಮೊಬೈಲ್ನಲ್ಲಿ ತಂದೆಯ ಶವಸಂಸ್ಕಾರ ವೀಕ್ಷಿಸಿದ ವಿದ್ಯಾರ್ಥಿನಿ ಕಣ್ಣೀರಿಟ್ಟಿದ್ದಾಳೆ.
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:22 pm, Fri, 7 April 23