ಕೋವಿಡ್ ವೇಳೆ ನೇಮಿಸಿಕೊಂಡ ಸ್ವಚ್ಚತಾ ಸಿಬ್ಬಂದಿ ಏಕಾಏಕಿ ವಜಾ; ನ್ಯಾಯಕ್ಕಾಗಿ ಒಂದು ವರ್ಷದಿಂದ ಧರಣಿ
ಆಸ್ಪತ್ರೆಯ ಸ್ವಚ್ಚತೆಗೆಂದು ಮೂರು ವರ್ಷದ ಹಿಂದೆ ಅಲ್ಲಿ 96 ಸಿಬ್ಬಂದಿಯನ್ನ ನೇಮಕ ಮಾಡಿಕೊಂಡರು. ಮಹಾಮಾರಿ ಕೋವಿಡ್ ಸಮಯದಲ್ಲಿ ಅವರೆಲ್ಲ ಜೀವದ ಹಂಗುತೊರೆದು ಆಸ್ಪತ್ರೆ ಸ್ವಚ್ಚಗೊಳಿಸೋ ಕೆಲಸ ಮಾಡಿದರು. ಆದರೆ ಕೋವಿಡ್ ಸೋಂಕು ಕಡಿಮೆಯಾಗುತ್ತಿದಂತೆ ಅವರನ್ನೀಗ ಕೆಲಸದಿಂದ ತೆಗೆದು ಹಾಕಿದ್ದಾರೆ. ಹೀಗಾಗಿ ನಮ್ಮನ್ನ ವಾಪಸ್ಸು ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಆಸ್ಪತ್ರೆಯ ಮುಂದೆ 377 ದಿನದಿಂದ ಅಹೋರಾತ್ರಿ ಧರಣಿ ಕುಳಿತಿದ್ದಾರೆ.
ಬೀದರ್: ಕೋವಿಡ್ ಸಮಯದಲ್ಲಿ ಆಸ್ಪತ್ರೆ ಸ್ವಚ್ಚತಾ ಕಾರ್ಯಕ್ಕೆ ಬಳಸಿಕೊಂಡು ಈಗ ಕೆಲಸದಿಂದ ವಜಾ. ಒಂದು ವರ್ಷದಿಂದ ಬೀದರ್ನ ಬ್ರೀಮ್ಸ್(Bidar BRIMS ) ಎದುರು ಗುತ್ತಿಗೆ ನೌಕರರಿಂದ ಅಹೋ ರಾತ್ರಿ ಧರಣಿ. ಇವರ ಧರಣಿಯಿಂದ ಗಬ್ಬೆದ್ದು ಹೋದ ಬ್ರೀಮ್ಸ್ ಆಸ್ಪತ್ರೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ಅವರನ್ನ ಆಸ್ಪತ್ರೆಯ ಸ್ವಚ್ಚತೆಗೆ ಬಳಸಿಕೊಂಡು ಕೋವಿಡ್ ಕಡಿಮೆಯಾಗುತ್ತಿದಂತೆ ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶ. ಹೌದು ಇಲ್ಲಿ ಪ್ರತಿಭಟನೆ ಕುಳಿತಿರುವ ಇವರೆಲ್ಲ ಕಳೆದ ಮೂರು ವರ್ಷದ ಹಿಂದೆ ಕೋವಿಡ್ ಸಮಯದಲ್ಲಿ ಆಸ್ಪತ್ರೆ ಹಾಗೂ ಕೋವಿಡ್ ವಾರ್ಡ್ ಸ್ವಚ್ಚತೆಗೆಂದು 80 ಜನ ಮಹಿಳಾ ಸ್ವಚ್ಚತೆಯ ಕೆಲಸಕ್ಕೆ ಹಾಗೂ 16 ಜನ ಪುರುಷರನ್ನ ಆಸ್ಪತ್ರೆಯ ಸ್ವಚ್ಚತೆಗಾಗಿ ಬ್ರೀಮ್ಸ್ನ ನಿರ್ದೇಶಕರು ಅವರನ್ನ ಗುತ್ತಿಗೆಯಾಧಾರದಲ್ಲಿ ನೇಮಕಾತಿ ಮಾಡಿಕೊಂಡಿದ್ದರು. ಇವರೆಲ್ಲರೂ ಕೂಡ ಜೀವದ ಹಂಗುತೊರೆದು ಆಸ್ಪತ್ರೆ ಸ್ವಚ್ಚತೆ, ಕೋವಿಡ್ ವಾರ್ಡ್ ಸ್ವಚ್ಚತೆಯನ್ನ ಮಾಡಿಕೊಂಡಿದ್ದರು. ಆದರೆ ಈಗ ಮಾಹಾಮಾರಿ ಕೋವಿಡ್ ಸೋಂಕು ಕಡಿಮೆಯಾಗುತ್ತಿದಂತೆ ಆಸ್ಪತ್ರೆಯ ಸ್ವಚ್ಚತೆಗೆಂದು ನೇಮಕಾತಿ ಮಾಡಿಕೊಂಡಿದ್ದ ಎಲ್ಲಾ 96 ಸ್ವಚ್ಚತಾ ಸಿಬ್ಬಂದಿಯನ್ನ ನಿಮ್ಮ ಗುತ್ತಿಗೆ ನೇಮಕಾತಿ ಅವಧಿ ಮುಗಿದಿದೆ ನೀವು ಕೆಲಸಕ್ಕೆ ಬರಬೇಡಿ ಎಂದು ಹೇಳುತ್ತಿದ್ದಾರೆ.
ಇನ್ನು ಇದರ ಪರಿಣಾಮವಾಗಿ ಈಗ ಇವರೆಲ್ಲರೂ ನಮ್ಮನ್ನ ಮತ್ತೆ ನೌಕರಿಗೆ ತೆಗೆದುಕೊಳ್ಳಿ ಎಂದು ಕಳೆದ 377 ದಿನದಿಂದ ಅಹೋರಾತ್ರಿ ಧರಣಿಯನ್ನ ಬೀದರ್ನ ಬ್ರೀಮ್ಸ್ ಆಸ್ಪತ್ರೆಯ ಮುಂದೆ ಧರಣಿಗೆ ಕುಳಿತುಕೊಂಡಿದ್ದು, ಈ ಅಸಹಾಯಕ ಹೆಣ್ಣುಮಕ್ಕಳಿಗೆ ದಲಿತ ಪರ ಸಂಘಟೆನೆಯ ಕಾರ್ಯಕರ್ತರು ಸಾಥ್ ಕೊಟ್ಟಿದ್ದು, ಕಾರಣ ವಿಲ್ಲದೆ ಏನನ್ನೂ ಹೇಳದೆ ಇವರೆಲ್ಲರನ್ನ ಕೆಲಸದಿಂದ ತೆಗೆದುಹಾಕಿದ್ದು ಖಂಡನೀಯ ಮತ್ತೆ ಅವರನ್ನ ನೇಮಕ ಮಾಡಿಕೊಳ್ಳುವ ವರೆಗೂ ಧರಣಿ ಮುಂದುವರೆಸುತ್ತೇವೆಂದು ಹೇಳುತ್ತಿದ್ದಾರೆ.
ಎರಡು ವರ್ಷ ಇಡೀ ವಿಶ್ವದಲ್ಲಿ ಕೋವಿಡ್ ಸೋಂಕು ಜನರನ್ನ ತಲ್ಲಣಗೊಳಿಸಿತ್ತು. ಅದೆಷ್ಟೋ ಜನರು ಕೋವಿಡ್ ನಿಂದ ತಮ್ಮ ಸಂಬಧಿಗಳನ್ನ ಬಂದು ಬಳಗದವರನ್ನ ಕಳೆದುಕೊಂಡು ಆನಾಥವಾಗಿದ್ದಾರೆ. ಲಕ್ಷಾಂತರ ಜನರು ಆಸ್ಪತ್ರೆಗೆ ದಾಖಲಾಗಿ ಕೋವಿಡ್ನಿಂದ ಗುಣಮುಖರಾಗಿ ಈಗ ಆರೋಗ್ಯವಾಗಿದ್ದಾರೆ. ಲಕ್ಷಾಂತರ ಜನ ಕೋವಿಡ್ ಸೋಂಕಿತರು ಗುಣಮುಖರಾಗಲು ಕಾರಣಿಕರ್ತರಾದವರು ವೈದ್ಯರು, ನರ್ಸ್ಗಳು, ಶುಶ್ರೋಷಾಧಿಕಾರಿಗಳು, ಹೀಗಾಗಿಯೇ ಸರಕಾರ ಕೋವಿಡ್ ವಾರಿಯರ್ ಎಂದು ಕರೆಯುವ ಮೂಲಕ ಅವರಿಗೆ ಗೌರವ ಕೂಡ ಕೊಟ್ಟಿದೆ. ಜೀವದ ಹಂಗು ತೊರೆದು ಕೆಲಸ ಮಾಡಿದ ಕೋವಿಡ್ ವಾರ್ಡ್ನಲ್ಲಿ ಕೆಲಸ ಮಾಡಿದ ಸ್ವಚ್ಚತಾ ಕಾರ್ಮಿರುಗಳು ಈಗ ಕೆಲಸ ಕಳೆದುಕೊಂಡು ಬೀದಿಗೆ ಬಿಳುವಂತಾಗಿದೆ.
ಎಂತಹ ಸಂಕಷ್ಟದ ಸಮಯದಲ್ಲಿಯೂ ಅವರು ಎದೆಗುಂದದೆ ಕೋವಿಡ್ ವಾರ್ಡ್ ಸ್ವಚ್ಚತೆ ಕಾರ್ಯಮಾಡಿದ್ದಾರೆ. ಆದರೆ ಅಂತಹವರನ್ನ ಏನನ್ನು ಹೇಳದೆ, ಕೇಳದೆ ಏಕಾಏಕಿ ಕೆಲಸದಿಂದ ಬರಬೇಡಿ ಎಂದು ಹೇಳಿದ್ದರ ಪರಿಣಾಮವಾಗಿ ಇವರೆಲ್ಲ ಪ್ರತಿಭಟನೆ ಮಾಡುವ ಹಾಗಾಗಿದೆ. ಇನ್ನೂ ಇವರನ್ನ ಕೆಲಸದಿಂದ ತೆಗೆದು ಹಾಕುವ ಮುನ್ನ ಇವರೆಲ್ಲರ ಜೊತೆಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮೀಟಿಂಗ್ ಮಾಡಿ ನಿಮ್ಮ ಗುತ್ತಿಗೆ ಅವಧಿ ಮುಗಿದಿದೆ. ಇನ್ನೊಂದು ಸಲ ಟೆಂಡರ್ ಕರೆದಾಗ ಮತ್ತೆ ನಿಮ್ಮನೇ ಕೆಲಸಕ್ಕೆ ತೆಗೆದುಕೊಳ್ಳುತ್ತೆವೆಂದು ಅವರಿಗೆ ಆಸ್ವಾಸನೆಯನ್ನ ಕೊಟ್ಟಿದರೇ, ಇವರು ಕೂಡ ಹೀಗೆ ಪ್ರತಿಭಟನೆ ಮಾಡುವ ಗೋಜಿಗೆ ಹೋಗುತ್ತಿರಲಿಲ್ಲ. ಆದರೆ ಏಕಾಏಕಿ ನೀವು ಕೆಲಸಕ್ಕೆ ಬರಬೇಡಿ ಎಂದರೆ ನಮ್ಮ ಕುಟುಂಬ ಬದುಕೋದಾದರು ಹೇಗೆಂದು ಇವರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ:ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಯ ಮೇಲೆ ಅತ್ಯಾಚಾರ, ಆರೋಪಿ ಅರೆಸ್ಟ್
ಕಳೆದ ಎರಡು ವರ್ಷದಿಂದ ಬರುವ ಸಂಬಳದಲ್ಲಿ ಚನ್ನಾಗಿದ್ದೇವು. ಆದರೆ, ಈಗ ಕೆಲಸ ಹೋಗಿದೆ ನಾವು ಹೊಟ್ಟೆಗೆ ಏನು ತಿನ್ನಬೇಕು. ಹೀಗಾಗಿ ನಮ್ಮನ್ನ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಇಲ್ಲಿನ ಮಹಿಳೆಯರು ಮನವಿ ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಸೋಂಕಿತರ ಬಳಿ ತಮ್ಮ ಸಂಬಂಧಿಗಳೆ ಹೋಗಲು ಹಿಂದೆಟು ಹಾಕಿದ್ದರು. ಇಂತಹ ಸಮಯದಲ್ಲಿ ಸೋಂಕಿತರಿಗೆ ಧೈರ್ಯ ಹೇಳಿ ಅವರ ರೂಮ್ಗಳನ್ನ ಅವರು ಬೇಡ್ ಸೀಟ್ ಗಳನ್ನ ಬದಲಾಯಿಸಿದವರು ಸ್ವಚ್ಚತಾ ಕಾರ್ಮಿಕರುಗಳು. ಆದರೆ, ಬ್ರೀಮ್ಸ್ ನಿರ್ದೇಶಕರು ಏಕಾಏಕಿ ಸ್ವಚ್ಚತಾ ಕಾರ್ಮಿಕರಿಗೆ ಕೆಲಸದಿಂದ ತೆಗೆದು ಹಾಕಿದ್ದು ಅವರನ್ನ ಆಕ್ರೋಶಗೊಳ್ಳುವಂತೆ ಮಾಡಿದೆ.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ