ಬೆಂಗಳೂರು, ಡಿಸೆಂಬರ್ 18: ರಾಜ್ಯದಲ್ಲಿ ಎಷ್ಟು ಜನಸಂಖ್ಯೆ ಇದೆಯೋ ಸುಮಾರು ಅಷ್ಟೇ ವಾಹನಗಳನ್ನು ಕೂಡ ಜನ ಖರೀದಿ ಮಾಡಿದ್ದಾರೆ. ಒಂದೊಂದು ಮನೆಯಲ್ಲೂ ಕೂಡ ಮೂರ್ನಾಲ್ಕಕ್ಕಿಂತ ಹೆಚ್ಚು ವಾಹನಗಳಿವೆ. ಇತ್ತೀಚೆಗಂತೂ ಎಲ್ಲವೂ ಡಿಜಿಟಲ್ ಯುಗ ಆಗಿ ಹೋಗಿದೆ. ಇದಕ್ಕೆ ಪೂರಕವಾಗುವಂತೆ ಈಗಾಗಲೇ ಸಾರಿಗೆ ಇಲಾಖೆ 2019 ರ ಮಾರ್ಚ್ – 31 ರ ಹಿಂದಿನ ಹಳೆಯ ಎರಡು ಕೋಟಿಗೂ ಹೆಚ್ಚಿನ ವಾಹನಗಳಿಗೆ ಹೈಟೆಕ್ ಟಚ್ ಕೊಡಲು ಸಿದ್ಧವಾಗಿತ್ತು. ಆದರೆ ಯಾಕೋ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮಾತ್ರ ಸಿದ್ಧವಿಲ್ಲ. ಈಗಾಗಲೇ ಸಾರಿಗೆ ಇಲಾಖೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಐದು ಬಾರಿ ಗಡುವು ವಿಸ್ತರಣೆ ಮಾಡಿದೆ. ಈ ಬಾರಿ ಕೊನೆಯದಾಗಿ ಡಿಸೆಂಬರ್ 31 ರವರೆಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಗಡುವು ಕೊಟ್ಟಿದೆ. ಗಡುವು ಮುಗಿದ ಕೂಡಲೇ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿತ್ತು. ಆದರೆ, ಇದಕ್ಕೆ ಸದ್ಯ ಹೈಕೋರ್ಟ್ ರಿಲೀಫ್ ನೀಡಿದೆ.
ಮುಂದಿನ ಆದೇಶದ ವರೆಗೂ ವಾಹನ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಈ ಬಗ್ಗೆ ಮಾತನಾಡಿದ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ, ಕೋರ್ಟ್ ಡಿಸೆಂಬರ್ 31 ರ ವರೆಗೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ. ಮುಂದಿನ ಆದೇಶದ ಬಳಿಕ ಕೋರ್ಟ್ ಯಾವ ಸೂಚನೆ ನೀಡುತ್ತದೆಯೋ ಅದನ್ನು ನಾವು ಪಾಲನೆ ಮಾಡುತ್ತೇವೆ ಎಂದಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಎರಡು ಕೋಟಿ ವಾಹನಗಳ ಪೈಕಿ ಇಲ್ಲಿಯವರೆಗೆ 56.40 ಲಕ್ಷ ವಾಹನಗಳಿಗೆ ಮಾತ್ರ ಹೆಚ್ಎಸ್ಆರ್ಪಿ ಆಳವಡಿಕೆ ಮಾಡಲಾಗಿದೆ. ಇನ್ನೂ 1.44 ಕೋಟಿ ಹಳೆಯ ವಾಹನಗಳು ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಸಿಕೊಳ್ಳಬೇಕಿದೆ. ಇನ್ನು ಹೆಚ್ಚಿನ ವಾಹನ ಮಾಲೀಕರು ಹೆಚ್ಎಸ್ಆರ್ಪಿ ಆಳವಡಿಕೆಗೆ ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಸಾರಿಗೆ ಇಲಾಖೆಯು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅರಿವು ಮೂಡಿಸಲು ಶಿಬಿರಗಳನ್ನು ಆಯೋಜನೆ ಮಾಡಲು ತೀರ್ಮಾನ ಮಾಡಿದೆ.
ಇದನ್ನೂ ಓದಿ: ಆನ್ಲೈನ್ ಇನ್ವೆಸ್ಟ್ಮೆಂಟ್ ಮಾಡುವ ಮುನ್ನ ಎಚ್ಚರ ಎಚ್ಚರ..ಬೆಂಗಳೂರಿನಲ್ಲಿ ನಕಲಿ ಗ್ಯಾಂಗ್ ಪತ್ತೆ
ಒಟ್ಟಿನಲ್ಲಿ ಹೈಕೋರ್ಟ್ ನಿರ್ದೇಶನ ನೀಡುವರೆಗೆ ವಾಹನ ಮಾಲೀಕರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬಾರದು. ಜೊತೆಗೆ ದಂಡ ವಿಧಿಸಬಾರದು ಎಂದು ಸಾರಿಗೆ ಇಲಾಖೆಗೆ ಹೈಕೋರ್ಟ್ ಖಡಕ್ ಸೂಚನೆ ನೀಡಿರುವುದು ವಾಹನ ಸವಾರರನ್ನು ನಿರಾಳರನ್ನಾಗಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:50 am, Wed, 18 December 24