ಪುರಾಣ ಪ್ರಸಿದ್ದ ಕ್ಷೇತ್ರ ಗೋಕರ್ಣದಲ್ಲಿ ಪಾರ್ಕಿಂಗ್​ ತಲೆನೋವು..

| Updated By: ಆಯೇಷಾ ಬಾನು

Updated on: Dec 31, 2020 | 6:38 AM

ವಾಹನ ದಟ್ಟನೆಯ ಜೊತೆ ಪಾರ್ಕಿಂಗ್ ಸಮಸ್ಯೆಯ ಬಹುದೊಡ್ಡ ವ್ಯಥೆಯಾಗಿದೆ. ಒಂದು ಕಾಲದಲ್ಲಿ ಬಸ್ ನಿಲ್ದಾಣವೇ ಇಲ್ಲಿನ ರಥಬೀದಿಯಲ್ಲಿತ್ತು. ಎಲ್ಲಾ ವಾಹನಗಳು ಓಡಾಡುತ್ತಿದ್ದವು. ಆದರೆ ಸಂಚಾರ ದಟ್ಟಣೆ ಇರುತ್ತಿರಲಿಲ್ಲ.

ಪುರಾಣ ಪ್ರಸಿದ್ದ ಕ್ಷೇತ್ರ ಗೋಕರ್ಣದಲ್ಲಿ ಪಾರ್ಕಿಂಗ್​ ತಲೆನೋವು..
ಬೀಚ್ ಆವರಣದಲ್ಲಿ ವಾಹನಗಳ ಪಾರ್ಕಿಂಗ್
Follow us on

ಕಾರವಾರ: ಗೋಕರ್ಣಕ್ಕೆ ಆಗಮಿಸುವ ಪ್ರವಾಸಿಗರಿಗೆ ಗಾಡಿ ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಇಲ್ಲಿನ ರಥಬೀದಿ ಮತ್ತು ಬಸ್ ನಿಲ್ದಾಣದ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದ್ದು, ಇವರನ್ನು ನಿಯಂತ್ರಿಸಲು ಪೊಲೀಸ್ ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಹನ ದಟ್ಟನೆಯ ಜೊತೆ ಪಾರ್ಕಿಂಗ್ ಸಮಸ್ಯೆಯ ಬಹುದೊಡ್ಡ ವ್ಯಥೆಯಾಗಿದೆ. ಒಂದು ಕಾಲದಲ್ಲಿ ಬಸ್ ನಿಲ್ದಾಣವೇ ಇಲ್ಲಿನ ರಥಬೀದಿಯಲ್ಲಿತ್ತು. ಎಲ್ಲಾ ವಾಹನಗಳು ಓಡಾಡುತ್ತಿದ್ದವು. ಆದರೆ ಸಂಚಾರ ದಟ್ಟಣೆ ಇರುತ್ತಿರಲಿಲ್ಲ. ಕಾರಣ ಇಷ್ಟೊಂದು ವಸತಿ ಗೃಹಗಳಿರಲಿಲ್ಲ. ಕಾಲಕ್ಕೆ ತಕ್ಕಂತೆ ಬದಲಾಗುವುದು ಸಹಜವಾದರೂ, ಕನಿಷ್ಠ ವಸತಿ ಗೃಹ ನಿರ್ಮಿಸುವವರು ಪ್ರವಾಸಿಗರ ವಾಹನ ನಿಲುಗಡೆಗೆ ಜಾಗ ಬಿಟ್ಟು ಕಟ್ಟಡ ನಿರ್ಮಿಸಬಹುದಿತ್ತು ಎನ್ನುತ್ತಾರೆ ಸಾರ್ವಜನಿಕರು. ಅಲ್ಲದೇ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾದ ಸ್ಥಳೀಯ ಆಡಳಿತ ಕಣ್ಣುಮುಚ್ಚಿ ಕುಳಿತಿದೆ ಎನ್ನುತ್ತಾರೆ.

ಬಸ್ ನಿಲ್ದಾಣದ ಪಾರ್ಕಿಂಗ್ ಪ್ರಹಸನ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಈ ಹಿಂದೆ ಖಾಸಗಿಯವರಿಗೆ ಟೆಂಡರ್ ಮೂಲಕ ಪ್ರವಾಸಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಅಧಿಕ ಸಂಖ್ಯೆಯಲ್ಲಿ ವಾಹನಗಳು ನಿಲ್ಲುವುದರ ಜೊತೆ ಕಸ, ತ್ಯಾಜ್ಯಗಳ ರಾಶಿ ಬೀಳುತ್ತಿದ್ದು, ಇದನ್ನು ಟೆಂಡರ್ ಪಡೆದವರೇ ಸ್ವಚ್ಚಗೊಳಿಸಬೇಕಾಗಿತ್ತು. ಆದರೆ ಇದೀಗ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಟೆಂಡರ್ ಅವಧಿ ಮುಗಿದ ಕಾರಣ ಖಾಸಗಿ ವಾಹನ ನಿಲುಗಡೆಗೆ ಸಂಸ್ಥೆ ನಿರ್ಬಂಧ ವಿಧಿಸಿ ವಾಹನ ನಿಲುಗಡೆ ಸ್ಥಳದ ಸುತ್ತ ಕಾಲುವೆ ತೆಗೆದು ಇಟ್ಟಿದೆ.

ಕಳೆದೆರಡು ದಿನದಿಂದ ಪ್ರವಾಸಿ ವಾಹನಗಳು ಬಸ್ ನಿಲ್ದಾಣದಲ್ಲೇ ನಿಲ್ಲುತ್ತಿವೆ. ಇದರಿಂದ ನಿತ್ಯ ಪ್ರಯಾಣಿಕರಿಗೆ ಮತ್ತು ಬಸ್ ಹೊರತೆಗೆಯುವಾಗ ಚಾಲಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಇಷ್ಟೇ ಅಲ್ಲದೆ ರಾತ್ರಿ ಇಲ್ಲೇ ಉಳಿದು ಮುಂಜಾನೆ ಹೊರಡುವ ಬಸ್ ಚಾಲಕರು, ನಿರ್ವಾಹಕರಿಗೆ ರಾತ್ರಿ ಮಲಗಲು ತೊಂದರೆಯಾಗುತ್ತಿದೆ. ಈ ಬಗ್ಗೆ ಕುಮಟಾ ಘಟಕದ ಮುಖ್ಯಸ್ಥರನ್ನು ಟಿವಿ9 ದೂರವಾಣಿ ಮುೂಲಕ ಸಂಪರ್ಕಸಿದರೆ ಕರೆ ಸ್ವೀಕರಿಸುತ್ತಿಲ್ಲ.

ಇನ್ನಾದರೂ ಇತ್ತ ಗಮನ ಹರಿಸುತ್ತಾರಾ?
ಈ ನಡುವೆ ರಸ್ತೆ ಮಧ್ಯದಲ್ಲಿ ಹೊಂಡ ತೆಗೆದು ವಾಹನಗಳು ಪಾರ್ಕ್ ಮಾಡದಂತೆ ತಡೆದಿದ್ದು ಯಾವ ಉದ್ದೇಶಕ್ಕೆ ಎನ್ನುವುದೇ ಗೊತ್ತಾಗದಂತಾಗಿದೆ. ಉದ್ದೇಶ ಒಳ್ಳೆದಿದ್ದಲ್ಲಿ ಈ ಪರಿಯ ಪ್ರವಾಸಿಗರ ವಾಹನಕ್ಕಾದರೂ ನಿಲ್ಲಿಸಲು ಅನುವು ಮಾಡಬಾರದೇ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ. ಹೊಸ ವರ್ಷದ ಈ ಹೊತ್ತಿನಲ್ಲಿ ಬಾರೀ ಜನ ಬರುತ್ತಿರುವಾಗಲೇ ಪಾರ್ಕಿಂಗ್​ನಲ್ಲಿ ಹೊಂಡ ತೆಗೆದಿಟ್ಟಿದ್ದರಿಂದ ಎಲ್ಲಿ ಹೋಗಬೇಕು ಎನ್ನುವ ಪ್ರಶ್ನೆ ಪ್ರವಾಸಿಗರದ್ದಾಗಿದೆ.

ಪಾರ್ಕಿಂಗ್ ಜಾಗವಿಲ್ಲದೆ ಕೆಲವರು ಮುಖ್ಯ ಬೀಚ್ ಆವರಣಕ್ಕೆ ನೇರವಾಗಿ ವಾಹನಗಳನ್ನು ತೆಗೆದುಕೊಂಡು ಹೋಗಿ ನಿಲ್ಲಿಸುತ್ತಿದ್ದಾರೆ. ಹಾಗಾಗಿ ಬೀಚ್ ಆವರಣವೇ ವಾಹನಗಳಿಂದ ತುಂಬಿ ಹೋಗುತ್ತಿದೆ. ಅದೆಷ್ಟು ವರ್ಷದಿಂದ ಗೋಕರ್ಣದಲ್ಲಿ ಕಾಡುತ್ತಿರುವ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಸಿಗುವುದು ಯಾವಾಗ ಎನ್ನುವುದೇ ತಿಳಿಯದಾಗಿದೆ.

 

ಪಾರ್ಕಿಂಗ್​ ಸೌಕರ್ಯವಿದ್ದರೆ ಮಾತ್ರ ವಾಹನ ಖರೀದಿಗೆ ಅನುಮತಿ: ಬಿಡಿಎ ಚಿಂತನೆ